Latest

ಚಂದ್ರಗ್ರಹಣ ಹಿನ್ನೆಲೆ; ಯಾವ ದೇವಾಲಯಗಳು ಬಂದ್? ಯಾವ ದೆವಾಲಯಗಳು ಓಪನ್?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದು ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳು ಬಂದ್ ಆಗಲಿದ್ದು, ಇನ್ನು ಕೆಲ ದೇವಾಲಯಗಳಲ್ಲಿ ಭಕ್ತರಿಗೆ ಎಂದಿನಂತೆ ಬಾಗಿಲು ತೆರೆದಿರಲಿದೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಇಂದು ಭಕ್ತರಿಗೆ ದೇವರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಗ್ರಹಣ ಮುಗಿಯುವವರೆಗೂ ದೇವಾಲಯದ ಬಾಗಿಲು ಬಂದ್ ಆಗಿರಲಿದೆ.

ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಗ್ರಹಣ ಸ್ಪರ್ಶಕಾಲ, ಮೋಕ್ಷಕಾಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದ್ದು, ದೇವಾಲಯದಲ್ಲಿ ಎಂದಿನಂತೆ ಪೂಜೆ ನಡೆಯಲಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದ ನಿಮಿಷಾಂಭ, ಶ್ರೀರಂಗನಾಥ ಸ್ವಾಮಿ ದೇವಾಲಯ ಹಾಗೂ ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇವಾಲಯಗಳು ಬಂದ್ ಆಗಲಿವೆ. ನಿಮಿಷಾಂಭ ದೇವಾಲಯ ಮಧ್ಯಾಹ್ನ 12 ಗಂಟೆಗೆ ಬಂದ್ ಆಗಲಿದ್ದು, ಸಂಜೆ 7ಗಂಟೆಯವರೆಗೂ ದೇವಾಲಯ ತೆರೆದಿರುವುದಿಲ್ಲ. ಗ್ರಹಣ ಮೋಕ್ಷದ ಬಳಿಕ ದೇವಾಲಯ ಬಾಗಿಲು ತೆರೆಯಲಿದ್ದು, ಶುದ್ಧಿಕಾರ್ಯದ ಬಳಿಕ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.

ಇನ್ನು ಬೆಂಗಳೂರಿನ ದೊಡ್ಡಗಣಪತಿ ದೇವಾಲಯ, ಕಾಡುಮಲ್ಲೇಶ್ವರ ದೇವಾಲಯಗಳು ಇಂದು ಬಂದ್ ಆಗಲಿದೆ. ಕಾಡುಮಲ್ಲೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 10:30ವರೆಗೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶವಿದ್ದು, ರುದ್ರಾಭಿಷೇಕ, ಮಹಾಮಂಗಳಾರತಿ ನಡೆಯಲಿದೆ. 10:30ರ ಬಳಿಕ ಸಂಜೆ 6:30ರವರೆಗೂ ಗ್ರಹಣ ಮೋಕ್ಷ ಕಾಲದವರೆಗೂ ದೇವಾಲಯದ ಬಾಗಿಲು ಬಂದ್ ಆಗಲಿದೆ. ನಂತರದಲ್ಲಿ ಶುದ್ಧಿಕಾರ್ಯ ನಡೆದು ಪೂಜೆ ನೆರವೇರಿಸಲಾಗುತ್ತಿದೆ.

ಇನ್ನು ಬೆಳಗಾವಿ ಜಿಲ್ಲೆ ಸವದತ್ತಿ ದೇವಾಲಯ ಎಂದಿನಂತೆ ತೆರೆದಿರಲಿದ್ದು, ಪೂಜಾಕಾರ್ಯಗಳು ನಡೆಯಲಿವೆ. ಆದರೆ ಭಕ್ತರಿಗೆ ತೀರ್ಥ ಹಾಗೂ ಪ್ರಸಾದ ವಿತರಣೆ ಇರುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button