*ಚಂದ್ರಯಾನ-3 ಯಶಸ್ವಿ: ಮಕ್ಕಳಿಗೆ ವಿಕ್ರಮ್-ಪ್ರಜ್ಞಾನ್ ಎಂದು ನಾಮಕರಣ ಮಾಡಿ ಸಂಭ್ರಮಿಸಿದ ಕುಟುಂಬ*
ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಭಾರತದ ಇಸ್ರೋ ವಿಜ್ಞಾನಿಗಳ ಸಾಧನೆ ಚಂದ್ರಯಾನ-3 ಯಶಸ್ಸನ್ನು ಪ್ರಪಂಚದಾದ್ಯಂತ ಕೊಂಡಾಡುತ್ತಿದ್ದಾರೆ. ದೇಶಾದ್ಯಂತ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಚಂದ್ರಯಾನ-3 ಯಶಸ್ವಿ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ನವಜಾತ ಶಿಶುಗಳಿಗೆ ಚಂದ್ರಯಾನದ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಹೆಸರಗಳನ್ನು ನಾಮಕರಣ ಮಾಡಲಾಗುತ್ತಿರುವುದು ವಿಶೇಷ.
ಯಾದಗಿರಿಯಲ್ಲಿ ಕಳೆದ ಒಂದುತಿಂಗಳ ಅಂತರದಲ್ಲಿ ಒಂದೇ ಕುಟುಂಬದಲ್ಲಿ ಇಬ್ಬರು ಗಂಡುಮಕ್ಕಳು ಜನಿಸಿದ್ದು, ಈ ಮಕ್ಕಳಿಗೆ ಇಂದು ವಿಕ್ರಮ್ ಹಾಗೂ ಪ್ರಜ್ಞಾನ್ ಎಂದು ನಾಮಕರಣ ಮಾಡಲಾಯಿತು. ಈ ಮೂಲಕ ದಂಪತಿ ಚಂದ್ರಯಾನ-3 ಯಶಸ್ವಿ ಸಂಭ್ರಮವನ್ನು ಆಚರಿಸಿದ್ದಾರೆ.
ಯಾದಗಿರಿಯ ವಡಗೇರ ಪಟ್ಟಣದಲ್ಲಿ ಒಂದೇ ಕುಟುಂಬದಲ್ಲಿ ಜನಿಸಿದ ಇಬ್ಬರು ಮಕ್ಕಳಿಗೆ ಇಂದು ನಾಮಕರಣ ಮಡಲಾಗಿದ್ದು, ಬಾಲಪ್ಪ ಹಾಗೂ ನಾಗಮ್ಮ ದಂಪತಿ ತಮ್ಮ ಮಗುವಿಗೆ ವಿಕ್ರಮ್ ಎಂದು ನಾಮಕರಣ ಮಾಡಿದರೆ, ನಿಂಗಪ್ಪ ಹಾಗೂ ಶಿವಮ್ಮ ದಂಪತಿ ತಮ್ಮ ಮಗುವಿಗೆ ಪ್ರಜ್ಞಾನ್ ಎಂದು ನಾಮಕರಣ ಮಾಡಿದ್ದಾರೆ. ಈ ಮೂಲಕ ಚಂದ್ರಯಾನ ಯಶಸ್ವಿಗೊಳಿಸಿದ ಇಸ್ರೋ ವಿಜ್ಞಾನಿಗಳ ಸಾಧನೆಗೆ ಇಡೀ ಕುಟುಂಬ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಮಕ್ಕಳಿಗೆ ವಿಕ್ರಮ್, ಪ್ರಜ್ಞಾನ್ ಹೆಸರಿಟ್ಟು ಸಾರ್ಥಕತೆ ಮೆರೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ