Kannada NewsLatest

ಗಡಿ ಕಿಚ್ಚು: ಡಿ.14ರಂದು ಕರ್ನಾಟಕ- ಮಹಾರಾಷ್ಟ್ರ ಸಿಎಂಗಳೊಂದಿಗೆ ಅಮಿತ್ ಶಾ ಚರ್ಚೆ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಡಿ.14ರಂದು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುವುದಾಗಿ ತಮ್ಮನ್ನು ಭೇಟಿಯಾದ ಮಹಾರಾಷ್ಟ್ರ ಏಕೀಕರಣ ಅಘಾಡಿ, ಸಂಸದರ ನಿಯೋಗಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.

ಗುಜರಾತ್ ನಲ್ಲಿ ನೂತನ ಸರಕಾರದ ಪ್ರಮಾಣವಚನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಈ ಕುರಿತು ಮಾತುಕತೆ ನಡೆಸುವುದಾಗಿ ಅಮಿತ್ ಶಾ ತಿಳಿಸಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ ಅಮಿತ್ ಶಾ ಎದುರು ಗಡಿ ಗೋಳು ತೋಡಿಕೊಂಡ ಮಹಾ ಸಂಸದರ ನಿಯೋಗ ಕರ್ನಾಟಕವೇ ಗಡಿ ವಿವಾದ ಕೆದಕಿದೆ ಎಂದು ಬಿಂಬಿಸುವ ಮೂಲಕ ದಿಕ್ಕು ತಪ್ಪಿಸುವ ಕೆಲಸ ಮಾಡಿದೆ.

ಕರ್ನಾಟಕ ರಕ್ಷಣಾ ವೇದಿಕೆಯೇ ಗಡಿ ವಿವಾದ ಕೆದಕಿ ಅನುಚಿತ ಘಟನೆಗಳಿಗೆ ಕಾರಣವಾಗಿದೆ ಎಂದು ಹೇಳಿರುವ ನಿಯೋಗ, ತನ್ನೆಲ್ಲ ಷಡ್ಯಂತ್ರಗಳನ್ನು ಮರೆಮಾಚಲು ಪ್ರಯತ್ನಿಸಿದೆ.

ಬಾರಾಮತಿ ಕ್ಷೇತ್ರದ ಸಂಸದೆ ಸುಪ್ರಿಯಾ ಸುಳೆ ಅವರು ಟಿವಿ ಚಾನೆಲ್ ಒಂದಕ್ಕೆ ಪ್ರತಿಕ್ರಿಯೆ ನೀಡಿ, ”ಗಡಿ ವಿಷಯದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಮಹಾರಾಷ್ಟ್ರದ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗಳ ಬಗ್ಗೆ ಹಾಗೂ ಮಹಾರಾಷ್ಟ್ರರಾಜ್ಯಪಾಲರು ಆಡುವ ಮಾತುಗಳ ಬಗ್ಗೆ ಅಮಿತ್ ಶಾ ಗಮನ ಸೆಳೆದಿದ್ದು ಇದಕ್ಕೆ ಅವರು ಪರಿಹಾರ ಸೂಚಿಸುವ ಭರವಸೆ ನೀಡಿದ್ದಾರೆ,” ಎಂದು ಹೇಳಿಕೊಂಡಿದ್ದಾರೆ.

ಇನ್ನೊಬ್ಬ ಸಂಸದ ಅಮೂಲ್ ಕೊಹ್ಲಿ ”ನಮ್ಮ ಅಹವಾಲುಗಳನ್ನು ಅಮಿತ್ ಶಾ ಅವರು ಅತ್ಯಂತ ಶಾಂತಚಿತ್ತರಾಗಿ ಆಲಿಸಿದ್ದು, ಅದಕ್ಕೆ ಪರಿಹಾರ ಕ್ರಮ ಸೂಚಿಸುವ ಭರವಸೆ ನೀಡಿದ್ದಾರೆ,” ಎಂದು ಹೇಳಿದ್ದಾರೆ.

ಈ ನಡುವೆ ಗಡಿ ವಿಷಯದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹಾಗೂ ಉದ್ಧವ್ ಠಾಕ್ರೆ ಮಧ್ಯೆ ಜಟಾಪಟಿ ಮುಂದುವರಿದಿದೆ. ”ಏಕನಾಥ ಶಿಂಧೆಯವರು ಗೋವಾ, ಸೂರತ್ ಮುಂತಾದೆಡೆ ಭೇಟಿ ನೀಡಿದಂತೆ ಬೆಳಗಾವಿಗೂ ಸ್ವತಃ ಭೇಟಿ ನೀಡಲಿ, ಅದಕ್ಕೆ ಅವರಿಗೆ ಪುರಸೊತ್ತಾಗಿಲ್ಲವೇ?,” ಎಂದು ಉದ್ಧವ್ ಠಾಕ್ರೆ ತಿವಿದಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿರುವ ಏಕನಾಥ ಶಿಂಧೆ, ”ನಮ್ಮ ಕೆಲಸಗಳೇ ಎಲ್ಲದಕ್ಕೂ ನಮ್ಮ ಉತ್ತರವಾಗಿರುತ್ತದೆ. ಠಾಕ್ರೆ ಬಣಕ್ಕೆ ಇದೀಗ ಕಾಲಡಿಯ ಉಸುಕು ಸರಿದ ಅನುಭವವಾಗುತ್ತಿದೆ. ಹೀಗಾಗಿ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾನು ಕರ್ನಾಟಕದಲ್ಲಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ 40 ದಿನ ಜೈಲಿನಲ್ಲಿದ್ದೆ. ಇವರು ಹೋಗಲಿ ನೋಡೋಣ,” ಎಂದು ಉಲ್ಟಾ ಚಾಟಿ ಬೀಸಿದ್ದಾರೆ.

ಒಟ್ಟಾರೆಯಾಗಿ ಗಡಿ ವಿವಾದದ ಬೆಂಕಿ ಹೊತ್ತಿಸಿ, ಇಬ್ಬರು ಸಚಿವರನ್ನು ಬೆಳಗಾವಿಗೆ ಕಳುಹಿಸಿ ದಳ್ಳುರಿ ಹೆಚ್ಚಿಸುವ ಪ್ರಯತ್ನದಲ್ಲಿದ್ದ ಮಹಾರಾಷ್ಟ್ರ ಕರ್ನಾಟಕ ಸರಕಾರದ ದಿಟ್ಟ ಹೆಜ್ಜೆಗೆ ಬೆದರಿ ಬಾಲ ಮುದುಡಿಕೊಳ್ಳುವ ಪರಿಸ್ಥಿತಿ ಮುಚ್ಚಿಕೊಳ್ಳಲು ನಾನಾ ರೀತಿಯ ನಾಟಕಗಳನ್ನು ರಚಿಸತೊಡಗಿದೆ.

ಮಹಾರಾಷ್ಟ್ರ ನಿಯೋಗದಿಂದ ಅಮಿತ್ ಶಾ ಭೇಟಿ: ಸಿಎಂ ಬೊಮ್ಮಾಯಿ ಟ್ವೀಟರ್ ಪ್ರತಿಕ್ರಿಯೆ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button