ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ವಿಧಾನಮಂಡಲದ ಜಂಟಿ ಅಧಿವೇಶನದ ಫೆಬ್ರುವರಿ 14 ರಿಂದ 25ರವರೆಗೆ ಜಂಟಿ ಅಧಿವೇಶನ ಹಾಗೂ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಅಧಿವೇಶನವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸಚಿವ ಸಂಪುಟ ಸಭೆಯ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಸಚಿವ ಸಂಪುಟದ ಸಭೆಯ ನಂತರ ಹಲವಾರು ವಿಷಯಗಳನ್ನು ಚರ್ಚಿಸಲಾಗಿದೆ. ಕೋವಿಡ್ ಸ್ಥಿತಿಗತಿ, ಕೋವಿಡ್ ನಿರ್ವಹಣೆ, ಶಾಲಾ-ಕಾಲೇಜು ಹಾಗೂ ಸಂಘ ಸಮಸ್ಥೆಗಳ ಮನವಿಗಳನ್ನು ತಜ್ಞರ ಸಮಿತಿಯ ಮುಂದೆ ಇರಿಸಲಾಗಿದ್ದು, ತಜ್ಞರ ವರದಿ ಬಂದ ನಂತರ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
*ಬಿಬಿಎಂಪಿ ಚುನಾವಣೆ :*
ಬಿಬಿಎಂಪಿ ಚುನಾವಣೆಯ ಬಗ್ಗೆ ಚರ್ಚಿಸಲಾಗಿದ್ದು, ಬೆಂಗಳೂರಿನ ಸಚಿವರೊಂದಿಗೆ ಇತರ ಜಿಲ್ಲೆಗಳ ಸಚಿವರನ್ನೂ ನಿಯೋಜಿಸಿ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
*ಸರ್ಕಾರದ 6 ತಿಂಗಳ ಸಾಧನೆಗಳ ಪ್ರಚಾರ :*
ಸರ್ಕಾರ 6 ತಿಂಗಳ ಆಡಳಿತ ಪೂರೈಸಿರುವ ಹಿನ್ನಲೆಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಾಳೆ ನಡೆಯಲಿದೆ. 2023 ವರೆಗಿನ ಸರ್ಕಾರದ ಕಾರ್ಯಕ್ರಮಗಳು, ಈ 6 ತಿಂಗಳ ಅವಧಿಯಲ್ಲಿ ಸರ್ಕಾರದ ಪ್ರಮುಖ ಇಲಾಖೆಗಳ ಸಾಧನೆಗಳ ಬಗ್ಗೆ ಮುಂದಿನ ಒಂದು ವಾರದ ಕಾಲ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳುವ ಬಗ್ಗೆ ಸಂಬಂಧಪಟ್ಟ ಸಚಿವರು ತಮ್ಮ ಇಲಾಖೆಗಳಿಗೆ ತಿಳಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
*ಭಾಜಪ ಪಕ್ಷದ ಚಿಂತನ-ಮಂಥನ ಸಭೆ :*
ಬರುವ ದಿನಗಳಲ್ಲಿ ಪಕ್ಷ, ಸಂಘಟನೆ ಹಾಗೂ ಸರ್ಕಾರದ ಮಧ್ಯೆ ಸಮನ್ವಯ ಸಾಧಿಸುವ ಚಿಂತನ-ಮಂಥನ ಸಭೆಯನ್ನು ಪಕ್ಷದ ಅಧ್ಯಕ್ಷರು ಶೀಘ್ರದಲ್ಲಿ ನಡೆಸಲಿದ್ದು ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯುವ ತೀರ್ಮಾನವನ್ನು ಮಾಡಲಾಗಿದೆ ಎಂದರು.
*ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗಿದ್ದಲ್ಲಿ ಸೂಕ್ತ ಕ್ರಮ :*
ರೇಸ್ ಕೋರ್ಸ್ ನಲ್ಲಿ ನಡೆಯುವ ಡರ್ಬಿ ರೇಸ್‍ನಲ್ಲಿ ಸಾವಿರಾರು ಜನ ಸೇರುತ್ತಿರುವ ಬಗ್ಗೆ ಕಾಂಗ್ರೆಸ್ ಪಕ್ಷದವರು ಆಕ್ಷೇಪ ಎತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಲು ಯಾವುದೇ ಅವಕಾಶವಿರುವುದಿಲ್ಲ. ಕೋವಿಡ್ ಮಾರ್ಗಸೂಚಿಗಳ ಕಡ್ಡಾಯ ಪಾಲನೆ ಆಗಬೇಕು . ಮಾರ್ಗಸೂಚಿಗಳ ಉಲ್ಲಂಘನೆಯಾಗಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿ ಸಭೆಗಳನ್ನು ನಡೆಸುವ ಮೂಲಕ ಬೆಂಗಳೂರಿನ ಬಿಜೆಪಿಗೆ ಅನುಕೂಲವಾಗಲು ಹಾಗೂ ಅನುದಾನ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಪ್ರತಿಕ್ರಯಿಸಿ ಕಾಂಗ್ರೆಸ್ ಪಕ್ಷ ಇರುವುದೇ ಆರೋಪ ಮಾಡಲು. ಅವರ ಸರ್ಕಾರ ಇದ್ದಾಗ ಏನೆಲ್ಲಾ ಮಾಡಿದ್ದರು ಎನ್ನುವುದನ್ನು ಅವರು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು.
*ಜನಕಲ್ಯಾಣಕ್ಕಾಗಿ ನಿರಂತರ ಯೋಜನೆಗಳು
ನಮ್ಮದು ಸ್ಪಂದನಾಶೀಲವಾಗಿರುವ ಸರ್ಕಾರ. ಸಮಸ್ಯೆಗಳು ಎದುರಾದಂತೆ ಸೂಕ್ತವಾಗಿ ಸ್ಪಂದಿಸುತ್ತಾ ಬಂದಿದ್ದೇವೆ. ನಿರಂತರವಾಗಿ ಜನರಿಗೆ ಸಹಾಯ ಮಾಡುವ ಜನಕಲ್ಯಾಣ ಯೋಜನೆಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
*ಸ್ಪಂದನಾಶೀಲ ಸರ್ಕಾರ*
ನಮ್ಮದು ಸ್ಪಂದನಾಶೀಲ ಸರ್ಕಾರ. ಅದಕ್ಕೆ 100 ದಿನ, 6 ತಿಂಗಳು ಅಥವಾ ಯಾವುದೇ ಸಂದರ್ಭದ ಅಗತ್ಯವಿಲ್ಲ. ಜೋಳ ಖರೀದಿಗೆ ಅವಕಾಶ ಮಾಡಿಕೊಡಬೇಕೆಂಬ ಬೇಡಿಕೆ ಬಂದಿತ್ತು, ಅದಕ್ಕೆ ಅನುವು ಮಾಡಿಕೊಡಲಾಗಿದೆ. ಅಂತೆಯೇ ರಾಗಿ ಖರೀದಿಯನ್ನೂ ಮುಂದುವರೆಸಬೇಕು ಎಂಬ ಬೇಡಿಕೆ ಇದೆ. ಅದನ್ನು ಕೂಡ ಸಚಿವ ಸಂಪುಟದ ಉಪಸಮಿತಿಯ ಮುಂದಿಟ್ಟು ರೈತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುವುದು. ಹೀಗೆ ಸಮಸ್ಯೆಗಳಿಗೆ ಎದುರಾದಂತೆ ಅವುಗಳಿಗೆ ಕೂಡಲೇ ಸ್ಪಂದಿಸಲಾಗುತ್ತಿದೆ. ಅದಕ್ಕೆ ಯಾವುದೇ ಸಂದರ್ಭ ಒದಗಿಬರಬೇಕಿಲ್ಲ ಎಂದರು.
*ಹುಟ್ಟುಹಬ್ಬ ಆಚರಿಸುವುದಿಲ್ಲ*:
ಜನವರಿ 28 ರಂದು ಮುಖ್ಯಮಂತ್ರಿಗಳ ಮುಖ್ಯಮಂತ್ರಿಗಳ ಹುಟ್ಟುಹಬ್ಬ ಯಾವ ರೀತಿ ಆಚರಿಸಲಾಗುವುದು ಎನ್ನುವ ಮಾಧ್ಯಮದವರ ಪ್ರಶ್ನೆಗೆ ‘ಹುಟ್ಟುಹಬ್ಬವನ್ನು ಎಂದೂ ಆಚರಿಸಿಕೊಂಡಿಲ್ಲ. ಹಾಗಾಗಿ ನಾಳೆಯೂ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ’ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
*ಸರ್ಕಾರದ ಕೆಲಸಗಳ ಪಕ್ಷಿನೋಟ ಒದಗಿಸುವ ಪುಸ್ತಕ:*
ಸರ್ಕಾರಕ್ಕೆ 6 ತಿಂಗಳು ತುಂಬುತ್ತಿರುವ ಸಂದರ್ಭದಲ್ಲಿ ಈ ಅವಧಿಯಲ್ಲಿ ಆಗಿರುವ ಕೆಲಸಗಳ ಬಗ್ಗೆ ಮತ್ತು ಅವು ಯಾವ ರೀತಿ ಜನೋಪಯೋಗಿ ಆಗಿವೆ ಎಂಬುದರ ಪಕ್ಷಿನೋಟವನ್ನು ಪುಸ್ತಕ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
*ಕೋವಿಡ್ ನಿರ್ವಹಣೆ*: ಸಚಿವ ಸಂಪುಟ ಸಭೆ ಅಜೆಂಡಾ ಪ್ರಕಾರ ನಡೆಯಲಿದ್ದು, ಇತರೆ ವಿಷಯಗಳಲ್ಲಿ ಹಲವಾರು ವಿಷಯಗಳನ್ನು ಚರ್ಚೆ ಮಾಡಲಿದ್ದು, ಕೋವಿಡ್ ನಿರ್ವಹಣೆ ಯಾವರೀತಿಯಾಗಬೇಕೆದು ತಜ್ಞರ ಸಮಿತಿಗೆ ವರದಿ ನೀಡಲು ಸೂಚಿಸಲಾಗಿದೆ. ವರದಿಬಂದ ಕೂಡಲೇ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ