ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಬಂಡಾಯ ಸಾಹಿತಿ ಚಂಪಾ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –  ಕನ್ನಡದ ಹಿರಿಯ ಸಾಹಿತಿ, ಬಂಡಾಯಗಾರ, ಕನ್ನಡದ ಅಸ್ಮಿತೆ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆಗಿದ್ದ ಡಾ.ಚಂದ್ರಶೇಖರ ಪಾಟೀಲ್ ( ಚಂಪಾ)(83) ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕೂಡ ಅವರು ಕೆಲಸ ಮಾಡಿದ್ದರು.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಗಿನಜಾವ 6 ಗಂಟೆಗೆ ನಿಧನರಾದರು. ಅವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಬೆಂಗಳಊರಿನಲ್ಲಿ ಸೋಮವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

ಕನ್ನಡ ನಾಡು-ನುಡಿ, ಸಂಸ್ಕೃತಿಯ ರಕ್ಷಣೆಗಾಗಿ ನಿರಂತರ ಹೋರಾಡುತ್ತಾ ಬಂದಿರುವ ಚಂಪಾರವರಿಗೆ ಬಂದಿರುವ ಪ್ರಶಸ್ತಿ ಗೌರವಗಳು ಹಲವಾರು. ಇವುಗಳಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ (1960, 74, 76), ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ, ಸಂದೇಶ್‌ ಮಾಧ್ಯಮ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಮುಂತಾದವುಗಳು ಪ್ರಮುಖವಾಗಿವೆ.2017 ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು 2018 ಸಾಲಿನಲ್ಲಿ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ವಿಭಿನ್ನ ನೆಲೆಗಳ ಚಂದ್ರಶೇಖರ ಪಾಟೀಲರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ ೧೯೩೯ರ ಜೂನ್‌ ೧೮ರಂದು. ತಂದೆ ಬಸವರಾಜ ಹಿರೇಗೌಡರು, ತಾಯಿ ಮುರಿಗೆವ್ವ. ಚಂದ್ರಶೇಖರ ಪಾಟೀಲರು ಸಾಹಿತ್ಯ ಲೋಕದಲ್ಲಿ ಚಂಪಾ ಎಂಬ ಹೆಸರಿನಿಂದ ಪ್ರಖ್ಯಾತರು.

ಪಾಟೀಲರ ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ಮತ್ತು ಪ್ರೌಢಶಿಕ್ಷಣ ಧಾರವಾಡದಲ್ಲಿ ನೆರವೇರಿತು. ಅವರ ತಂದೆಯವರಿಗೆ ಇಂಗ್ಲಿಷ್‌ ಬಗ್ಗೆ ಅಭಿಮಾನವಿದ್ದುದರಿಂದ ಅದರಿಂದ ಪ್ರೇರಿತರಾಗಿ ಇಂಗ್ಲಿಷ್ ಎಂ.ಎ. ಪದವಿ ಗಳಿಸಿದರು. ಇದಲ್ಲದೆ ಬ್ರಿಟಿಷ್‌ ಕೌನ್ಸಿಲ್‌ ವಿದ್ಯಾರ್ಥಿವೇತನ ಪಡೆದು ಇಂಗ್ಲೆಂಡಿನ ಲೀಡ್ಸ್‌ ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ರದಲ್ಲಿನ ಸ್ನಾತಕೋತ್ತರ ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಇಂಗ್ಲಿಷ್‌ ಸಂಸ್ಥೆಯಿಂದ ಇಂಗ್ಲಿಷ್‌ ಅಧ್ಯಯನದ ಡಿಪ್ಲೊಮ ಪಡೆದರು. ಶಿಕ್ಷಣದ ಪ್ರತಿ ಹಂತದಲ್ಲಿಯೂ ಆಗ್ರ ಶ್ರೇಯಾಂಕ ಗಳಿಸಿದ ಕೀರ್ತಿ ಅವರದ್ದಾಗಿತ್ತು

ಚಂದ್ರಶೇಖರ ಪಾಟೀಲರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಉಪನ್ಯಾಸಕರಾಗಿ ಬೋಧಕ ವೃತ್ತಿ ಆರಂಭಿಸಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಲೇ ತಮ್ಮ ಕಾವ್ಯ ಹಾಗೂ ನಾಟಕಗಳ ಮೂಲಕ ಪ್ರಸಿದ್ಧರಾಗುತ್ತಾ ಬಂದರು. ಅವರು ಹಾವೇರಿಯ ಮುನಿಸಿಪಲ್‌ ಹೈಸ್ಕೂಲಿನಲ್ಲಿದ್ದಾಗಲೇ ಕವನ ಬರೆಯುವುದರ ಬಗ್ಗೆ ಆಸಕ್ತಿ ಮೂಡಿಸಿಕೊಂಡಿದ್ದರು. ಅರವಿಂದರ ಬಗ್ಗೆ ಭಾವೋದ್ವೇಗದಿಂದ ಮಾತನಾಡುತ್ತಿದ್ದ ಗಂಗಾಧರ ಸವದತ್ತಿ ಮಾಸ್ತರರು, ವ್ಯಂಗ್ಯ ಶೈಲಿಯಲ್ಲಿ ಬದುಕಿನ ಹಾಗೂ ಭಾಷೆಯ ಎಳೆಗಳನ್ನು ಬಿಚ್ಚಿಡುತ್ತಿದ್ದ ಆರ್.ವಿ.ಕುಲಕರ್ಣಿ (ಪ್ರಬಂಧಕಾರರಾದ ರಾ.ಕು.) ಮತ್ತು ಗಣಿತದ ಪ್ರಮೇಯಗಳನ್ನು ಬಿಡಿಸುವ ಮುನ್ನ ಹಿಂದಿನ ರಾತ್ರಿ ಬರೆದಿದ್ದ ಕವನಗಳನ್ನೂ ವಾಚಿಸಲು ಪ್ರಾರಂಭಿಸುತ್ತಿದ್ದ ಪಿ.ಜಿ. ಬಿದರಿಮಠ ಮಾಸ್ತರು – ಹೀಗೆ ಹಲವಾರು ಮಂದಿ ಇವರ ಎಳೆ ವಯಸ್ಸಿನಲ್ಲಿಯೇ ಸಾಹಿತ್ಯದ ಪ್ರಭಾವ ಬೀರಿದ್ದರು. ಧಾರವಾಡದ ಕಾಲೇಜಿಗೆ ಬಂದಾಗ ಪ್ರಿನ್ಸಿಪಾಲರಾಗಿದ್ದ ವಿ.ಕೃ. ಗೋಕಾಕರು ನವ್ಯಕಾವ್ಯ ನಿರ್ಮಿತಿಯ ನೇತಾರರಲ್ಲೊಬ್ಬರಾಗಿದ್ದು, ಇವರ ಪ್ರಭಾವಕ್ಕೆ ಒಳಗಾಗಿ ಕವನಗಳನ್ನೂ ಬರೆಯತೊಡಗಿ, ಅವುಗಳಲ್ಲಿ ಹಲವಾರು ಕವನಗಳು ‘ಪ್ರಪಂಚ’ ಪತ್ರಿಕೆಯಲ್ಲಿ ಪ್ರಕಟಗೊಂಡವು. ಕಾವ್ಯದಲ್ಲಿ ಬೆಳೆದ ಆಸಕ್ತಿಯಿಂದ, ಹಲವಾರು ಮಂದಿ ಉದಯೋನ್ಮುಖರು ಸೇರಿ ‘ಕಮಲ ಮಂಡಲ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.

೧೯೫೭ರಲ್ಲಿ ಚಂದ್ರಶೇಖರ ಪಾಟೀಲರು ಹೊಂಗನಸ ಹಡಗು, ನಾಳಿಗಿದೋ ಸ್ವಾಗತ, ಚರಿಪನಾದವೊ ಹಾಡು ಹಕ್ಕಿಯೋ ಮುಂತಾದ ಕವನಗಳು ಪ್ರಕಟಗೊಂಡ ನಂತರ # ಬಾನುಲಿ # ಮಧ್ಯಬಿಂದು. # ಗಾಂಧೀ ಸ್ಮರಣೆ

ಕಾವ್ಯಕೃಷಿಯಲ್ಲೇ ತೊಡಗಿಸಿಕೊಂಡಿದ್ದ ಚಂಪಾರವರು ಹಲವಾರು ಸಮಸ್ಯೆಗಳ ಮಿಡಿತಕ್ಕೆ ಒಳಗಾಗಿ ಕಾವ್ಯ ಮಾಧ್ಯಮದಿಂದ ನಾಟಕಮಾಧ್ಯಮವನ್ನೂ ಆಯ್ದುಕೊಂಡು ಹಲವಾರು ನಾಟಕಗಳನ್ನೂ ರಚಿಸಿದ್ದು ಅವುಗಳಲ್ಲಿ ಕೊಡೆಗಳು, ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ಮುಂತಾದವುಗಳು ಪ್ರಖ್ಯಾತವಾಗಿವೆ.

ಚಂಪಾ ಇವರ ಸಂಪಾದಿತ ಕೃತಿಗಳೆಂದರೆ ಸಂಕ್ರಮಣ ಕಾವ್ಯ, ಗಾಂಧಿ ಗಾಂಧಿ, ಜೂನ್‌ ೭೫-ಮಾರ್ಚ್ ೭೭, ಬಂಡಾಯ ಮತ್ತು ಸಾಹಿತ್ಯ, ನೆಲ್ಸನ್‌ಮಂಡೇಲಾ, ಕನ್ನಡನಾಡಿಗೊಂದು ಪ್ರಾದೇಶಿಕ ಪಕ್ಷ, ಸಂಕ್ರಮಣ ಸಾಹಿತ್ಯ (೩ ಸಂಪುಟಗಳಲ್ಲಿ), ಗಾಂಧಿ ಎನ್ನುವ ಹೆಸರು ಮುಂತಾದವುಗಳು. ಪಾಟೀಲರ ಇತರ ಕೃತಿಗಳೆಂದರೆ ಬೇಂದ್ರೆ-ನಾ ಕಂಡಂತೆ, ನನಗೆ ಕಂಡಷ್ಟು, ೨೬ ದಿನ ೨೫ ರಾತ್ರಿ, ಕನ್ನಡ ಕನ್ನಡ ಬರ್ರಿ‍ ನಮ್ಮ ಸಂಗಡ ಮತ್ತು ಇಂಗ್ಲಿಷ್‌ನಲ್ಲಿ ರಚಿಸಿದ ಕೃತಿ AT THE OTHER END ಮುಂತಾದವು.

ಪೂರ್ಣರೂಪದ ಸಾಹಿತ್ಯ ಪತ್ರಿಕೆಯೊಂದರ ಅವಶ್ಯಕತೆಯನ್ನು ಮನಗಂಡ ಚಂದ್ರಶೇಖರ ಪಾಟೀಲರು ಸಮಾನ ಮನಸ್ಕರೊಡನೆ ಸಮಾಲೋಚಿಸಿ ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ, ಇವರುಗಳೊಡನೆ ಸೇರಿ ೧೯೬೪ರಲ್ಲಿ ಪ್ರಾರಂಭಿಸಿದ ಪತ್ರಿಕೆ ‘ಸಂಕ್ರಮಣ’. ಈ ಪತ್ರಿಕೆಯು ನವ್ಯದ ಉಚ್ಛ್ರಾಯ ಸ್ಥಿತಿಯಲ್ಲಿ ಪ್ರಾರಂಭವಾಗಿದ್ದು ಎಪ್ಪತ್ತರ ದಶಕದ ನಂತರ ದಲಿತ, ಬಂಡಾಯ ಸಾಹಿತ್ಯ ಚಳವಳಿ ಮುಂತಾದವುಗಳನ್ನು ಒಳಗೊಂಡು ಹಲವಾರು ಯುವ ಬರಹಗಾರರಿಗೆ ವೇದಿಕೆಯನ್ನು ಕಲ್ಪಿಸಿದ ಪತ್ರಿಕೆಯಾಗಿ ಐದು ದಶಕಗಳಿಗೂ ಹೆಚ್ಚು ಕಾಲದಿಂದ ಪ್ರಕಟವಾಗುತ್ತಿದೆ.

ಚಂದ್ರಶೇಖರ ಪಾಟೀಲರು ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಧಾರವಾಡದಲ್ಲಿದ್ದಾಗಿನಿಂದಲೂ ಕನ್ನಡ ಪರ ಕಾಳಜಿ ವಹಿಸಿ, ಕನ್ನಡ ಪರ ಹೋರಾಟವನ್ನು ನಡೆಸುತ್ತಾ ಬಂದವರು. ಹಲವಾರು ಸಂಘಟನೆಗಳಲ್ಲಿ ಪ್ರಮುಖ ಪಾತ್ರವಹಿಸಿದವರು.

ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ, ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಧಾರವಾಡ ನಾಟಕ ಕೂಟದ ಕಾರ್ಯದರ್ಶಿಯಾಗಿ, ಮ್ಯಾಳ ನಾಟಕ ಸಂಘದ ಕಾರ್ಯಾಧ್ಯಕ್ಷರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ವಿಶ್ವಚೇತನ ಸಾಂಸ್ಕೃತಿಕ ವೇದಿಕೆಯ ನಿಯೋಜಕರಾಗಿ-ಹೀಗೆ ಹಲವು ಹತ್ತು ಸಂಘಟನೆಗಳಲ್ಲೂ, ಗೋಕಾಕ ಚಳವಳಿ ಮುಂತಾದ ಅನೇಕ ಜನಪರ ಚಳವಳಿಗಳಲ್ಲೂ ತಮನ್ನು ತೊಡಗಿಸಿಕೊಂಡವರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ೨೬ದಿನ ೨೫ರಾತ್ರಿ ಜೈಲುವಾಸವನ್ನನುಭವಿಸಿದರು.

ಕನ್ನಡಕ್ಕಾಗಿ ದುಡಿಯುತ್ತಿದ್ದ ಚಂದ್ರಶೇಖರ ಪಾಟೀಲರನ್ನು ಕರ್ನಾಟಕ ಸರ್ಕಾರವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಿತು. ೧೯೯೬-೯೯ರ ಅವಧಿಗೆ ಈ ಜವಾಬ್ಧಾರಿಯನ್ನು ನಿರ್ವಹಿಸುವುದರ ಜೊತೆಗೆ ೨೦೦೪-೦೮ ಅವಧಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಅವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಪರಿಷತ್ತನ್ನು ಪ್ರಬಲ ಹೋರಾಟದ ವೇದಿಕೆಯನ್ನಾಗಿ ರೂಪಿಸಿದ್ದು, ಪುಸ್ತಕ ಮಾರಾಟದ ಮೂಲಕ ಸಣ್ಣ ಪ್ರಮಾಣದ ಪ್ರಕಾಶಕರನ್ನು ಉತ್ತೇಜಿಸಲು ‘ಪುಸ್ತಕ ಸಂತೆ’ಯನ್ನು ಪ್ರತಿ ಶನಿವಾರ ಸಂಜೆ ಏರ್ಪಡಿಸಿದ್ದರ ಜೊತೆಗೆ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಿಕ್ಷಣ ಸಮಸ್ಯೆಯನ್ನು ಪರಿಹರಿಸಲು ಉನ್ನತ ಮಟ್ಟದ ಸಮಾಲೋಚನ ಸಭೆಯನ್ನು ಏರ್ಪಡಿಸಿದ್ದು, ಗಡಿನಾಡ ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕಾಗಿ ಅಧ್ಯಕ್ಷರ ಪುಸ್ತಕ ನಿಧಿಯನ್ನು ಪ್ರಾರಂಭಿಸಿದ್ದು, ಕನ್ನಡ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ದೊರೆಯುವಂತಾಗಲು ಹೋರಾಟ ನಡೆಸಿದ್ದು, ಪರಿಷತ್ತಿಗೆ ತನ್ನದೇ ಆದ ವೆಬ್‌ಸೈಟ್‌, ಅಂತರ್ಜಾಲ ಸೌಲಭ್ಯಗಳು, ಗಣಕ ಸಮ್ಮೇಳನದ ಆಯೋಜನೆ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದರು.

 

 ಬೆಳಗಾವಿ: ನೂರಕ್ಕೂ ಅಧಿಕ ಸಿಬ್ಬಂದಿ ನೇಮಿಸಲು ನಿರ್ಧಾರ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button