
ಪ್ರಗತಿವಾಹಿನಿ ಸುದ್ದಿ: ಜೈಲಿನಲ್ಲಿರುವ ಕೈದಿಯೊಬ್ಬ ಉದ್ಯಮಿಯೋರ್ವರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೊಲೆ ಆರೋಪಿ ಸುಜಯ್ ಭಾರ್ಗವ್ ಅಲಿಯಾಸ್ ಸುಜಿ, ಚಿತ್ರದುರ್ಗ ಮೂಲದ ಹಿರಿಯೂರು ಉದ್ಯಮಿ ಅರ್ಜುನ್ ಸಿಂಗ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ.
ನಿರಂತರವಾಗಿ ವಾಯ್ಸ್ ಕಾಲ್, ಮೆಸೇಜ್ ಗಳ ಮೂಲಕ ಬೆದರಿಕೆ ಹಾಕುತ್ತಿದ್ದನಂತೆ. ಅರ್ಜುನ್ ಸಿಂಗ್ ಅವರು ಹಿರಿಯೂರು ಸರ್ಕಾರಿ ಆಸ್ಪತ್ರೆ ಬಳಿ ಆಯಕಟ್ಟಿನ ಜಾಗದಲ್ಲಿರುವ ಕಟ್ಟಡಲ್ಲಿ ಮಳಿಗೆ ನಡೆಸುತ್ತಿದ್ದಾರೆ. ಇದನ್ನು ಮೂರು ದಿನಗಳಲ್ಲಿ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದಾನೆ. ಖಾಲಿ ಮಾಡದಿದ್ದರೆ ಜೀವ ಉಳಿಸಲ್ಲ ಸುಟ್ಟು ಹಾಕುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾಗಿ ಉದ್ಯಮಿ ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹುಡುಗರನ್ನು ಗರಮೆಂಟ್ಸ್ ಗೆ ಕಳುಹಿಸಿ ಧಮ್ಕಿ ಹಾಕಿಸಿದ್ದನಂತೆ ಈ ಬಗ್ಗೆ ದೂರು ಕೂಡ ದಾಖಲಾಗಿತ್ತು. ಇದೀಗ ಮತ್ತೆ ಬೆದರಿಕೆಯೊಡ್ಡಿದ್ದಾಗಿ ದೂರಿದ್ದಾರೆ.