
ಪ್ರಗತಿವಾಹಿನಿ ಸುದ್ದಿ; “ರಾಜಕೀಯ ಚೆಸ್ ಆಟದಂತೆ, ಚೆಸ್ ಆಟಗಾರರು ಉತ್ತಮ ರಾಜಕೀಯಪಟು ಆಗಬಹುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಒಂದನೇ ಬೆಂಗಳೂರು ಅಂತಾರಾಷ್ಟ್ರೀಯ ಗ್ರಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು;
“ಇಲ್ಲಿ ಅನೇಕ ಯುವ ಪ್ರತಿಭೆಗಳನ್ನು ನೋಡುತ್ತಿದ್ದೇನೆ. ನಾನು ಚೆಸ್ ಆಡುವುದಿಲ್ಲ. ನಾನು ಸಾರ್ವಜನಿಕ ಜೀವನದಲ್ಲಿ ಇದ್ದೇನೆ. ನಾನು ಆಗಾಗ್ಗೆ ಒಂದು ಮಾತು ಹೇಳುತ್ತಿರುತ್ತೇನೆ. ರಾಜಕಾರಣ ಫುಟ್ ಬಾಲ್ ಅಲ್ಲ, ಅದೊಂದು ಚೆಸ್ ಗೇಮ್ ಎಂದು.
ಇದು ಚಾಣಾಕ್ಷತನದ ಆಟ. ಈ ಆಟದಲ್ಲಿ ನಮ್ಮ ರಾಜನ ರಕ್ಷಣೆ ಮಾಡಬೇಕು, ಎದುರಾಳಿ ರಾಜನನ್ನು ಮಣಿಸಬೇಕು. ರಾಜಕೀಯವೂ ಇದೇ ಮಾದರಿಯಲ್ಲಿದೆ. ಹೀಗಾಗಿ ಚೆಸ್ ಆಟಗಾರರು ಉತ್ತಮ ರಾಜಕೀಯ ನಾಯಕರಾಗಬಹುದು.
ಸೌಮ್ಯ ಅವರು ಅತ್ಯುತ್ತಮವಾಗಿ ಈ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಪ್ರಪಂಚದಾದ್ಯಂತ ಗ್ರ್ಯಾಂಡ್ ಮಾಸ್ಟರ್ ಗಳನ್ನು ಬೆಂಗಳೂರಿಗೆ ಕರೆತಂದು ಈ ಸ್ಪರ್ಧೆ ಏರ್ಪಡಿಸಿದ್ದಾರೆ. ಬೆಂಗಳೂರು ಉತ್ತಮ ಹವಾಮಾನ ಹೊಂದಿರುವ ನಗರ. ಬೆಂಗಳೂರು ಐತಿಹಾಸಿಕ ನಗರಿ. ಇಲ್ಲಿ ಉತ್ತಮ ಪ್ರತಿಭೆಗಳು, ಶಿಕ್ಷಣ ಸಂಸ್ಥೆಗಳಿವೆ.
ಬೆಂಗಳೂರಿನಲ್ಲಿ ಈ ಸ್ಪರ್ಧೆ ಆಯೋಜಿಸಿರುವ ಕರ್ನಾಟಕ ಚೆಸ್ ಸಂಸ್ಥೆ ಹಾಗೂ ಆಯೋಜಕರಿಗೆ ಧನ್ಯವಾದಗಳು.”
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ