ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಎರಡು ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಸಿಂದಗಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದರೆ, ಹಾನಗಲ್ ನಲ್ಲಿ ಬಿಜೆಪಿ ಸೋಲನುಭವಿಸಿದೆ.
ಉಪಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆದರೆ ಹಾನಗಲ್ ನಲ್ಲಿ ಬಿಜೆಪಿಗೆ ಅಲ್ಪ ಮತಗಳಿಂದ ಸೋಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಹಾನಗಲ್ ನಲ್ಲಿ ಗೆಲುವು ಸಾಧಿಸಿದ್ದಾರೆ ಹಾಗೆಂದು ಕಾಂಗ್ರೆಸ್ ನಾಯಕರು, ವಿಪಕ್ಷ ನಾಯಕ ಸಿದ್ದರಾಮಯ್ಯ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಬೀಗುವ ಅಗತ್ಯವಿಲ್ಲ ಎಂದರು.
ಉಪಚುನಾವಣಾ ಫಲಿತಾಂಶ ಮುಂಬರುವ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಲ್ಲ. ಹಾನಗಲ್ ನಲ್ಲಿ ಸಣ್ಣ ಮತಗಳ ಅಂತರದಲ್ಲಿ ನಮಗೆ ಸೋಲಾಗಿರಬಹುದು. ಆದರೆ ಈ ಬಗ್ಗೆ ಎಡವಿದ್ದೆಲ್ಲಿ ಎಂಬುದನ್ನು ಪರಾಮರ್ಶೆ ನಡೆಸಿ ಮುಂದಿನ ದಿನಗಳಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸುತ್ತೇವೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ಹೆಚ್ಚಿನ ಸಾಧನೆ ಮಾಡಿದ್ದೇವೆ ಎಂದು ಬೀಗುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಉಪಚುನಾವಣೆಯನ್ನು ಬಿಜೆಪಿ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಿದೆ. ಹಾನಗಲ್ ಫಲಿತಾಂಶ ವಿಚಾರದಲ್ಲಿ ಸಿಎಂ ಬೊಮ್ಮಾಯಿ ನಾಯಕತ್ವದ ಪ್ರಶ್ನೆ ಬರುವುದಿಲ್ಲ. ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಹೊರತು, ಯಾವುದೇ ಒಬ್ಬ ವ್ಯಕ್ತಿಯನ್ನು ದೂರುವುದು ಆರೋಪಿಸುವುದು ಸರಿಯಲ್ಲ. ಸೋಲು-ಗೆಲುವು ವಿಚಾರದಲ್ಲಿ ಎಲ್ಲರ ಸಹಭಾಗಿತ್ವವೂ ಇರುತ್ತದೆ ಎಲ್ಲರೂ ಜವಾಬ್ದಾರರಾಗಿರುತ್ತಾರೆ ಎಂದರು.
ಹಾನಗಲ್ ನಲ್ಲಿ ಕಾಂಗ್ರೆಸ್ ಗೆಲುವು; ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದ ಸತೀಶ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ