ಬಾವಿಯಲ್ಲಿ ಕೇಳುತ್ತಿದೆ ಮಗುವಿನ ಅಳುವಿನ ಶಬ್ಧ
ಪ್ರಗತಿವಾಹಿನಿ ಸುದ್ದಿ: ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಮಗು ಸಾತ್ವಿಕ್ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ತಲುಪಿದ್ದು, ಕೆಲವೇ ಸಮಯಗಳಲ್ಲಿ ಮಗುವನ್ನು ರಕ್ಷಣಾ ಸಿಬ್ಬಂದಿಗಳು ಸುರಕ್ಷಿತವಾಗಿ ಹೊರತೆಗೆಯಲಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಮನೆ ಬಳಿ ಆಟವಾಡುತ್ತಿದ್ದ 2 ವರ್ಷದ ಮಗು ಸಾತ್ವಿಕ್ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದೆ. ನಿನ್ನೆ ಸಂಜೆಯಿಂದ ಮಗು ರಕ್ಷಣೆಗಾಗಿ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ತಂಡ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಕೊಳವೆ ಬಾವಿಯ ಪಕ್ಕದಲ್ಲಿ ಅಡ್ಡಲಾಗಿ ಸುರಂಗ ಕೊರೆದು ಮಗುವನ್ನು ರಕ್ಷಿಸುವ ನಿಟ್ಟಿನಲ್ಲಿ ಯತ್ನಿಸಲಾಗಿದೆ. ಮಗು20 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದು, ಬಾವಿಯಲ್ಲಿ ಮಗು ಅಳುತ್ತಿರುವ ಶಬ್ಧ ಕೇಳುತ್ತಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.
ಮಗು ಇರುವ ಜಾಗ ತಲುಪಲು ಇನ್ನು ಒಂದು ಅಡಿ ಸುರಂಗ ಕೊರೆಯಬೇಕಿದೆ. ಬಂಡೆ ಅಡ್ಡಬಂದಿದ್ದರಿಂದ ಬಂಡೆ ಕೊರೆದು ಮಗು ಇದ್ದಲ್ಲಿಗೆ ತಲುಪಬೇಕಿದೆ. ಬಂಡೆ ಅಡ್ಡ ಬಂದಿರುವುದರಿಂದ ರಕ್ಷಣ ಕಾರ್ಯ ಕೊಂಚ ವಿಳಂಬವಾಗಿದೆ. ಕೆಲ ಸಮಯದಲ್ಲೇ ಮಗುವನ್ನು ಸುರಕ್ಷಿತವಾಗಿ ಹೊರತೆಗೆಯುವ ನಿರೀಕ್ಷೆ ಇದೆ.
ಘಟನಾ ಸ್ಥಳದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕೊಳವೆ ಬಾವಿಗೆ ಬಿದ್ದಿರುವ ಮಗು ಸುರಕ್ಷಿತವಾಗಿ ಹೊರಬರಲಿ ಎಂಬುದೇ ಎಲ್ಲರ ಪ್ರಾರ್ಥನೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ