Kannada NewsKarnataka News

ಸೋಂಕಿತೆಯ ಪತಿ, ಸಹೋದರ ಮತ್ತು ವಾಹನ ಚಾಲಕನ ಮೇಲೆ ಪ್ರಕರಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಲಾಕ್ ಡೌನ್ ಮಾರ್ಗಸೂಚಿ ಪ್ರಕಾರ ಸೇವಾಸಿಂಧು ಮೂಲಕ ಇ-ಪಾಸ್ ಪಡೆಯದೇ ನಿಯಮ ಉಲ್ಲಂಘಿಸಿ ಮಹಾರಾಷ್ಟ್ರದಿಂದ ಬೆಳಗಾವಿ ಜಿಲ್ಲೆಯನ್ನು ಪ್ರವೇಶಿಸಿದ ಮೂವರ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಗುರುವಾರ (ಮೇ 14) ಪತ್ತೆಯಾಗಿರುವ 27 ವರ್ಷದ ಸೋಂಕಿತ ಮಹಿಳೆ(ಪಿ-974)ಯ ಪತಿ, ಸಹೋದರ ಮತ್ತು ವಾಹನ ಚಾಲಕನ ಮೇಲೆ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸದರಿ ಮಹಿಳೆಯನ್ನು ಆಕೆಯ ಪತಿಯು ಮಹಾರಾಷ್ಟ್ರದಿಂದ ಬೆಳಗಾವಿಗೆ ಕರೆತಂದಿದ್ದರು. ಇ-ಪಾಸ್ ಪಡೆಯದೇ ಅಕ್ರಮವಾಗಿ ಜಿಲ್ಲೆಯನ್ನು ಪ್ರವೇಶಿಸಿದ್ದು ಮಾತ್ರವಲ್ಲದೇ ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿಯನ್ನು ನೀಡಿರಲಿಲ್ಲ.

ಆದ್ದರಿಂದ ಸೋಂಕಿತ ಮಹಿಳೆಯ ಪತಿ, ಸಹೋದರ ಮತ್ತು ಚಾಲಕನ ವಿರುದ್ಧ ಐಪಿಸಿ ಕಲಂ 269, 270, 188. 201, 202, r/w 34 ಮತ್ತು ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆಯ ಸೆಕ್ಷನ್ 3 ರ ಪ್ರಕಾರ ದೂರು ದಾಖಲಿಸಲಾಗಿರುತ್ತದೆ.

ಮಹಾನಗರ ಪಾಲಿಕೆಯ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಸೋಂಕಿತ ಮಹಿಳೆಯನ್ನು ಈಗಾಗಲೇ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಹತ್ತು ಜನರನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಅವರು ತಿಳಿಸಿದ್ದಾರೆ.

ಮಾಹಿತಿ ನೀಡಲು ಮನವಿ:

ಈ ರೀತಿ ಅಕ್ರಮವಾಗಿ ಪ್ರವೇಶಿಸಿದವರು ಒಂದು ವೇಳೆ ಸ್ವಯಂಪ್ರೇರಣೆಯಿಂದ ಮುಂದೆ ಬಂದು ಮಾಹಿತಿ ನೀಡದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.

ಅನ್ಯ ರಾಜ್ಯಗಳಿಂದ ಅಕ್ರಮವಾಗಿ ಬಂದಿರುವವರ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಕೂಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಮ್ 0831-2407290 ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button