
ಸಿಎಂ ಪರಮಾಧಿಕಾರ ಎಂಬ ದೊಡ್ಡ ಜೋಕ್
ಒಂದು ಪಕ್ಷ ಸರಿಯಾದ ದಿಕ್ಕಿನಲ್ಲಿ ನಡೆಯಬೇಕಾದರೆ ಸಚಿವಸಂಪುಟ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಬೇಕು, ನಿಗಮ ಮಂಡಳಿ ನೇಮಕ ಪಕ್ಷದ ನಿರ್ಧಾರವಾಗಬೇಕು.

ಎಂ.ಕೆ.ಹೆಗಡೆ, ಬೆಳಗಾವಿ – `ಸಚಿವಸಂಪುಟ ವಿಸ್ತರಣೆ, ಸಚಿವ ಸಂಪುಟ ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ‘ – ಇದು ಹಿಂದಿನಿಂದಲೂ ಕೇಳಿಬರುತ್ತಿರುವ, ಇತ್ತೀಚೆಗೆ ಪದೇ ಪದೆ ಕೇಳುತ್ತಿರುವ ದೊಡ್ಡ ಜೋಕ್.
ಬೆಳಗಾವಿಯಲ್ಲಿ ನಡೆಯಲಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಗೆಂದು ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಡಿದ ಮೊದಲ ಮಾತು – `ಕೇಂದ್ರದಿಂದ ಆಗಮಿಸುತ್ತಿರುವ ಕರ್ನಾಟಕದ ಉಸ್ತುವಾರಿ ಅರುಣ ಸಿಂಗ್ ಜಿ ಅವರು ಏನು ಸಂದೇಶ ತರುತ್ತಾರೋ ನೋಡೋಣ. ಅದನ್ನು ನೋಡಿ ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಂದಿನ ಹೆಜ್ಜೆ ಇಡಲಾಗುವುದು’
ಸಚಿವಸಂಪುಟ ವಿಸ್ತರಣೆಯ ಪರಮಾಧಿಕಾರ ಹೊಂದಿರುವ ಮುಖ್ಯಮಂತ್ರಿಯೇ ಸ್ವತಃ ಹೇಳಿದ ಮಾತಿದು. ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮಗೋಷ್ಠಿ ನಡೆಸಿದ ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಚಿವಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳಿಗೆ ಪ್ರದತ್ತವಾದ ಅಧಿಕಾರ. ಅದರ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡಬಾರದು ಎಂದು ವಾರ್ನಿಂಗ್ ನೀಡಿದರು.
ಹೆಚ್ಚು ಕಡಿಮೆ ಕಳೆದ 6 ತಿಂಗಳಿನಿಂದ ಸಚಿವಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಇನ್ನಿಲ್ಲ ಕಸರತ್ತು ನಡೆಸುತ್ತಿದ್ದಾರೆ. ಹೈಕಮಾಂಡ್ ಅಂಗಳಕ್ಕೂ ಅಲೆದಾಡುತ್ತಿದ್ದಾರೆ. ಆದರೆ ಮುಖ್ಯಮಂತ್ರಿಗಳ ಪರಮಾಧಿಕಾರವನ್ನೇ ಹೈಕಮಾಂಡ್ ಕಸಿದು, ತನ್ನ ಜೇಬಿನಲ್ಲಿಟ್ಟುಕೊಂಡಿದೆ. `ಪರಮಾಧಿಕಾರ’ ಯಡಿಯೂರಪ್ಪ ಪಾಲಿಗೆ ಕಳೆದುಹೋಗಿದೆ.
‘ಉಮೇಶ ಕತ್ತಿಯವರನ್ನು ಮಂತ್ರಿ ಮಾಡುವುದು ಶತಸ್ಸಿದ್ದ, ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ಕೊಡುವುದು ನಿಶ್ಚಿತ, ಭಾರತೀಯ ಜನತಾ ಪಾರ್ಟಿಯ ಸರಕಾರ ರಚನೆಗೆ ಕಾರಣರಾದ ಎಲ್ಲ 17 ಜನರನ್ನೂ ಮಂತ್ರಿ ಮಾಡುವುದು ನೂರಕ್ಕೆ ನೂರು ಸಿದ್ಧ’ – ಈ ಮಾತುಗಳಿಗಷ್ಟೆ ಯಡಿಯೂರಪ್ಪ ಅವರ ಪರಮಾಧಿಕಾರ ಸೀಮಿತವಾಗಿದೆ.
ಭಾರತೀಯ ಜನತಾ ಪಾರ್ಟಿ ವ್ಯಕ್ತಿ ಆಧಾರಿತ ಪಕ್ಷವಲ್ಲ. ಇದು ರಾಷ್ಟ್ರೀಯ ಪಕ್ಷ. ಎಲ್ಲವನ್ನೂ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದು ಜಾರಿಗೊಳಿಸಬೇಕಾಗುತ್ತದೆ ಎನ್ನುವುದಾದರೆ ಮುಖ್ಯಮಂತ್ರಿಗಳ ಪರಮಾಧಿಕಾರ ಎನ್ನುವ ಮಾತನ್ನು ಪದೇ ಪದೆ ಹೇಳುವುದೇಕೆ? ಹೈಕಮಾಂಡ್ ಪರಮಾಧಿಕಾರ ಎನ್ನಬಹುದಲ್ಲವೇ?
ತಾವು ಕೊಟ್ಟ ಮಾತನ್ನು ಈಡೇರಿಸಲಾಗದೆ ಯಡಿಯೂರಪ್ಪ ಕಳೆದ ಒಂದೂವರೆ ವರ್ಷದಿಂದ ವಿಲ ವಿಲ ಒದ್ದಾಡುತ್ತಿದ್ದಾರೆ. ಕೈ, ಕಾಲು ಕಟ್ಟಿ ಅವರನ್ನು ಸಿಎಂ ಖುರ್ಚಿಯ ಮೇಲೆ ಕೂಡ್ರಿಸಿದಂತೆ ಬಿಜೆಪಿ ಹೈಕಮಾಂಡ್ ವರ್ತಿಸುತ್ತಿದೆ. ಒಂದು ರಾಷ್ಟ್ರೀಯ ಪಕ್ಷ ತನ್ನ ಇಂತಹ ಪ್ರಮುಖ ನಿರ್ಧಾರಗಳನ್ನು ನಿಯಂತ್ರಿಸುವುದು, ಸೂಕ್ತ ನಿರ್ದೇಶನ ನೀಡುವುದು ಸಹಜವಾದ ಪ್ರಕ್ರಿಯೆ. ಅದು ಅನಿವಾರ್ಯ, ಅಗತ್ಯ ಕೂಡ. ಆದರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮುಖ್ಯಮಂತ್ರಿಗಳ ಪರಮಾಧಿಕಾರ ಎನ್ನುವ ಅತ್ಯಂತ ಮೌಲ್ಯಯುತವಾದ ಶಬ್ದ ದೊಡ್ಡ ಜೋಕ್ ರೀತಿಯಲ್ಲಿ ಬಿಂಬಿತವಾಗುತ್ತಿದೆ.
ಸಚಿವ ಸಂಪುಟ ವಿಸ್ತರಣೆಯ ವಿಷಯದಲ್ಲಿ ಹೈಕಮಾಂಡ್ ಕೈ ಕಟ್ಟಿ ಹಾಕಿರುವುದರಿಂದ ಯಡಿಯೂರಪ್ಪ ತಮ್ಮ ಬೆಂಬಲಿಗರನ್ನು ನಿಗಮ ಮಂಡಳಿಗಳಿಗೆ ನೇಮಿಸುವ ಮೂಲಕ ಒಂದಿಷ್ಟು ಜನರನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ಅವರು ಏಕಪಕ್ಷೀಯ ನಿರ್ಣಯ ಕೈಗೊಳ್ಳುತ್ತಿದ್ದಾರೆ ಎನ್ನುವ ಆಕ್ಷೇಪವೂ ಬಂದಿದೆ. ಅರುಣ ಸಿಂಗ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈ ವಿಷಯದಲ್ಲಿ ಆಕ್ಷೇಪವನ್ನೂ ಎತ್ತಿದ್ದಾರೆ.
ಒಂದು ಪಕ್ಷ ಸರಿಯಾದ ದಿಕ್ಕಿನಲ್ಲಿ ನಡೆಯಬೇಕಾದರೆ ಸಚಿವಸಂಪುಟ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಬೇಕು, ನಿಗಮ ಮಂಡಳಿ ನೇಮಕ ಪಕ್ಷದ ನಿರ್ಧಾರವಾಗಬೇಕು.
ಶಾಸಕರಿಗೆ ಅಧಿಕಾರ ಕೊಡುವುದು ಮುಖ್ಯಮಂತ್ರಿಗಳ ಕೈಯಲ್ಲಿದ್ದರೆ, ಪಕ್ಷಕ್ಕಾಗಿ ಕೆಲಸ ಮಾಡಿದವರನ್ನು ಗುರುತಿಸಿ ನಿಗಮ ಮಂಡಳಿ ಅಧಿಕಾರ ಕೊಡುವುದು ಪಕ್ಷದ ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳದ್ದಾಗಬೇಕು. ಆಗ ನಿಜವಾದ ಕಾರ್ಯಕರ್ತರನ್ನು ಗುರುತಿಸುವ ಕೆಲಸವಾಗುತ್ತದೆ.
ಈಗ ಬಿಜೆಪಿಯಲ್ಲಾಗುತ್ತಿರುವುದೇ ಬೇರೆ. ಸಚಿವಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುವು ಮಾಡಿಕೊಡುತ್ತಿಲ್ಲ. ನಿಗಮ ಮಂಡಳಿ ನೇಮಕ ವಿಷಯದಲ್ಲಿ ಮುಖ್ಯಮಂತ್ರಿಗಳು ಪಕ್ಷದ ಜಿಲ್ಲಾ ಮತ್ತು ರಾಜ್ಯ ಕಮಿಟಿಗಳನ್ನು ಕೇಳುತ್ತಿಲ್ಲ. ಮುಖ್ಯಮಂತ್ರಿಗಳಿಗೆ ಹತ್ತಿರವಾದವರು, ವಶೀಲಿ ಮಾಡುವ ಸಾಮರ್ಥ್ಯವುಳ್ಳವರು ಹುದ್ದೆ ಗಿಟ್ಟಿಸಿಕೊಳ್ಳುತ್ತಿದ್ದಾರೆ (ಅಪವಾದ ಇಲ್ಲವೇ ಇಲ್ಲ ಎಂದಲ್ಲ). ನಿಷ್ಠಾವಂತ ಕಾರ್ಯಕರ್ತರು ಇನ್ನೂ ಕಸಗುಡಿಸುವುದು, ಬ್ಯಾನರ್ ಕಟ್ಟುವುದು, ಖುರ್ಚಿ ಹಾಕುವುದನ್ನು ಮಾಡುತ್ತಲೇ ಇದ್ದಾರೆ.
ಈಗಾಗಲೆ ಬಿಜೆಪಿ ತನ್ನ ಹಳೆಯ ಮೌಲ್ಯಗಳನ್ನು ಕಳೆದುಕೊಂಡಿದೆ ಅಥವಾ ಕಸದಬುಟ್ಟಿಗೆ ಎಸೆದಿದೆ. ಹೀಗೆ ಮುಂದುವರಿದರೆ, ಬಿಜೆಪಿಯಲ್ಲಿ ನಯಾ ಪೈಸೆಯೂ ಆರ್ ಎಸ್ ಎಸ್ ಸಿದ್ಧಾಂತಗಳು ಉಳಿದುಕೊಳ್ಳಲು ಸಾಧ್ಯವಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ