
ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸುವಾಗ ಸಾಲು ಸಾಲು ಅನಾಹುತಗಳು ಸಂಭವಿಸುತ್ತಿವೆ. ಇಲ್ಲೋರ್ವ ಬಾಲಕ ಪಟಾಕಿ ಎಂದು ಭಾವಿಸಿ ಸಿಡಿಮದ್ದಿಗೆ ಬೆಂಕಿ ಹಚ್ಚಿದ್ದು, ಭೀಕರ ಸ್ಫೋಟಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ದೀಪಾವಳಿ ಹಬ್ಬದ ದಿನವೇ ಬಾಲಕ ಸಾವನ್ನಪ್ಪಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ದೀಪಾವಳಿ ಪಟಾಕಿ ಎಂದು ಕಾಡುಹಂದಿಗಳಿಗಾಗಿ ತಂದಿಟ್ಟಿದ್ದ ಸ್ಫೋಟಕ ಸಿಡಿಮದ್ದಿಗೆ ಬೆಂಕಿ ಹಚ್ಚಿದ 15 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಭೀಮರಾಯ ಮೃತ ಬಾಲಕ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಸ್ಫೋಟಕಗಳನ್ನು ತಂಡಿಟ್ಟಿದ್ದಲ್ಲದೇ ಅದನ್ನು ಮಕ್ಕಳ ಕೈಗೆ ಸಿಗುವಂತೆ ಇಟ್ಟಿರುವುದೇ ದುರಂತಕ್ಕೆ ಕಾರಣವಾಗಿದೆ.
ಕಾಡುಹಂದಿಗಳನ್ನ ಓಡಿಸಲು ತಂದಿಟ್ಟಿದ್ದ ಸ್ಫೋಟಕ ಎಂಬುದು ತಿಳಿಯದ ಬಾಲಕ ಪಟಾಕಿ ಎಂದುಕೊಂಡು ಬೆಂಕಿ ಹಚ್ಚಿಸಿದ್ದಾನೆ. ಅಷ್ಟರಲ್ಲೇ ಸ್ಫೋಟಗೊಂಡಿದ್ದು, ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ್ದಾನೆ.
ಸ್ಫೋಟದ ತೀವ್ರತೆಗೆ ಬಾಲಕನ ತಲೆ ಛಿದ್ರಛಿದ್ರವಾಗಿದೆ. ಮಗನನ್ನು ಕಳೆದುಕೊಂಡಿರುವ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




