ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶನಿವಾರ ಹಲವು ರೀತಿಯ ಟ್ವಿಸ್ಟ್ ಪಡೆದಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಭಾನುವಾರ ಮತ್ತು ಸೋಮವಾರ ನಿರ್ಣಾಯಕ ದಿನ. ಇಂದು ಮತ್ತು ನಾಳೆಯೊಳಗೆ ಗೃಹ ಇಲಾಖೆ ತೆಗೆದುಕೊಳ್ಳುವ ನಿರ್ಣಯ ಮತ್ತು ಮುಂದಿನ ತನಿಖೆಯ ಹಾದಿ ಇಡೀ ಪ್ರಕರಣ ಯಾವ ದಿಕ್ಕಿಗೆ ಸಾಗಲಿದೆ ಎನ್ನುವುದನ್ನು ಬಹಿರಂಗಪಡಿಸಲಿದೆ.
ಶನಿವಾರ ಸಿಡಿ ಪ್ರಕರಣದಲ್ಲಿ ಮಹತ್ವದ 3 ಬೆಳವಣಿಗೆಗಳು ನಡೆದಿವೆ.
- ರಮೇಶ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
- ಯುವತಿ ತನಗೆ ರಮೇಶ ಜಾರಕಿಹೊಳಿ ವಂಚಿಸಿದ್ದಾರೆ ಎಂದು ವಿಡೀಯೋ ಮಾಡಿ ಕಳಿಸಿದ್ದಾಳೆ
- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲು ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.
ಶುಕ್ರವಾರ ರಾಜ್ಯ ಸರಕಾರ ಎಸ್ಐಟಿಗೆ ಪ್ರಕರಣದ ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಎಸ್ಐಟಿ ಪ್ರಕರಣದ ಪ್ರಾಥಮಿಕ ಮಾಹಿತಿಗಾಗಿ ಕೆಲವರನ್ನು ಕರೆತಂದು ವಿಚಾರಣೆ ನಡೆಸಿದೆ. ಒಂದಿಷ್ಟು ಮಾಹಿತಿ ಪಡೆದಿದೆ. ಸರಕಾರಕ್ಕೆ ಪ್ರಥಮಿಕ ವರದಿಯನ್ನೂ ನೀಡಿದೆ.
ಸಂಜೆಯ ಹೊತ್ತಿಗೆ ರಮೇಶ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದರು. ಸೋಮವಾರದ ಹೊತ್ತಿಗೆ 2 -3 ಜನರ ಹೆಸರು ಸಹಿತ ದೂರು ದಾಖಲಿಸುವುದಾಗಿ ಹೇಳಿದ್ದ ಜಾರಕಿಹೊಳಿ ದಿಢೀರ್ ಆಗಿ ಶನಿವಾರವೇ ದೂರು ನೀಡಿದರು. ಅದರಲ್ಲಿ ಯಾರ ಹೆಸರನ್ನೂ ಉಲ್ಲೇಖಿಸುವ ಗೋಜಿಗೆ ಹೋಗಲಿಲ್ಲ.
ರಮೇಶ ಜಾರಕಿಹೊಳಿ ಪ್ರಕರಣ ದಾಖಲಿಸಿದ್ದರಿಂದ ಪ್ರಕರಣ ಹೊಸ ಟ್ವಿಸ್ಟ್ ಪಡೆಯಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಹೊತ್ತಿನಲ್ಲೇ ಸಂತ್ರಸ್ತೆ ಎಂದು ಕರೆಯಲಾಗುವ ಯುವತಿ ವಿಡೀಯೋ ಒಂದನ್ನು ಮಾಡಿ ಬಿಡುಗಡೆ ಮಾಡಿದಳು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಉದ್ದೇಶಿಸಿ ಯುವತಿ ಮಾತನಾಡಿದ್ದಾಳೆ.
“ತನಗೆ ರಮೇಶ ಜಾರಕಿಹೊಳಿಯಿಂದ ವಂಚನೆಯಾಗಿದೆ. ಅವರು ಕೆಲಸ ಕೊಡಿಸುವುದಾಗಿ ನನ್ನನ್ನು ಬಳಸಿಕೊಂಡು ನಂತರ ಸಿಡಿಯನ್ನೂ ಹೊರಗಡೆ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾಳೆ. ಯಾವುದೇ ರಾಜಕೀಯ ನಾಯಕರ ಸಂಪರ್ಕ ನನಗಿಲ್ಲ. ನನಗೆ ರಕ್ಷಣೆ ಬೇಕು. ನಾನು ಹಾಗೂ ನನ್ನ ತಂದೆ, ತಾಯಿ 2 -3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇವೆ. ನನ್ನ ಮಾನ, ಮರ್ಯಾದೆ ಹರಾಜಾಗಿದೆ” ಎಂದು ಆಕೆ ಹೇಳಿದ್ದಾಳೆ.
ಇದಾದ ನಂತರ ಮಾತನಾಡಿದ ರಮೇಶ ಜಾರಕಿಹೊಳಿ, ಯುವತಿ 12 ದಿನ ಸುಮ್ಮನಿದ್ದು ನಾನು ದೂರು ದಾಖಲಿಸಿದ ನಂತರ ವಿಡೀಯೋ ಮಾಡಿ ಕಳಿಸಿದ್ದೇಕೆ? ನನ್ನ ವಿರುದ್ಧ ದೊಡ್ಡ ಷಢ್ಯಂತ್ರ ನಡೆಯುತ್ತಿದೆ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ. ಅವರು ಏನೇ ಮಾಡಿದರು ನಾನು ಸುಮ್ಮನಿರುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ನನ್ನನ್ನು ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆಯುತ್ತಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ರಮೇಶ ಜಾರಕಿಹೊಳಿ ಆರಂಭದಿಂದಲೂ ಮಹಾನಾಯಕರೊಬ್ಬರು ಪ್ರಕರಣದ ಹಿಂದಿದ್ದಾರೆ ಎಂದು ಹೇಳುತ್ತಿರುವುದನ್ನು ಇದಕ್ಕೆ ತಾಳೆ ಹಾಕಿ ನೋಡುವಂತಾಗಿದೆ.
ನಾನು ಯಾವುದಕ್ಕೂ ಹೆದರುವ ಮಗನಲ್ಲ. ಹಿಂದೆ ಏನೆಲ್ಲ ನಡೆಯುತ್ತಿದೆ ಎನ್ನುವ ಮಾಹಿತಿ ನನಗಿದೆ. ಎಲ್ಲವನ್ನೂ ಸಂದರ್ಭ ಬಂದಾಗ ಬಿಚ್ಚಿಡುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣ ರಾಜಕೀಯ ತಿರುವು ಪಡೆದಿದೆ. ಕಾಂಗ್ರೆಸ್, ಬಿಜೆಪಿ ಸಮರ ಆರಂಭವಾಗಿದೆ. ಸಿಡಿ ನಕಲಿಯೋ, ಅಸಲಿಯೋ ತನಿಖೆ ನಡೆಸದೆ ಸುಮ್ಮನೆ ತಿಪ್ಪೆ ಸಾರಿಸುವ ಕೆಲಸ ನಡೆಯುತ್ತಿದೆ ಎಂದೂ ಕಾಂಗ್ರೆಸ್ ಆರೋಪಿಸಿದೆ. ಯಾರನ್ನು ವಿಚಾರಿಸಬೇಕೋ ಅವರನ್ನು ವಿಚಾರಿಸದೆ ದಾರಿ ತಪ್ಪಿಸಲಾಗುತ್ತಿದೆ ಎಂದೂ ಆರೋಪಿಸಿದೆ.
ಖಾಸಗಿ ಏಜನ್ಸಿಗಳಿಂದ ತನಿಖೆ ನಡೆಸುವುದಕ್ಕೆ ಸರಕಾರಿ ವ್ಯವಸ್ಥೆ, ಏಜನ್ಸಿಗಳ ಮೇಲೆ ಇವರಿಗೇ ನಂಬಿಕೆ ಇಲ್ಲವೇ ಎಂದೂ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಮಧ್ಯೆ ರಮೇಶ ಜಾರಕಿಹೊಳಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ನವದೆಹಲಿಯಲ್ಲಿ ಬೀಡುಬಿಟ್ಟು ಹಿರಿಯ ವಕೀಲರೊಂದಿಗೆ ಪ್ರಕರಣದ ಮುಂದಿನ ನಡೆಯ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಹಿಂದಿನಿಂದಲೂ ರಮೇಶ ಜಾರಕಿಹೊಳಿ ಅವರ ಬೆನ್ನಿಗೆ ನಿಂತಿರುವ ಬಾಲಚಂದ್ರ ಅತ್ಯಂತ ಸಂಯಮದಿಂದ ಕೆಲಸ ಮಾಡುತ್ತಿದ್ದಾರೆ. ಇಂತಹ ಕೃತ್ಯದಲ್ಲಿ ತೊಡಗುವವರಿಗೊಂದು ಪಾಠ ಕಲಿಸದೆ ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.
ಒಟ್ಟಾರೆ ರಮೇಶ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದು, ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಗೆ ಕಾರಣರಾಗಿ, ಬಿಜೆಪಿಯಲ್ಲಿ ಮತ್ತು ಸರಕಾರದಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿರುವ ಸಂದರ್ಭದಲ್ಲಿ ನಡೆದಿರುವ ಈ ಪ್ರಕರಣ ಅವರನ್ನು, ಸರಕಾರವನ್ನು ಮತ್ತು ಬಿಜೆಪಿಯನ್ನು ಅಲ್ಲಾಡುವಂತೆ ಮಾಡಿದೆ.
ಮುಂದಿನ ದಿನಗಳಲ್ಲಿ ಇದು ರಾಜಕೀಯದ ದಿಕ್ಕನ್ನು ನಿರ್ಧರಿಸುವ ಹಂತಕ್ಕೆ ಹೊಗಬಹದೆಂದೇ ವಿಶ್ಲೇಷಿಸಲಾಗುತ್ತಿದೆ.
ಭಾನುವಾರ ಸಂಜೆಯ ಹೊತ್ತಿಗೆ ಇಲ್ಲವೇ ಸೋಮವಾರ ಇಡೀ ಪ್ರಕರಣದ ತನಿಖೆ ಸಾಗಬೇಕಾದ ದಿಕ್ಕನ್ನು ಗೃಹ ಇಲಾಖೆ ನಿರ್ಧರಿಸಬೇಕಿದೆ. ಮೇಲ್ನೋಟಕ್ಕೆ ಒಂದಿಷ್ಟು ತನಿಖೆ ನಡೆಸಿ ಮುಗಿಸಲಾಗುತ್ತದೆಯೋ… ಎಲ್ಲವೂ ಒಂದೆರಡು ದಿನದಲ್ಲಿ ಗೊತ್ತಾಗಲಿದೆ.
ಸಂಚುಕೋರರೊಂದಿಗೆ ಸೇರಿ ಯುವತಿ ವಿಡೀಯೋ ಬಿಡುಗಡೆ -ರಮೇಶ ಜಾರಕಿಹೊಳಿ
ರಮೇಶ್ ಜಾರಕಿಹೊಳಿಯೇ ಸಿಡಿ ಬಿಡುಗಡೆ ಮಾಡಿದ್ದಾರೆ – ಸಂತ್ರಸ್ತೆ ಎನ್ನಲಾದ ಯುವತಿಯ ಹೇಳಿಕೆ
ಸಿಡಿ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಯತ್ನ ನಡೆದಿದೆ, ನಾನು ಹೆದರುವ ಮಗನಲ್ಲ – ಡಿ.ಕೆ.ಶಿವಕುಮಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ