ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ತಪಸ್ಸು ಮಾಡಿ ಆ ಸ್ಥಾನಕ್ಕೇರಿರುವ ಮಠಾಧೀಶರ ದರ್ಶನ ಮತ್ತು ಆಶಿರ್ವಾದ ಪಡೆಯುವುದೇ ಒಂದು ಭಾಗ್ಯ. ಅವರ ಪಾದ ಸ್ಪರ್ಷದಿಂದ ನಮ್ಮ ಜೀವನ ಪಾವನವಾಗುತ್ತದೆ. ಅಂತವರ ಸಂಗದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಬೆಳಗಾವಿ ತಾಲೂಕಿನ ಅರಳೀಕಟ್ಟಿ ಗ್ರಾಮದ ಶ್ರೀ ತೋಂಟದಾರ್ಯ ವಿರಕ್ತ ಮಠದ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳ ಮೌನಾನುಷ್ಠಾನ ಮಂಗಲ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು. ಜೀವನದಲ್ಲಿ ಎಲ್ಲವನ್ನೂ ತೊರೆದು ಸನ್ಯಾಸತ್ವ ಸ್ವೀಕರಿಸಿ ಕಠಿಣವಾದ ಆಚರಣೆಯೊಂದಿಗೆ ಮಠಾಧೀಶರಾಗುವುದು ಸುಲಭದ ಮಾತಲ್ಲ. ನಮಗೆ ಆ ರೀತಿಯ ಜೀವನ ಸಾಧ್ಯವಿಲ್ಲ. ಆದರೆ ಬದುಕಿನ ಕೆಲವು ಕ್ಷಣಗಳನ್ನು ಅವರೊಂದಿಗೆ ಕಳೆಯುವುದೇ ದೊಡ್ಡ ಪುಣ್ಯ ಎಂದು ಅವರು ಹೇಳಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಮುರಗೋಡ ದುರದುಂಡೇಶ್ವರ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು ವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿಯ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಹುಕ್ಕೇರಿ ವೀರಕ್ತಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಕುಂದರಗಿ ಅಡವಿಸಿದ್ದೇಶ್ವರ ಮಠದ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಗಳು, ಮುತ್ನಾಳ ಕೇದಾರ ಶಾಖಾ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಅರಳೀಕಟ್ಟಿ ವಿರಕ್ತಮಠದ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು, ದೇವರಶೀಗಿಹಳ್ಳಿಯ ಶ್ರೀ ವೀರೇಶ್ವರ ಮಹಾಸ್ವಾಮಿಗಳು, ನರಗುಂದ ವಿರಕ್ತಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಬೆಳಗಾವಿ ಕಾರಂಜಿಮಠದ ಶ್ರೀ ಶಿವಯೋಗಿ ದೇವರು, ತಾರೀಹಾಳ ಅಡವಿಸಿದ್ದೇಶ್ವರಮಠದ ಶ್ರೀ ಅಡವೀಶ ದೇವರು, ಘಟಪ್ರಭಾದ ಶ್ರೀ ಶಿವಾನಂದ ದೇವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ