Kannada NewsKarnataka News
ರಾಜಹಂಸಗಡ ಅಭಿವೃದ್ಧಿ ಕ್ರೆಡಿಟ್ ಪಡೆಯಲು ಹೊರಟ್ಟಿದ್ದ ಬಿಜೆಪಿಗೆ ಶಾಕ್ ಕೊಟ್ಟ ಚನ್ನರಾಜ ಹಟ್ಟಿಹೊಳಿ!
ದಾಖಲೆ ಸಹಿತ ಸಂಜಯ ಪಾಟೀಲ್ ಗೆ ಉತ್ತರ ನೀಡಿದ ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ರಾಜಹಂಸಗಡ ಅಭಿವೃದ್ಧಿ ವಿಷಯವಾಗಿ ದಾಖಲೆ ಇದ್ದರೆ ತೋರಿಸಿ ಎನ್ನುವ ಮಾಜಿ ಶಾಸಕ ಸಂಜಯ ಪಾಟೀಲ್ ಸವಾಲಿಗೆ ವಿಧಾನ ಪರಿಷತ್ ಸದಸ್ಯ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ದಾಖಲೆಗಳನ್ನು ಮುಂದಿಟ್ಟು ಖಡಕ್ ತಿರುಗೇಟು ನೀಡಿದ್ದಾರೆ.
ಸಂಜಯ ಪಾಟೀಲ ಅವರು ಕೆಲವು ದಿನಗಳ ಹಿಂದೆ ರಾಜಹಂಸಗಡ ಅಭಿವೃದ್ಧಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ವಿಷಯವಾಗಿ ತಾವು ಹೋರಾಟ ಮಾಡಿದ ಬಗ್ಗೆ ದಾಖಲೆಗಳಿವೆ, ಲಕ್ಷ್ಮೀ ಹೆಬ್ಬಾಳಕರ್ ಅವರು ದಾಖಲೆ ಇದ್ದರೆ ತೋರಿಸಿ ಮಾತನಾಡಲಿ ಎಂದು ಸವಾಲೆಸೆದಿದ್ದರು.
ಇದೀಗ ಚನ್ನರಾಜ ಹಟ್ಟಿಹೊಳಿ ಈ ಬಗ್ಗೆ ಸಮಗ್ರ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಜೊತೆಗೆ ವಿಡಿಯೋ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಡಿ.ಕೆ.ಶಿವಕುಮಾರ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರು. ಆಗ ಶಿವಾಜಿ ಮಹಾರಾಜರ ಮೂರ್ತಿಯ ಸಲುವಾಗಿ ಲಕ್ಷ್ಮೀ ಹೆಬ್ಬಾಳಕರ್ ಅವರು 50 ಲಕ್ಷ ರೂ. ಅನುದಾನ ಕೇಳಿದ್ದ ಪತ್ರ ಮತ್ತು ಅದನ್ನು ಬಿಡುಗಡೆ ಮಾಡಿದ ಆದೇಶ ಎರಡನ್ನೂ ಚನ್ನರಾಜ ಬಿಡುಗಡೆ ಮಾಡಿದ್ದಾರೆ.
ಅಲ್ಲದೆ, ನಂತರ ಪ್ರವಾಸೋದ್ಯಮ ಸಚಿವರಾಗಿದ್ದ ಸಾ.ರಾ.ಮಹೇಶ ಅವರ ಬಳಿ ರಾಜಹಂಸಗಡ ಕೋಟೆ ಆವರಣ ಸುಧಾರಣೆಗೆ ಲಕ್ಷ್ಮೀ ಹೆಬ್ಬಾಳಕರ್ ಅವರು 5 ಕೋಟಿ ರೂ. ಕೇಳಿದ್ದರು. ಆ ಪತ್ರ ಮತ್ತು ಅದಕ್ಕೆ ಒಪ್ಪಿದ ಸಾ.ರಾ.ಮಹೇಶ ಹಣ ಬಿಡುಗಡೆಗೆ ಹೊರಡಿಸಿದ ಆದೇಶ ಎರಡನ್ನು ಸಹ ಬಿಡುಗಡೆ ಮಾಡಿದ್ದಾರೆ.
ಆದರೆ ಬದಲಾದ ಸಮಯದಲ್ಲಿ ಸಮ್ಮಿಶ್ರ ಸರಕಾರ ಪತನವಾದ ನಂತರ ಬಂದ ಬಿಜೆಪಿ ಸರಕಾರದ ಸಚಿವರಾಗಿದ್ದ ಸಿ.ಟಿ.ರವಿ ಅವರು 5 ಕೋಟಿ ರೂ. ತಡೆ ಹಿಡಿದು 3 ಕೋಟಿ ಮಂಜೂರು ಮಾಡಿದರು. ಆ ಕುರಿತ ಪತ್ರವನ್ನೂ ಬಿಡುಗಡೆ ಮಾಡಿರುವ ಚನ್ನರಾಜ, ಆ 3 ಕೋಟಿ ರೂ. ಸಹ ಸಿ.ಟಿ.ರವಿ ಅವರ ಸಮಯದಲ್ಲಿ ಬರಲೇ ಇಲ್ಲ. ತದನಂತರ ಆನಂದ ಸಿಂಗ್ ಅವರು ಸಚಿವರಾದ ನಂತರ ಮತ್ತೆ ಲಕ್ಷ್ಮೀ ಹೆಬ್ಬಾಳಕರ್ ಅವರು ವಿನಂತಿಸಿದಾಗ ಆ ಅನುದಾನವನ್ನು ರಾಜಹಂಸಗಡ ಅಭಿವೃದ್ಧಿಗೆ ಬಿಡುಗಡೆ ಮಾಡಿದರು. 2022ರ ಜೂನ್ ತಿಂಗಳಲ್ಲಿ ಟೆಂಡರ್ ಮೂಲಕ ಪ್ರಕ್ರಿಯೆ ಆರಂಭವಾಯಿತು ಎಂದು ತಿಳಿಸಿ, ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಸತತ ಪ್ರಯತ್ನದಿಂದಾಗಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ 50 ಲಕ್ಷ ರೂ. ಹಾಗೂ ಕೋಟೆ ಅಭಿವೃದ್ಧಿಗೆ 3 ಕೋಟಿ ರೂ. ಬಿಡುಗಡೆಯಾಗಿದೆ. ಎಲ್ಲವೂ ಲಕ್ಷ್ಮೀ ಹೆಬ್ಬಾಳಕರ್ ಅವರ ಪ್ರಯತ್ನದಿಂದ ಬಂದಿದೆ. ಸಂಜಯ ಪಾಟೀಲ ಅವರು ಹೇಳುವ ಎಲ್ಲ ವಿಷಯಗಳೂ ಸತ್ಯಕ್ಕೆ ದೂರವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದರಿಂದಾಗಿ ರಾಜಹಂಸಗಡ ಅಭಿವೃದ್ಧಿ ಮತ್ತು ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿಷಯವಾಗಿ ಕ್ರೆಡಿಟ್ ಪಡೆಯಲು ಮುಂದಾಗಿದ್ದ ಬಿಜೆಪಿಗೆ ಬಿಗ್ ಶಾಕ್ ನೀಡಿದಂತಾಗಿದೆ.
https://pragati.taskdun.com/who-is-ramesh-jarakiholi-you-are-flirting-with-fire-be-careful-channaraja-shouted/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ