ಪ್ರಗತಿವಾಹಿನಿ ಸುದ್ದಿ: ನವದೆಹಲಿ; ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಬಿಜೆಪಿ ವರಿಷ್ಥರು ಸಮ್ಮತಿ ಸೂಚಿಸಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಾರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ನಾನು ಅಂದುಕೊಂಡಂತೆ ಎಲ್ಲವೂ ಆಗಿದೆ. ಮೂರು ದಿನಗಳ ಒಳಗೆ ಸಂಪುಟ ವಿಸ್ತರಣೆ ಯಾಗುತ್ತದೆ. ನಾವು ನೀಡಿರುವ ಪಟ್ಟಿಗೆ ವರಿಷ್ಠರು ಸಮ್ಮತಿ ಸೂಚಿಸಿದ್ದಾರೆ ಎಂದರು.
ಜೆ.ಪಿ ನಡ್ಡಾ ಹಾಗೂ ಅಮಿತ್ ಶಾ ಇಬ್ಬರ ಜತೆಯೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ದೇನೆ. ಸುಮಾರು 25 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದೇವೆ. ನಾವು ನೀಡಿದ ಸಚಿವರ ಪಟ್ಟಿಗೆ ಒಪ್ಪಿಗೆ ಸೂಚಿಸಿದ್ದಾರೆ. ಯಾವಗಬೇಕಾದರೂ ಸಂಪುಟ ವಿಸ್ತರಣೆ ಮಾಡಬಹುದು ಎಂದಿದ್ದಾರೆ. ಬೆಂಗಳೂರಿಗೆ ತೆರಳಿ ಅಲ್ಲಿರುವವರ ಜತೆ ಚರ್ಚೆ ಮಾಡಿ, ಸಂಪುಟ ವಿಸ್ತರಣೆ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದರು.
ಇದೇ ವೇಳೆ ಗೆದ್ದ 11 ಶಾಸಕರಿಗೂ ಸಚಿವ ಸ್ಥಾನ ಸಿಗಲಿದೆಯೇ? ಸೋತವರ ಬಗ್ಗೆ ನಿರ್ಧಾರವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವರನ್ನು ಕರೆದು ಮನವೊಲಿಕೆ ಮಾಡಬೇಕಾಗಿದೆ. ಇನ್ನೆರಡು ದಿನಗಳಲ್ಲಿ ನಿಮಗೆ ಎಲ್ಲವೂ ಗೊತ್ತಾಗಲಿದೆ ಕಾದುನೋಡಿ ಎಂದು ಹೇಳಿದರು.
ಇನ್ನು ಡಿಸಿಎಂ ಹುದ್ದೆ ಹೆಚ್ಚಳದ ವಿಚಾರವಾಗಿ ಮಾತನಾಡಿದ ಅವರು, ಈಗಿರುವ ಮೂವರು ಡಿಸಿಎಂ ಮುಂದುವರೆಯುತ್ತಾರೆ. ಹೊಸದಾಗಿ ಡಿಸಿಎಂ ಹುದ್ದೆ ಸೃಷ್ಟಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ