Belagavi NewsBelgaum NewsCrimeKannada NewsKarnataka NewsLatest

*ಮೂರು ಗ್ರಾಮಗಳ 17 ಮನೆಗಳಲ್ಲಿ ಕಳ್ಳತನ*

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಮಾಡಿಗುಂಜಿ, ಕರಂಬಳ ಮತ್ತು ದೇವಲತ್ತಿ ಗ್ರಾಮಗಳಲ್ಲಿ ೧೭ಕ್ಕೂ ಹೆಚ್ಚು ಮನೆಗಳಿಗೆ ಮತ್ತು ಒಂದು ದೇವಸ್ಥಾನಕ್ಕೆ ಕನ್ನ ಹಾಕಿ ಕಳ್ಳತನ ನಡೆಸಿದ ಕಳ್ಳರು ಮನೆಗಳಲ್ಲಿ ಇರಿಸಿದ್ದ ನಗ-ನಾಣ್ಯ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿದ ಘಟನೆ ಗುರುವಾರ ರಾತ್ರಿ ನಡೆದಿದ್ದು, ಶುಕ್ರವಾರ ಮುಂಜಾನೆ ಬೆಳಕಿಗೆ ಬಂದಿದೆ.

ಬೀಗ ಹಾಕಿದ್ದ ಮನೆಗಳನ್ನೇ ಗುರಿಯಾಗಿಸಿ ಕಳ್ಳತನ ನಡೆದಿದ್ದು, ಕಳ್ಳತನದಲ್ಲಿ ಪಳಗಿದ ವೃತ್ತಿಪರ ಕಳ್ಳರ ತಂಡವೇ ಈ ಕೃತ್ಯ ನಡೆಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

Home add -Advt

ಗುಂಜಿ ಗ್ರಾಮದಲ್ಲಿ ಬೀಗ ಜಡಿದ ಸ್ಥಿತಿಯಲ್ಲಿದ್ದ ಎಂಟು ಮನೆಗಳಿಗೆ ಕನ್ನಹಾಕಿ ಕಳ್ಳತನ ಮಾಡಿರುವ ಕಳ್ಳರು ಮನೆಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಮತ್ತು ಆಭರಣಗಳನ್ನು ದೋಚಿದ್ದಾರೆ. ಕರಂಬಳ ಗ್ರಾಮದ ನಾಲ್ಕು ಮನೆಗಳಿಗೆ ಮತ್ತು ಒಂದು ದೇವಾಲಯಕ್ಕೆ, ದೇವಲತ್ತಿ ಗ್ರಾಮದ ಬೀಗ ಜಡಿದಿದ್ದ ೫ ಗ್ರಾಮಗಳಿಗೆ ಕನ್ನ ಹಾಕಿ ದೋಚಿದ್ದಾರೆ. ಮಧ್ಯೆರಾತ್ರಿ ೨ರಿಂದ ನಸುಕಿನಜಾವ ೫ರ ಅವಧಿಯಲ್ಲಿ ಈ ಕಳ್ಳತನ ನಡೆದಿದೆ.

ಕಳ್ಳತನ ನಡೆಸುವ ಮೊದಲೇ ಮೂರೂ ಊರುಗಳಲ್ಲಿ ಸುತ್ತಾಡಿರುವ ಕಳ್ಳರು ಬೀಗ ಹಾಕಿದ ಮನೆಗಳ ಮಾಹಿತಿಯನ್ನು ಮೊದಲೇ ಸಂಗ್ರಹಿಸಿ ಬಳಿಕ ಈ ಕೃತ್ಯ ಎಸಗಿದ್ದಾರೆ. ಮೂರು ತಂಡಗಳಲ್ಲಿ ಕಳ್ಳರು ಮೂರೂ ಕಡೆಗಳಲ್ಲಿ ಏಕಕಾಲಕ್ಕೆ ಈ ಕೆಲಸ ನಡೆಸಿದ್ದು, ಕಳ್ಳತನ ಮಾಡುವ ಮನೆಗಳ ಅಕ್ಕಪಕ್ಕದ ಮನೆಗಳ ಹೊರಭಾಗದ ಬಾಗಿಲ ಚಿಲಕ ಹಾಕಿ ಬೀಗ ಜಡಿದ ಮನೆಗಳ ಬೀಗ ಮುರಿದು ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಾಥಮಿಕ ಮಾಹಿತಿ ಪ್ರಕಾರ ಮೂರೂ ಗ್ರಾಮಗಳಲ್ಲಿ ನಡೆದ ಕಳ್ಳತನದಿಂದ ಕಳ್ಳರು ೧೫ ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ, ಸಾವಿರಾರು ರೂಪಾಯಿ ನಗದು ಮತ್ತು ಬೆಳ್ಳಿ ಆಭರಣಗಳನ್ನು ಕದ್ದೊಯ್ದಿದ್ದಾರೆ. ಕೆಲವು ಬೀಗ ಜಡಿದಿದ್ದ ಮನೆಗಳಲ್ಲಿ ಕಳ್ಳರಿಗೆ ಬೆಲೆಬಾಳುವ ವಸ್ತುಗಳು ಅಥವಾ ನಗದು ಸಿಗದಿದ್ದರಿಂದ ಮನೆಗಳಲ್ಲಿದ್ದ ತಿಜೋರಿಗಳು, ಪೀಠೋಪಕರಣಗಳು ಮತ್ತು ಕಪಾಟುಗಳನ್ನು ಶೋಧಿಸಿ ಚೆಲ್ಲಾಪಿಲ್ಲಿ ಮಾಡಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಲೇ ಖಾನಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button