CrimeKannada NewsKarnataka NewsLatest

*ಬಾಲಕನ ಅಪಹರಣ, ಕೊಲೆ ಪ್ರಕರಣ*: *UKಯಿಂದ ಬಂದ ಎಂ.ಟೆಕ್‌ ಪದವೀಧರನ ಭೀಕರ ಸಂಚು ಬಯಲು!*

ಪ್ರಗತಿವಾಹಿನಿ ಸುದ್ದಿ: ಹಣದ ಆಸೆಗೆ ನೆರೆಮನೆಯ ಬಾಲಕನನ್ನೇ ಅಪಹರಿಸಿ ಹತ್ಯೆ ಮಾಡಿದ ಆರೋಪ ಪ್ರಕರಣದಲ್ಲಿ ಯುಕೆ ಇಂದ ಎಂ.ಟೆಕ್ ಪೂರ್ಣಗೊಳಿಸಿ ಬಂದಿದ್ದ ವಾಕಾ ಭಾಸ್ಕರ್ ರೆಡ್ಡಿ ಹಾಗೂ ಕೊಂಡಲರೆಡ್ಡಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಭಾಸ್ಕರ್ ರೆಡ್ಡಿ ರೂಪಿಸಿದ್ದ ಸಂಚಿನ ಹಲವು ಅಂಶಗಳು ಬಯಲಾಗಿವೆ. ಬಾಲಕನನ್ನು ಅಪಹರಿಸುವ ಮೊದಲೇ ಹಣಕ್ಕೆ ಬೇಡಿಕೆ ಇಡುವ ರೀತಿಯಲ್ಲಿ ವಿಡಿಯೋಗಳನ್ನು ಸಿದ್ಧಪಡಿಸಿಕೊಂಡಿದ್ದ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪೊಲೀಸರ ವಿಚಾರಣೆ ವೇಳೆ ಭಾಸ್ಕರ್ ನೀಡಿದ ಹೇಳಿಕೆಯಂತೆ, ಬಾಲಕ ಪ್ರಜ್ವಲ್‌ನಿಂದ ಎರಡು ಪ್ರತ್ಯೇಕ ವಿಡಿಯೋಗಳನ್ನು ರೆಕಾರ್ಡ್ ಮಾಡಿಸಲಾಗಿತ್ತು. ಒಂದು ವಿಡಿಯೋದಲ್ಲಿ ಬಾಲಕ ಅಳುತ್ತಿರುವ ದೃಶ್ಯವಿದ್ದರೆ, ಮತ್ತೊಂದರಲ್ಲಿ ತನ್ನನ್ನು ಅಪಹರಿಸಲಾಗಿದ್ದು ಹಣ ನೀಡಿ ರಕ್ಷಿಸುವಂತೆ ಮನವಿ ಮಾಡುವಂತೆ ಹೇಳಿಸಲಾಗಿತ್ತು. ವಿಡಿಯೋ ಚಿತ್ರೀಕರಣದ ಬಳಿಕ ಬಾಲಕನನ್ನು ಹತ್ಯೆ ಮಾಡಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಬಾಲಕನ ಶವವನ್ನು ಬಿಸಾಡಿದ ಬಳಿಕ ಭಾಸ್ಕರ್, ಪ್ರಜ್ವಲ್‌ನ ಹುಡುಕಾಟ ನಡೆಸುತ್ತಿರುವಂತೆ ನಟಿಸಿದ್ದ ಎನ್ನಲಾಗಿದೆ. ಪೊಲೀಸರಿಗೆ ಸುಳಿವು ಸಿಗದಂತೆ ಮೆಜೆಸ್ಟಿಕ್‌ನಲ್ಲಿ ದಾಖಲೆಗಳಿಲ್ಲದೆ ನಕಲಿ ಸಿಮ್ ಕಾರ್ಡ್ ಪಡೆದು, ಅದರಿಂದ ಬಾಲಕನ ಪೋಷಕರಿಗೆ ವಿಡಿಯೋ ಕಳುಹಿಸಿ ಹಣಕ್ಕೆ ಬೇಡಿಕೆ ಇಡುವ ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಚಿನ ಹಿಂದೆ ಭಾಸ್ಕರ್‌ನ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಚಟ ಕಾರಣವಾಗಿತ್ತು ಎನ್ನಲಾಗಿದೆ. ಗೇಮಿಂಗ್ ಹಾಗೂ ಬೆಟ್ಟಿಂಗ್‌ನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಭಾಸ್ಕರ್, ಸಾಲ ತೀರಿಸಲು ಸುಲಭವಾಗಿ ಹಣ ಸಂಪಾದಿಸುವ ಯೋಜನೆ ರೂಪಿಸಿದ್ದ. ಪರಿಚಯವಿದ್ದ ನೆರೆಮನೆಯ ಬಾಲಕನನ್ನೇ ಗುರಿಯಾಗಿಸಿಕೊಂಡು, ಘಟನೆಯ ದಿನ ಆಮಿಷವೊಡ್ಡಿ ಕರೆದೊಯ್ದು ಹತ್ಯೆ ಮಾಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಬಾಲಕ ಜೀವಂತವಾಗಿದ್ದರೆ ತಾನು ಸಿಕ್ಕಿಬೀಳುವ ಸಾಧ್ಯತೆ ಇದೆ ಎಂಬ ಭಯದಿಂದಲೇ ಮೊದಲು ಹತ್ಯೆ ಮಾಡಿ, ಬಳಿಕ ಅಪಹರಣದ ನಾಟಕ ರೂಪಿಸಲು ಯೋಜಿಸಿದ್ದ ಎನ್ನಲಾಗಿದೆ. ಸದ್ಯ ಭಾಸ್ಕರ್ ರೆಡ್ಡಿ ಮತ್ತು ಕೊಂಡಲರೆಡ್ಡಿ ವಿರುದ್ಧ ತನಿಖೆ ಮುಂದುವರಿದಿದ್ದು, ಕೃತ್ಯದ ಹಿಂದಿನ ಸಂಪೂರ್ಣ ಸಂಚು ಹಾಗೂ ಹಣದ ಬೇಡಿಕೆಗೆ ಬಳಸಿದ ಡಿಜಿಟಲ್ ಸಾಕ್ಷ್ಯಗಳ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

*ಕ್ಷುಲ್ಲಕ ಕಾರಣಕ್ಕೆ ರೌಡಿಶೀಟರ್‌ ಬರ್ಬರ ಹತ್ಯೆ*: *7 ಮಂದಿಯ ಗ್ಯಾಂಗ್‌ನಿಂದ ಅಟ್ಯಾಕ್‌* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button