*ಬಸ್ ನಲ್ಲಿ ಚಾಲಕನಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಚಾಲಕನನ್ನು ಹಿಡಿದು ಬಟ್ಟೆ ಬಿಚ್ಚಿಸಿ ಧರ್ಮದೇಟು ನೀಡಿದ ಪೋಷಕರು*

ಪ್ರಗತಿವಾಹಿನಿ ಸುದ್ದಿ: ಬಸ್ ಚಾಲಕನೊಬ್ಬ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿರುವ ಬಸ್ ನಲ್ಲಿ ನಡೆದಿದೆ. ಬಾಲಕಿ ಪೋಷಕರಿಗೆ ಮಾಹಿತಿ ತಿಳಿಸುತ್ತಿದ್ದಂತೆ ಚಾಲಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
15 ವರ್ಷದ ಅಪ್ರಾಪ್ತ ಬಾಲಕಿ ಸ್ಲೀಪರ್ ಬಸ್ ನಲ್ಲಿ ಹೈದರಾಬಾದ್ ನಿಂದ ಬೆಂಗಳೂರಿಗೆ ಹೊರಟಿದ್ದಳು. ಬಸ್ ಹತ್ತಿದ ಬಳಿಕ ಪೋಷಕರಿಗೆ ಕರೆ ಮಾಡಲು ಮೊಬೈಲ್ ಚಾರ್ಜ್ ಖಾಲಿಯಾಗಿ ಸ್ವಿಚ್ಡ್ ಆಫ್ ಆಗಿದೆ. ಚಾಲಕರ ಬಳಿ ಬಂದು ಮೊಬೈಲ್ ಚಾರ್ಜ್ ಮಾಡಿಕೊಡುವಂತೆ ಬಾಲಕಿ ಕೇಳಿದ್ದಾಳೆ. ಮೊಬೈಲ್ ನ್ನು ಚಾರ್ಜ್ ಗೆ ಇಟ್ಟಿದ್ದಾನೆ. ಕೆಲ ಸಮಯದ ಬಳಿಕ ಬಾಲಕಿ ಚಾರ್ಜ್ ಆಗಿರುವ ಮೊಬೈಲ್ ತೆಗೆದುಕೊಳ್ಳಲು ಬಂದಾಗ ಚಾಲಕ ಆರೀಫ್ ಎಂಬಾತ ತನಗೆ ಮುತ್ತುಕೊಡು ಮೊಬೈಲ್ ಕೊಡುತ್ತೇನೆ ಎಂದಿದ್ದಾನೆ. ಆತನಿಂದ ಮೊಬೈಲ್ ಕಸಿದುಕೊಂಡು ಬಂದು ತನ್ನ ಸೀಟ್ ನಲ್ಲಿ ಬಾಲಕಿ ಮಲಗಿದ್ದಾಗ ಆಕೆಯ ಸೀಟ್ ಬಳಿ ಬಂದು ಕಿರುಕುಳ ನೀಡಲಾರಂಭಿಸಿದ್ದಾನೆ. ಇದರಿಂದ ಬಾಲಕಿ ತನ್ನ ತಾಯಿಗೆ ಕರೆ ಮಾಡಿ ಚಾಲಕ ಕಿರುಕುಳ ನೀಡುತ್ತಿರುವುದಾಗಿ ಹೇಳಿದ್ದಾಳೆ. ಹೈದರಾಬಾದ್ ನಲ್ಲಿರುವ ಆಕೆಯ ಅಕ್ಕನಿಗೂ ಕರೆ ಮಾಡಿ ಹೇಳಿದ್ದಾಳೆ.
ಬೆಳಿಗ್ಗೆ ಬಸ್ ಬೆಂಗಳೂರಿನ ಆನಂದರಾವ್ ಸರ್ಕಲ್ ಬಳಿ ಬರುತ್ತಿದ್ದಂತೆ ಬಾಲಕಿಯ ತಂದೆ-ತಾಯಿ, ಅಣ್ಣ ಕಾಯುತ್ತ ನಿಂತಿದ್ದಾರೆ. ಬಸ್ ಬಂದು ನಿಲ್ಲುತ್ತಿದ್ದಂತೆ ಚಾಲಕನನ್ನು ಬಸ್ ನಿಂದ ಎಳೆದು ರಸ್ತೆಗಿಳಿಸಿ ಬಟ್ಟೆ ಬಿಚ್ಚಿಸಿ ಮನಬಂದಂತೆ ಥಳಿಸಿದ್ದಾರೆ. ಮುಖಮೂತಿ ನೋಡದೇ ಹೊಡೆದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಪೊಲೀಸರ ಮುಂದೆಯೂ ಬಾಲಕಿಯ ತಾಯಿ ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.