
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
ಮಾಧ್ಯಮ ಹಾಗೂ ಪತ್ರಿಕೋದ್ಯಮದ ಸಂಗಮದಿಂದ ಉತ್ತಮ ಸುದ್ದಿ ವಾಹಿನಿ ರೂಪುಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಸ್ತಾರ ನ್ಯೂಸ್ ಲೋಗೋ ಹಾಗೂ ವೆಬ್‍ಸೈಟ್ ಅನಾವರಣಗೊಳಿಸಿದ ನಂತರ ವಿಸ್ತಾರ ಡಿಜಿಟಲ್ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾಧ್ಯಮ ಉದ್ಯಮವಾಗಿ ಬೆಳೆಯುತ್ತಿದ್ದರೆ, ಪತ್ರಿಕೋದ್ಯಮ ಜನಪರ ದನಿಯಾಗಿ ಬೆಳೆಯುತ್ತದೆ. ವಾಹಿನಿಗಳು ಬಿತ್ತರಿಸುವ ಸುದ್ದಿಗಳನ್ನು ಜನರು ವಿಶ್ಲೇಷಿಸುತ್ತಾರೆ. ಆದ್ದರಿಂದ ಸುದ್ದಿಗಳು ಪಾರದರ್ಶಕವಾಗಿ, ಸತ್ಯನಿಷ್ಟುರವಾಗಿ ಇರಬೇಕಾಗುತ್ತದೆ.
ಭಾರತಕ್ಕೆ ತುರ್ತು ಪರಿಸ್ಥಿತಿಯಿದ್ದಾಗ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ್ದ ಸಂದರ್ಭದಲ್ಲಿ ಈ ಕ್ರಮದ ವಿರುದ್ಧ ದಿಟ್ಟತನದಿಂದ ಧ್ವನಿ ಎತ್ತಿದವರು ಇಂಡಿಯನ್ ಎಕ್ಸ್ಪ್ರೆಸ್ ಮುಖ್ಯಸ್ಥರಾದ ರಾಮನಾಥ ಗೊಯೆಂಕಾ, ಆ ಸಾಹಸಕ್ಕೆ ಕೈಹಾಕಿದರು. ಉದ್ಯಮದಲ್ಲಿದ್ದರೂ ಕೂಡ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡಿದರು.
ಪತ್ರಿಕೋದ್ಯಮದಲ್ಲಿ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸಿದವರೂ ಇದ್ದಾರೆ. ಆದ್ದರಿಂದ ಮಾಧ್ಯಮ ಹಾಗೂ ಪತ್ರಿಕೋದ್ಯಮದ ಸಂಗಮ ಉತ್ತಮ ಸುದ್ದಿ ವಾಹಿನಿ ಅಥವಾ ಪತ್ರಿಕೆಯಾಗಿ ರೂಪುಗೊಳ್ಳುತ್ತದೆ. ಈ ದಿಸೆಯಲ್ಲಿ ವಿಸ್ತಾರ ನ್ಯೂಸ್ ನಡೆಯುತ್ತಿದೆ. ಪತ್ರಿಕೋದ್ಯಮ ಮೌಲ್ಯಗಳು ಈ ಪತ್ರಿಕೆಯಿಂದ ಕಾಪಾಡಿದಂತಾಗುತ್ತದೆ. ಎಂದರು.

*ಜನರ ಜೊತೆ ಮಾಧ್ಯಮಗಳ ಸಂವಹನದಿಂದ ಸುದ್ದಿಗಳ ಮೌಲ್ಯವೃದ್ಧಿ :*
ರಾಜಕಾರಣಿಗಳು ಮತ್ತು ಪತ್ರಕರ್ತರ ಸಂಬಂಧ ಅನ್ಯೋನ್ಯವಾದುದು. ಸರ್ಕಾರದ ಕಾರ್ಯಕ್ರಮಗಳು ಮಾಧ್ಯಮಗಳ ಮೂಲಕ ಜನರಿಗೆ ತಲುಪಬೇಕು. ರಾಜಕಾರಣಿಗಳಿಲ್ಲದೇ ಮಾಧ್ಯಮಗಳಿಗೆ ಸುದ್ದಿಯೂ ಇಲ್ಲ. ರಾಜಕಾರಣಿ ಹಾಗೂ ಪತ್ರಕರ್ತರ ನಡುವಿನ ಸಂಬಂಧ ಪ್ರಮಾಣಿಕವಾಗಿದ್ದು, ಕ್ರೀಡಾಸ್ಪೂರ್ತಿಯಿರಬೇಕು.
ಪತ್ರಕರ್ತರು ನಮ್ಮಲ್ಲಿ ಕಾಣುವ ಲೋಪದೋಷಗಳ ಬಗ್ಗೆ ತಪ್ಪುಭಾವಿಸದೇ ಸರಿಪಡಿಸಿಕೊಳ್ಳುವ ಬಗ್ಗೆ ಚಿಂತಿಸಬೇಕು. ರಾಜಕಾರಣಿಗಳ ಜೊತೆಗಿನ ಆರೋಗ್ಯಕರ ಸಂವಹನ, ಜನರ ಜೊತೆಗಿನ ಸಂಪರ್ಕವನ್ನು ಮಾಧ್ಯಮಗಳು ಹೊಂದಿರಬೇಕು.
ವಿಧಾನಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತದೆ, ಆದರೆ ಜನ ಸಮಸ್ಯೆಯ ಜೊತೆಗೆ ಜೀವಿಸುತ್ತಾರೆ. ಸಮಸ್ಯೆಯ ಜೊತೆಗೇ ಬದುಕುವ ಜನರ ಜೊತೆಗೆ ಸಂವಹಿಸುವ ಮೂಲಕ ಪರಿಹಾರ ದೊರಕುವುದಲ್ಲದೇ ಸುದ್ದಿಗಳ ಮೌಲ್ಯವೂ ವೃದ್ಧಿಯಾಗುತ್ತದೆ ಎಂದರು.
*ಮಾಧ್ಯಮಗಳು ಪರಿಹಾರದ ಭಾಗವಾಗಬೇಕು :*
ವೀಕ್ಷಕರಿಗೆ ಬಹಳಷ್ಟು ಆಯ್ಕೆಗಳಿವೆ. ವೀಕ್ಷಕರು ವಾಹಿನಿಯ ನಿಲುವನ್ನು ಗಮನಿಸುತ್ತಾರೆ. ಯಾವುದೇ ಸಂದರ್ಭದಲ್ಲಿ ನಕಾರಾತ್ಮಕ ವಿಷಯಗಳನ್ನು ವೈಭವೀಕರಿಸುವ ಬದಲು ಅದಕ್ಕೆ ಪರಿಹಾರ ರೂಪದಲ್ಲಿ ಸಕಾರಾತ್ಮಕ ಸುದ್ದಿಗಳನ್ನು ಬಿತ್ತರಿಸಬೇಕಾಗುತ್ತದೆ.
ಸಮಾಜದಲ್ಲಿ ಕೋಮು ಸೌಹಾರ್ದತೆ ಕದಡಿದಾಗ, ಅದನ್ನು ವೈಭವೀಕರಿಸದೇ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಮರಳಿಸುವತ್ತ ಒತ್ತು ನೀಡಬೇಕು. ಅಪಘಾತವಾದಾಗ ನರಳುತ್ತಿರುವ ವ್ಯಕ್ತಿಯನ್ನೇ ತೋರಿಸುವ ಬದಲು, ಅವನಿಗೆ ಚಿಕಿತ್ಸೆ, ಸಹಾಯ ದೊರಕುವ ಬಗ್ಗೆ ಒತ್ತು ನೀಡಬೇಕು.
ಮಾಧ್ಯಮಗಳು ಸಮಸ್ಯೆಯ ಭಾಗವಾವುದು ಸುಲಭ, ಪರಿಹಾರದ ಭಾಗವಾಗಬೇಕಾದುದು ಮುಖ್ಯವಾಗುತ್ತದೆ. ಈ ಹೊಸತನವನ್ನು ಜನರು ಮಾಧ್ಯಮಗಳಿಂದ ನಿರೀಕ್ಷಿಸುತ್ತಾರೆ ಈ ಹೊಸ ಬದಲಾವಣೆಯ ಮೂಲಕ ಜನರನ್ನು ಆಕರ್ಷಿಸಬಹುದಾಗಿದೆ ಎಂದು ತಿಳಿಸಿದರು.
*ವಿಸ್ತಾರ ನ್ಯೂಸ್ ಪ್ರತಿ ಮನೆಮನಗಳಿಗೂ ವಿಸ್ತರಿಸಲಿ :*
ವಿಸ್ತಾರನ್ಯೂಸ್ ಮಾಧ್ಯಮ ಕ್ಷೇತ್ರದ ಅನುಭವಿಗಳ ತಂಡವಾಗಿದ್ದು, ವಸ್ತುನಿಷ್ಠವಾಗಿ,ಸತ್ಯ ಹಾಗೂ ಜನಪರವಾಗಿ ಕೆಲಸ ಮಾಡಲಿದೆ ಎಂಬ ವಿಶ್ವಾಸವಿದೆ. ಧರ್ಮೇಶ್, ಹೆಬ್ಬಾರ್, ಹರಿಪ್ರಕಾಶ್ ಕೋಣೆಮನೆ ಅವರಂತಹ ಅನುಭವೀ ತಂಡ ಈ ಕಾರ್ಯದಲ್ಲಿ ತೊಡಗಿದ್ದಾರೆ. ಪತ್ರಿಕೋದ್ಯಮ ಮತ್ತು ಮಾಧ್ಯಮ ಒಟ್ಟಿಗೆ ಸೇರಿ ಇಲ್ಲಿ ವಿಸ್ತಾರವಾಗಿದೆ .ಅತ್ಯಂತ ಪಾರದರ್ಶಕವಾಗಿ ಕಾರ್ಯನಿರ್ವಹಿಸಲಿರುವ ವಿಸ್ತಾರ ನ್ಯೂಸ್ ಪ್ರತಿ ಮನೆಮನಗಳಿಗೂ ವಿಸ್ತಾರವಾಗಲಿದೆ ಎಂಬ ವಿಶ್ವಾಸವಿದೆ.
ಮಾಧ್ಯಮಗಳ ಅನುಭವದ ಮಾತುಗಳು ನಮಗೆ ಮಾರ್ಗದರ್ಶನ ನೀಡುತ್ತವೆ. ಕನ್ನಡ ಮಾಧ್ಯಮ ಹೊಸ ಆಯಾಮಗಳನ್ನು ಕಂಡಿದೆ. ಮಾಧ್ಯಮ ಲೋಕದಲ್ಲಿ ಮಿನುಗು ತಾರೆಯಂತೆ ವಿಸ್ತಾರ ನ್ಯೂಸ್ ಮಿನುಗಲಿ ಎಂದು ಹಾರೈಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ, ವಿಸ್ತಾರ ಚಾನೆಲ್ ಮುಖ್ಯ ಸಂಪಾದಕ ಹರಿಪ್ರಕಾಶ ಕೋಣೆಮನೆ, ಸಂಪಾದಕ ಶರತ್, ವಿಸ್ತಾರ ನ್ಯೂಸ್ ಅಧ್ಯಕ್ಷ ಧರ್ಮೇಶ ಮತ್ತು ನಿರ್ದೇಶಕ ಶ್ರೀನಿವಾಸ ಹೆಬ್ಬಾರ ಸೇರಿದಂತೆ ಅನೇಕ ಮುಖಂಡರು, ಪತ್ರಕರ್ತರು ಉಪಸ್ಥಿತರಿದ್ದರು.
https://pragati.taskdun.com/karnataka-news/media-should-go-together-mk-hegde/