Karnataka NewsLatestNationalPolitics

*ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ಸುಳ್ಳು ಸಂದೇಶ; ಪ್ರಲ್ಹಾದ ಜೋಶಿ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ನವದೆಹಲಿ: ‘ಕೇಂದ್ರ ಸರ್ಕಾರದಿಂದ ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ಎಂಬುದು ನಕಲಿ ಸಂದೇಶವಾಗಿದ್ದು, ಸಾರ್ವಜನಿಕರು ಇದನ್ನು ನಂಬಿ ಮೋಸ ಹೋಗಬಾರದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವಾಲಯದ (MNRE) ಹೆಸರಿನಲ್ಲಿ ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿ, ಸಂದೇಶಗಳನ್ನು ಬಿತ್ತರಿಸಲಾಗುತ್ತಿದೆ. ಈ ಬಗ್ಗೆ ನಾಗರಿಕರು ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದ್ದಾರೆ.

ಕೇಂದ್ರ ನವೀಕರಿಸಬಹುದಾದ ಇಲಾಖೆಯಿಂದ ‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ಯೋಜನೆಯನ್ನು ಪರಿಚಯಿಸಿಲ್ಲ. ‎ನಾಗರಿಕರನ್ನು ದಾರಿ ತಪ್ಪಿಸುವ, ವಂಚಿಸುವ ಉದ್ದೇಶದಿಂದ ಕೆಲವರು MNRE ಹೆಸರಲ್ಲಿ ಹೀಗೆ ಸುಳ್ಳು ಸಂದೇಶಗಳನ್ನು ಹರಿ ಬಿಡುತ್ತಿದ್ದಾರೆ. ಇದೆಲ್ಲಾ ಫೇಕ್ ಆಗಿರುತ್ತದೆ ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರೂ ಆಗಿರುವ ಪ್ರಲ್ಹಾದ ಜೋಶಿ ಅವರೇ ಸ್ಪಷ್ಟಪಡಿಸಿದ್ದಾರೆ.

Home add -Advt

ನವೀಕರಿಸಬಹುದಾದ ಇಂಧನ ಸಚಿವಾಲಯದ (MNRE) ಹೆಸರಿನಲ್ಲಿ ನಕಲಿ ಸಂದೇಶಗಳು ಹರಿದಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ನಾಗರಿಕರು ಇಂಥ ನಕಲಿ ಸಂದೇಶಗಳ ಬಗ್ಗೆ ಸದಾ ಜಾಗೃತರಾಗಿರಬೇಕು. ಸಚಿವಾಲಯದ ಅಧಿಕೃತ ವೆಬ್‌ಸೈಟ್ ಮತ್ತು ಪರಿಶೀಲಿತ (Verified) ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಅಧಿಕೃತ ಮಾಹಿತಿಯನ್ನಷ್ಟೇ ನಂಬಬೇಕು ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿನ ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಪರಿಶೀಲಿಸದೇ ಯಾವುದೇ ಸಂದೇಶಗಳನ್ನು ಫಾರ್ವರ್ಡ್ ಮಾಡಬಾರದು ಹಾಗೂ ಬ್ಯಾಂಕಿಂಗ್, ಹಣಕಾಸು ಅಥವಾ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಲೂಬಾರದು ಎಂದು ಎಚ್ಚರಿಸಿದ್ದಾರೆ.

ಯಾವುದೇ ಸುದ್ದಿ, ಸಂದೇಶಗಳ ಬಗೆಗೆ ಅಧಿಕೃತ ವೆಬ್ ಸೈಟ್ ಹಾಗೂ ಸುದ್ದಿ ಸಂಸ್ಥೆಗಳನ್ನಷ್ಟೇ ಅನುಸರಿಸಬೇಕು. ಸರ್ಕಾರದ ಯೋಜನೆಗಳಿಗೆ ಇಲಾಖಾ ಅಧಿಕೃತ ವೆಬ್ ಸೈಟ್, ಜಾಹೀರಾತು, ಮಾಧ್ಯಮ ಪ್ರಕಟಣೆಗಳನ್ನು ಮಾತ್ರ ನಂಬಬೇಕು. ನಕಲಿ ಸಂದೇಶಗಳಿಂದ ಜಾಗರೂಕರಾಗಿರಬೇಕು ಎಂದು ದೇಶದ ನಾಗರಿಕರನ್ನು ಎಚ್ಚರಿಸಿದ್ದಾರೆ ಸಚಿವ ಪ್ರಲ್ಹಾದ ಜೋಶಿ ಅವರು.

Related Articles

Back to top button