ಪ್ರಗತಿವಾಹಿನಿ ಸುದ್ದಿ: ಆಟವಾಡುತ್ತಿದ್ದ ಇಬ್ಬರು ಮಕ್ಕಳು ಕಾಫಿತೋಟದಲ್ಲಿ ತೆರೆದ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಮ್ಮಡಿ ಗ್ರಾಮದಲ್ಲಿ ನಡೆದಿದೆ.
ಸೀಮಾ (6) ಹಾಗೂ ರಾಧಿಕಾ (2) ಮೃತ ಮಕ್ಕಳು. ಮಧ್ಯಪ್ರದೇಶ ಮೂಲದ ನಜಿರಾಬಾದ್ ನ ಸುನೀತಾ ಬಾಯಿ ಹಾಗೂ ಅರ್ಜುನ್ ಸಿಂಗ್ ದಂಪತಿಯ ಪುತ್ರಿಯರು.
ಸುನೀತಾಬಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಎಸ್ಟೇಟ್ ಕೆಲಸಕ್ಕೆಂದು ಕೊಪ್ಪದ ಅಮ್ಮಡಿ ಗ್ರಾಮಕ್ಕೆ ಬಂದಿದ್ದರು. ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದ ಸುನೀತಾಬಾಯಿ ವಾಪಾಸ್ ಮನೆಗೆ ಬಂದು ನೋಡಿದಾಗ ಮಕ್ಕಳು ಇಲ್ಲದಿರುವುದು ಕಂಡು ಕಂಗಾಲಾಗಿದ್ದರು.
ಮಕ್ಕಳನ್ನು ಎಲ್ಲೆಡೆ ಹುಡುಕಾಡಿದರೂ ಮಕ್ಕಳ ಸುಳಿವಿಲ್ಲ. ಅನುಮಾನಗೊಂಡು ಸಮೀಪದಲ್ಲಿದ್ದ ತೆರೆದ ಬಾವಿಯತ್ತ ಹೋಗಿ ನೋಡಿದಾಗ 6ವರ್ಷದ ಮಗಳು ಸೀಮಾ ಶವ ಬಾವಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬಾವಿಯಲ್ಲಿ ಪರಿಶೀಲಿಸಿದಾಗ 2 ವರ್ಷದ ಇನ್ನೋರ್ವ ಮಗಳ ಶವ ಕೂಡ ಬಾವಿಯಲ್ಲಿ ಪತ್ತೆಯಾಗಿದೆ. ಇಬ್ಬರು ಮಕ್ಕಳನ್ನು ಕಳೆದುಕೊಂಡಿರುವ ಸುನೀತಾ ಆಕ್ರಂದನ ಮುಗಿಲುಮುಟ್ಟಿದೆ. ನಜಿರಾಬಾದ್ ನಲ್ಲಿರುವ ಪತಿ ಅರ್ಜುನ್ ಗೆ ಮಾಹಿತಿ ನೀಡಲಾಗಿದ್ದು, ಮಧ್ಯಪ್ರದೇಶದಿಂದ ಕೊಪ್ಪದತ್ತ ಪ್ರಯಾಣ ಬೆಳೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ