Kannada NewsLatest

ದೇಹ ಮತ್ತು ಚರ್ಮದಾನದ ಮೂಲಕ ಸಾವಿನಲ್ಲಿ ಸಾರ್ಥಕತೆ ಮೆರೆದ ಶಿವಲಿಂಗಪ್ಪ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:

ತಾಲ್ಲೂಕಿನ ಲಿಂಗನಮಠ ಗ್ರಾಮದ ನಿವಾಸಿ ಶಿವಲಿಂಗಪ್ಪ ಚನ್ನಪ್ಪ ಹಲಸಗಿ (72)
ಕಳೆದ ಬುಧವಾರ ಬೆಳಗಿನ ಜಾವ ನಿಧನರಾದರು.

ಮೃತರ ಅಣತಿಯಂತೆ ಅವರ ಕುಟುಂಬದ ಸದಸ್ಯರು ದೇಹ ಹಾಗೂ ಚರ್ಮವನ್ನು ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನವಾಗಿ ನೀಡಿದರು. ಈ ದಾನದ ಮೂಲಕ ಶಿವಲಿಂಗಪ್ಪ ಸಾವಿನಲ್ಲೂ ಸಾರ್ಥಕತೆ ಮೆರೆದರು.
ಗ್ರಾಮದಲ್ಲಿ  ನಡೆದ ಶಿವಲಿಂಗಪ್ಪ ಅವರ ಪಾರ್ಥೀವದ ಹಸ್ತಾಂತರ ಕಾರ್ಯಕ್ರಮ ಉದ್ದೇಶಿಸಿ
ಮಾತನಾಡಿದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ,
ಶಿವಲಿಂಗಪ್ಪ ಖಾನಾಪುರ ತಾಲ್ಲೂಕಿನ ಪ್ರಪ್ರಥಮ ಚರ್ಮದಾನಿಯಾಗಿದ್ದು, ತಮ್ಮ ಈ
ಮಹತ್ಕಾರ್ಯದ ಮೂಲಕ ಗಡಿಭಾಗವಾದ ಖಾನಾಪುರ ತಾಲ್ಲೂಕಿನಲ್ಲಿ ಚರ್ಮದಾನಕ್ಕೆ
ನಾಂದಿ ಹಾಡಿದ್ದಾರೆ.

ತಾವು ಮರಣಹೊಂದುವ ಮೊದಲು ತಮ್ಮ ಕುಟುಂಬಸ್ಥರಿಗೆ ದೇಹ ದಾನ ಮಾಡುವ  ಕುರಿತು ಲಿಖಿತವಾಗಿ ಬರೆದುಕೊಟ್ಟಿದ್ದರು. ಮೃತರ ಸಂಬಂಧಿಗಳು ಡಾ.ರಾಮಣ್ಣವರ ಟ್ರಸ್ಟ್ ಸಂಪರ್ಕಿಸಿ ದೇಹದಾನದ ಬಗ್ಗೆ ಮಾಹಿತಿ ನೀಡಿದ್ದರು. ಮೃತರಿಗೆ ಇಬ್ಬರು ಸಹೋದರರು, ಇಬ್ಬರು ಸಹೋದರಿಯರು, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.
ಎಲ್ಲರೂ ಮುಕ್ತಮನಸ್ಸಿನಿಂದ ದೇಹದಾನಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು
ಅಭಿಪ್ರಾಯ ಪಟ್ಟರು.
ಶಿವಲಿಂಗಪ್ಪ ಅವರ ನಿಧನದ ನಂತರ ಡಾ. ಮಹಾಂತೇಶ ರಾಮಣ್ಣವರ ಅವರು ಮೃತರ ಪಾರ್ಥೀವ ಶರೀರವನ್ನು
ತಮ್ಮ ಸುಪರ್ದಿಗೆ ಪಡೆದು ಮೃತರ ಚರ್ಮವನ್ನು ಕೆ.ಎಲ್.ಇ ಸಂಸ್ಥೆಯ ರೋಟರಿ ಸ್ಕಿನ್
ಬ್ಯಾಂಕ್ ಗೆ ದಾನ ಮಾಡುವುದಾಗಿ ಮತ್ತು ದೇಹವನ್ನು ಬೆಳಗಾವಿಯ ವೈದ್ಯಕೀಯ ವಿಜ್ಞಾನ
ಸಂಸ್ಥೆಗೆ (ಬಿಮ್ಸ್) ಗೆ ದಾನ ಮಾಡಲಾಗುವುದು ಎಂದು ತಿಳಿಸಿದರು.

ಬಳಿಕ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿ ದೇಹದಾನ ಮತ್ತು   ಚರ್ಮದಾನ ಮಹತ್ವದ ಬಗ್ಗೆ
ಜಾಗೃತಿ ಮೂಡಿಸಿದರು.
ವ್ಯಕ್ತಿ ಮರಣಾನಂತರದ ಆರು ಘಂಟೆಗಳೊಳಗೆ ಚರ್ಮವನ್ನು ದಾನ ಮಾಡಬಹುದು. ಮೃತದೇಹದ ಕಾಲು
ಮತ್ತು ತೊಡೆಯ ಭಾಗದಿಂದ ಚರ್ಮದ ಮೇಲ್ಪದರವನ್ನು ಪಡೆಯಲಾಗುತ್ತದೆ. ಚರ್ಮ ತೆಗೆದ
ಭಾಗದಿಂದ ರಕ್ತ ಸ್ರಾವ ಉಂಟಾಗುವುದಿಲ್ಲ ಮತ್ತು ದೇಹವು ವಿರೂಪಗೊಳ್ಳುವುದಿಲ್ಲ.

ಬೆಂಕಿ ಅವಘಡಗಳಿಂದ ಆದ ಸುಟ್ಟಗಾಯಗಳಾಗಿ ನರಳುತ್ತಿರುವವರಿಗೆ, ಅಸಿಡ್ ದಾಳಿ, ಸಿಲೆಂಡರ್ ಸ್ಟೋ
ಸ್ಪೋಟ್, ವಿದ್ಯುತ್ ಅವಘಡಗಳಿಂದ ಸುಟ್ಟ  ಪ್ರಕರಣಗಳಲ್ಲಿ ನೆರಳುವ ಗಾಯಾಳುಗಳಿಗೆ ಇಂತಹ
ಚರ್ಮವನ್ನು ಗಾಯದ ಮೇಲೆ ಇಡುವುದರಿಂದ ಶೀಘ್ರ ಗುಣಮುಖರಾಗುತ್ತಾರೆ.

ದಾನಿಗಳಿಂದ ಸಂಗ್ರಹಿಸಿದ ಚರ್ಮವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಗಾಯಾಳುಗಳಿಗೆ
ಉಪಯೋಗಿಸಲಾಗುವುದು. ರೋಟರಿ ಸ್ಕಿನ್ ಬ್ಯಾಂಕ್ ಗೆ ಈಗಾಗಲೇ 6 ಜನರು ಚರ್ಮದಾನ
ಮಾಡಿದ್ದಾರೆ. ಮರಣಾನಂತರವೂ ಅವಶ್ಯಕ ವ್ಯಕ್ತಿಗಳಿಗೆ ಅಂಗಗಳನ್ನು ಕಸಿಮಾಡಿ ನೊಂದವರ
ಬಾಳಿಗೆ ಬೆಳಕಾಗಿ ಸಾವಿನಲ್ಲಿಯೂ ಜೀವನ ಸಾರ್ಥಕತೆ ಪಡೆಯಲು ದೇಹ, ಅಂಗಾಂಗಳ ದಾನ
ಮಾಡಬೇಕು. ಚರ್ಮದಾನ ಹಾಗೂ ದೇಹದಾನ ಮಾಡಲು ಇಚ್ಛಿಸುವವರು ಮೊ 9242496497 ಗೆ
ಸಂಪರ್ಕಿಸುವಂತೆ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಈಶ್ವರ ಸಂಪಗಾವಿ, ರವೀಂದ್ರ ಬಾಗೇವಾಡಿ, ಚಂಬಣ್ಣ
ಪಾಟೀಲ, ನೀಲಕಂಠ ಉಳವಿ, ವಿರೂಪಾಕ್ಷಿ ಮಾಟೊಳ್ಳಿ, ಕಾಸೀಂ ಹಟ್ಟಿಹೊಳಿ ಸೇರಿದದಂತೆ
ಲಿಂಗನಮಠ, ಕಕ್ಕೇರಿ ಮತ್ತು ಸುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button