*ಸೌಜನ್ಯ ಪ್ರಕರಣದ ಎಸ್ಐಟಿ ಮುಖ್ಯಸ್ಥ ಶಶಿಕುಮಾರ್ ಬದಲಾವಣೆಗೆ ಬುರುಡೆ ಗ್ಯಾಂಗ್ ಒತ್ತಾಯ*

ಪ್ರಗತಿವಾಹಿನಿ ಸುದ್ದಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗೆ ಹೊಸ ತಿರುವು ಸಿಗುವ ಸಾಧ್ಯತೆ ಎದುರಾಗಿದೆ. ಎಸ್ಐಟಿ ಮುಖ್ಯಸ್ಥ ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರನ್ನು ಬದಲಾಯಿಸಬೇಕೆಂಬ ಒತ್ತಾಯ ತೀವ್ರಗೊಂಡಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ಮುಂದಾಗಿರುವ ಗುಂಪು, ಅದಕ್ಕೂ ಮುನ್ನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ.
ಶಶಿಕುಮಾರ್ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವುದರಿಂದ, ಸೌಜನ್ಯ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಾಗುತ್ತದೆಯೇ ಎಂಬ ಅನುಮಾನವಿದೆ ಎಂಬುದು ಗುಂಪಿನ ಪ್ರಮುಖ ವಾದವಾಗಿದೆ. ಹೀಗಾಗಿ ಪ್ರಸ್ತುತ ಎಸ್ಐಟಿ ಮುಖ್ಯಸ್ಥರನ್ನು ಬದಲಿಸಿ, ಪ್ರಕರಣದ ಸಮಗ್ರ ತನಿಖೆಯನ್ನು ಬೇರೊಬ್ಬ ಅಧಿಕಾರಿಗೆ ವಹಿಸಬೇಕು ಎಂದು ಆಗ್ರಹಿಸಲಾಗುತ್ತಿದೆ.
‘ಬುರುಡೆ ಗ್ಯಾಂಗ್’ ಎಂದು ಗುರುತಿಸಿಕೊಂಡಿರುವ ಗುಂಪು, ಶಶಿಕುಮಾರ್ ಅವರನ್ನು ಬದಲಾಯಿಸುವಂತೆ ಒತ್ತಾಯಿಸಿದೆ. ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮೊದಲು ಗೃಹ ಸಚಿವರು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ನೇರವಾಗಿ ಮಂಡಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು, ಶಶಿಕುಮಾರ್ ಸ್ಥಾನಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರನ್ನು ಹೊಸ ಎಸ್ಐಟಿ ಮುಖ್ಯಸ್ಥರನ್ನಾಗಿ ನೇಮಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಶಶಿಕುಮಾರ್ ಸಮರ್ಥ ಮತ್ತು ದಕ್ಷ ಅಧಿಕಾರಿ ಎಂದು ಪರಿಗಣಿಸಲಾಗಿದ್ದರೂ, ಹಿಂದಿನ ಕರ್ತವ್ಯದ ಸ್ಥಳದ ಆಧಾರದಲ್ಲಿ ಅವರನ್ನು ಬದಲಾಯಿಸುವ ಬೇಡಿಕೆ ಕುರಿತು ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ದಕ್ಷ ಅಧಿಕಾರಿಯನ್ನು ಹಿಂದೆ ಕೆಲಸ ಮಾಡಿದ್ದ ಜಿಲ್ಲೆಯ ಕಾರಣಕ್ಕೆ ಬದಲಾಯಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ.
ಸದ್ಯ ಸೌಜನ್ಯ ಪ್ರಕರಣದ ತನಿಖಾಧಿಕಾರಿಗಳ ಬದಲಾವಣೆ ವಿಚಾರವಾಗಿ ಕಾನೂನು ಹೋರಾಟ ಮತ್ತು ಸರ್ಕಾರದ ಮಟ್ಟದಲ್ಲಿ ಮನವಿ ಸಲ್ಲಿಸುವ ಪ್ರಯತ್ನಗಳು ಮುಂದುವರಿದಿವೆ. ಈ ಬೇಡಿಕೆಗೆ ಸರ್ಕಾರ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದೆ ಮತ್ತು ಎಸ್ಐಟಿ ಮುಖ್ಯಸ್ಥರ ಬದಲಾವಣೆ ಕುರಿತು ಅಂತಿಮ ನಿರ್ಧಾರ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



