ಉಪಚುನಾವಣೆ: ಬೆಳಗಾವಿಯ ಇಬ್ಬರು ನಾಯಕಿಯರ ಶಕ್ತಿ ಅನಾವರಣ

ಬೆಳಗಾವಿ ಜಿಲ್ಲೆಯ ನಾರಿ ಶಕ್ತಿ ಅನಾವರಣ

ಹಾನಗಲ್ ನ 57 ಸ್ಥಳಗಳಲ್ಲಿ 14 ದಿನ ಪ್ರಚಾರ ಸಭೆ ನಡೆಸಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಚುನಾವಣೆ ಘೋಷಣೆಯಾದಾಗಿನಿಂದಲೂ ಸಿಂಧಗಿಯಲ್ಲಿ ಬೀಡುಬಿಟ್ಟಿದ್ದ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಂಗಳವಾರ ಪ್ರಕಟವಾಗಿರುವ ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಬೆಳಗಾವಿ ಜಿಲ್ಲೆಯ ನಾರಿ ಶಕ್ತಿ ಅನಾವರಣ ಮಾಡಿದೆ.

ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದು ಬೀಗಿದೆ. ಹಾನಗಲ್ ನಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಸಿಂಧಗಿಯಲ್ಲಿ ನಿಪ್ಪಾಣಿ ಕ್ಷೇತ್ರದ ಶಾಸಕರೂ, ರಾಜ್ಯ ಮುಜರಾಯಿ ಸಚಿವರೂ ಆಗಿರುವ ಶಶಿಕಲಾ ಜೊಲ್ಲೆ ಬೀಡುಬಿಟ್ಟು ಕ್ಷೇತ್ರದ ಉಸ್ತುವಾರಿಗಳೆನ್ನುವ ರೀತಿಯಲ್ಲಿ ಕೆಲಸ ಮಾಡಿದ್ದರು. ಇಬ್ಬರೂ ತಮಗೆ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸಿ ತಮ್ಮ ತಮ್ಮ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಹಾಗಾಗಿ ಈ ಕ್ಷೇತ್ರಗಳಲ್ಲಿ ಗೆಲುವಿಗೆ ಆಯಾ ಪಕ್ಷಗಳ ಬೆಳಗಾವಿ ಜಿಲ್ಲೆಯ ನಾಯಕಿಯರ ಕೊಡುಗೆ ದೊಡ್ಡ ಮಟ್ಟದಲ್ಲಿದೆ ಎನ್ನುವ ಚರ್ಚೆ ಎಲ್ಲೆಡೆ ನಡೆಯುತ್ತಿದೆ.

57 ಸ್ಥಳಗಲ್ಲಿ ಪ್ರಚಾರ ಸಭೆ

 ಹಾನಗಲ್ ವಿಧಾನಸಭೆ ಕ್ಷೇತ್ರದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ 14 ದಿನ ಉಳಿದುಕೊಂಡು 57 ಸ್ಥಳಗಳಲ್ಲಿ ಪ್ರಚಾರ ಸಭೆ ನಡೆಸಿದ್ದರು. ತಮ್ಮದೇ ಚುನಾವಣೆ ಎನ್ನುವ ರೀತಿಯಲ್ಲಿ ಅವರು ಅಲ್ಲಿ ಕೆಲಸ ಮಾಡಿದ್ದರು. 

ಪ್ರಚಾರದ ವೇಳೆಯೇ ನಮಗೆ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಸ್ಪಷ್ಟತೆ ಸಿಕ್ಕಿತ್ತು ಎಂದು ಹೆಬ್ಬಾಳಕರ್ ಹೇಳುತ್ತಾರೆ.

ಜಾತಿ ಎಲ್ಲೂ ಕೆಲಸ ಮಾಡುವುದಿಲ್ಲ. ಜಾತಿ, ಹಣ, ತೋಳ್ಬಲಕ್ಕಿಂತ ಜನರ ಮನಸ್ಸನ್ನು ಗೆಲ್ಲಬೇಕು ಎನ್ನುವುದಕ್ಕೆ ಹಾನಗಲ್ ಫಲಿತಾಂಶ ಉದಾಹರಣೆಯಾಗಿದೆ. ತಮಗೆ ಸ್ಪಂದಿಸುವ ವ್ಯಕ್ತಿಗೆ ಅಲ್ಲಿನ ಜನರು ಮತ ನೀಡಿದ್ದಾರೆ. ಸಿಎಂ ಉದಾಸಿಯವರು ಜನರ ಜೊತೆ ಸಂಪರ್ಕ ಕಳೆದುಕೊಂಡಿದ್ದರು. ಸಂಸದ ಶಿವಕುಮಾರ ಉದಾಸಿ 3 ಬಾರಿ ಆಯ್ಕೆಯಾದರೂ ಕ್ಷೇತ್ರದ ಹಾಗೂ ಜನರ ಪರಿಚಯವೇ ಇಲ್ಲ. ಯಾವ ಊರಿಗೂ ಹೊಗಲಿಲ್ಲ. ಯಾರಾದರೂ ಬಂದರೆ ಯಾವ ಊರವರು ಎಂದು ಕೇಳುತ್ತಾರೆ. ಇದರ ಜೊತೆಗೆ ಬೆಲೆ ಏರಿಕೆಯೂ ಜನ ಬಿಜೆಪಿ ತಿರಸ್ಕರಿಸಲು ಕಾರಣ ಎಂದು ಲಕ್ಷ್ಮಿ ಹೆಬ್ಬಾಳಕರ್ ವಿಶ್ಲೇಷಿಸುತ್ತಾರೆ.

ಬಿಜೆಪಿಯವರು ಪ್ರತಿಯೊಂದು ಪಂಚಾಯಿತಿಗೆ ಕ್ಯಾಬಿನೆಟ್ ಮಂತ್ರಿ ಹಾಕಿದ್ದರು. ಪ್ರತಿ ಹೋಬಳಿಗೆ ದೊಡ್ಡ ದೊಡ್ಡ ಜನರನ್ನು ಹಾಕಿದ್ದರು. ಆದರೆ ನಾವು ಒಳ್ಳೆ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಸರಕಾರದ ಒಳ್ಳೆಯ ಕೆಲಸದ ಜೊತೆ ಶ್ರೀನಿವಾಸ ಮಾನೆಯವರ ಒಳ್ಳೆಯ ತನ ಕೂಡ ಗೆಲುವಿಗೆ ಕಾರಣವಾಗಿದೆ ಎಂದರು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಕೇವಲ 3 ತಿಂಗಳಾಗಿದೆ. ಹಾಗಾಗಿ ಬಿಜೆಪಿ ಸೋಲಿನ ಹೊಣೆಯನ್ನು ನಾನು ಮುಖ್ಯಮಂತ್ರಿಗಳ ಮೇಲೆ ಹಾಕುವುದಿಲ್ಲ. ಒಳ್ಳೆಯ ಅಭ್ಯರ್ಥಿ ಗೆದ್ದಿದ್ದಾರೆ ಎಂದಷ್ಟೆ ಹೇಳುತ್ತೇನೆ ಎನ್ನುತ್ತಾರೆ ಹೆಬ್ಬಾಳಕರ್.

ಬೆಳಗಾವಿ ಕ್ಷೇತ್ರದಲ್ಲಿ ಮನೆ ಮನೆಗೆ ನಾನು ಪರಿಚಯವಿರುವಂತೆ ಹಾನಗಲ್ ಕ್ಷೇತ್ರದಲ್ಲೂ ಸಾಕಷ್ಟು ಜನರು ಅನುಯಾಯಿಗಳಿದ್ದಾರೆ. ನಮ್ಮ ಸಮಾಜದವರೂ ಇದ್ದಾರೆ. ಆದರೆ ಜಾತಿ ಕೆಲಸ ಮಾಡುತ್ತದೆ ಎಂದು ನಾನು ಹೇಳುವುದಿಲ್ಲ. ಜನರಿಗೆ ಸ್ಪಂದಿಸುವ ಕೆಲಸವನ್ನು ಶ್ರೀನಿವಾಸ ಮಾನೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಮಹಿಳಾ ಮತದಾರರ ಮೇಲೆ ಗಮನ

 ಸಿಂಧಗಿ ಕ್ಷೇತ್ರದಲ್ಲಿ ಉಪ ಚುನಾವಣೆ ಘೋಷಣೆಯಾದ ಆರಂಭದಿಂದಲೂ ನಾನು ಹಾಗೂ ಹಿರಿಯ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್,  ವಿ. ಸೋಮಣ್ಣ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಸಂಘಟಿತ ಕಾರ್ಯತಂತ್ರ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಿದೆ ಎನ್ನುತ್ತಾರೆ ಶಶಿಕಲಾ ಜೊಲ್ಲೆ.
ನಾನು ವಿಶೇಷವಾಗಿ ಮಹಿಳಾ ಮತದಾರರನ್ನು ಸೆಳೆಯಲು ಕ್ಷೇತ್ರದ ತುಂಬೆಲ್ಲ ವಿಶೇಷ ಕಾರ್ಯತಂತ್ರ ರೂಪಿಸಿದ್ದೆ. ಈ ಕ್ಷೇತ್ರದಲ್ಲಿ ಮನೆಯಿಂದ ಹೊರಗೆ ಬರಲು ಹಿಂಜರಿಯುತ್ತಿದ್ದ ಮಹಿಳಾ ಮತದಾರರನ್ನು ಹುರಿದುಂಬಿಸಿ ಚುನಾವಣೆಯಲ್ಲಿ ತಮ್ಮದೂ ಮಹತ್ವದ ಪಾತ್ರ ಇದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ. ಅಲ್ಲದೇ, ಮಹಿಳೆಯರಿಗೆ ಅರಿಷಿಣ ಕುಂಕುಮ ನೀಡುವ ಕಾರ್ಯಕ್ರಮ, ಮನೆ ಮುಂದೆ ಕಮಲದ ರಂಗೋಲಿ ಬಿಡಿಸುವುದು, ಮಹಿಳೆಯರ ಕೈಯಲ್ಲಿ ಕಮಲದ ಮದರಂಗಿ ಹಾಕುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಬಿಜೆಪಿಗೆ ಮತಹಾಕುವಂತೆ ಮಾಡಿರುವ ನನ್ನ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.
ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ನಾನು ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲೆಯ ಹಾಗೂ ಸಿಂಧಗಿ ಕ್ಷೇತ್ರದ ಜನರಿಗೆ ವೈದ್ಯಕೀಯ ಸೇವೆ ಒದಗಿಸಿರುವುದು, ಸಿಂಧಗಿ ಕ್ಷೇತ್ರದ ತಾರಾಪುರ ಮತ್ತು ಬ್ಯಾಡಗಿಹಾಳ ಗ್ರಾಮದ ಜನರನ್ನು ಸ್ಥಳಾಂತರಿಸಿ ಪುನರ್ ವಸತಿ ಕಲ್ಪಿಸಿರುವುದು ಕೂಡ ಮತದಾರರು ಬಿಜೆಪಿ ಮತ ನೀಡಲು ಕಾರವಾಗಿದೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಇದರೊಂದಿಗೆ ರಮೇಶ ಬೂಸನೂರು ಅವರು ಎರಡು ಬಾರಿ ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಮಾಡಿದ್ದ ಕಾರ್ಯಗಳು, ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್, ಫಸಲ್ ಬಿಮಾ ಯೋಜನೆಗಳು, ರೈತ ಮಕ್ಕಳಿಗೆ ವಿದ್ಯಾನಿಧಿ ಮತ್ತು ಮಹಿಳೆಯರಿಗೆ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆ, ಕೇಂದ್ರದ  ಭೇಟಿ ಬಚಾವೊ ಭೇಟಿ ಪಡಾವೊ, ಉಜ್ವಲ ಯೋಜನೆಗಳು ನೇರವಾಗಿ ಫಲಾನುಭವಿಗಳಿಗೆ ತಲುಪಿರುವುದು ಸಹ ಕಾರಣವಾಗಿದೆ.
ಈ ಫಲಿತಾಂಶ ಸಿಂಧಗಿ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಪ್ರೇರಣೆ ನೀಡಿದೆ. ಅಲ್ಲದೇ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಉತ್ಸಾಹ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಸಿಂದಗಿಯಲ್ಲಿ ಸಂಘಟಿತ ಕಾರ್ಯತಂತ್ರಕ್ಕೆ ಒಲಿದ ಜಯ: ಶಶಿಕಲಾ ಜೊಲ್ಲೆ

ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳನ್ನು ಜನರು ಮೆಚ್ಚಿದ್ದಾರೆ – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button