ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಧಿಕಾರಿಗಳು ಎಲ್ಲೆಡೆ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಅಕ್ರಮವಾಗಿ ಹಣ ಅಥವಾ ಗಿಫ್ಟ್ ಸಾಗಾಣಿಕೆ ತಡೆಯಲು ಕಟ್ಟೆಚ್ಚರ ವಹಿಸಲಾಗುತ್ತಿದೆ.
ಈಚೆಗೆ ಹಾಸನ ಬಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಾಹನವನ್ನೂ ತಡೆದು ಪರಿಶೀಲನೆ ನಡೆಸಲಾಗಿದೆ. ನಿನ್ನೆ ಮತ್ತು ಮೊನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಹೆಲಿಕಾಪ್ಟರನ್ನು ಸಹ ಪರಿಶೀಲನೆ ನಡೆಸಲಾಗಿದೆ.
ಅದಕ್ಕೆ ಡಿ.ಕೆ.ಶಿವಕುಮಾರ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳು ನಿನ್ನೆ ಮತ್ತು ಇಂದು ಎರಡೂ ದಿನ ನನ್ನ ಹೆಲಿಕಾಪ್ಟರ್ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಪ್ರತಿದಿನ ಪರಿಶೀಲಿಸಲು ನನ್ನ ಅಭ್ಯಂತರವೇನಿಲ್ಲ. ಆದರೆ, ಕಾಲಮಿತಿಯೊಳಗೆ ಪರಿಶೀಲನೆ ಮುಗಿಸಿ ಚುನಾವಣಾ ಪ್ರಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅವರು ವಿನಂತಿಸಿದ್ದಾರೆ.
ಹೆಲಿಕಾಪ್ಟರ್ ಪರಿಶೀಲನೆಯಿಂದಾಗಿ ನಿಗದಿತ ಸಮಯಕ್ಕೆ ಕಾರ್ಯಕ್ರಮಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ, ವಿಳಂಬವಾಗುತ್ತಿದೆ. ಹಾಗಾಗಿ ಸಮಯಮಿತಿಯಲ್ಲಿ ತಪಾಸಣೆ ಕಾರ್ಯ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ಕುರಿತು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅವರು ಪೋಸ್ಟ್ ಹಾಕಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ