ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳ ಅಪಹರಣ ವದಂತಿ: ಪ್ರತಿ ಹಳ್ಳಿಯಲ್ಲಿ ಪೊಲೀಸರಿಂದ ಜಾಗೃತಿ ; ಎಸ್ಪಿ ಸ್ಪಷ್ಟನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿ ಮಕ್ಕಳ ಅಪಹರಣ ನಡೆದಿದೆ ಎಂಬುದು ಕೇವಲ ವದಂತಿಯಾಗಿದ್ದು ಇದಕ್ಕೆ ಯಾರೂ ಕಿವಿಗೊಡದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ತಿಳಿಸಿದ್ದಾರೆ.
ಇತ್ತೀಚೆಗೆ ನಂದಗಡ ವ್ಯಾಪ್ತಿಯಲ್ಲಿ ಮಕ್ಕಳ ಕಳ್ಳರು ಎಂದು ಶಂಕೆ ವ್ಯಕ್ತಪಡಿಸಿದ ಜನ ರಗ್ಗುಗಳನ್ನು ಮಾರಾಟ ಮಾಡುವವರೇ ಹೊರತು ಮಕ್ಕಳ ಅಪಹರಣಕಾರರಲ್ಲ ಎಂಬುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ. ಇನ್ನೊಂದು ಪ್ರಕರಣದಲ್ಲಿ ನಂದಗಡ ವ್ಯಾಪ್ತಿಯಲ್ಲಿ ಮಕ್ಕಳ ಕಳುವು ಆರೋಪ ಹೊತ್ತಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು ಈ ಭಾಗದಲ್ಲಿ ಯಾವುದೇ ಮಕ್ಕಳ ಅಪಹರಣದ ಘಟನೆಗಳು ನಡೆದಿಲ್ಲ.
ಬೈಲಹೊಂಗಲ ವ್ಯಾಪ್ತಿಯಲ್ಲಿ ಕೇಳಿ ಬಂದ ವದಂತಿಗಳಿಗೆ ಸಂಬಂಧಿಸಿದಂತೆಯೂ ಶಂಕಿತ ವ್ಯಕ್ತಿಗಳನ್ನು ತನಿಖೆಗೆ ಗುರಿಪಡಿಸಿದ್ದು ಅವರು ಆಸ್ಪತ್ರೆಯೊಂದರ ನಿರ್ಮಾಣಕ್ಕಾಗಿ ವಂತಿಗೆ ಸಂಗ್ರಹಿಸಲು ಬಂದಿದ್ದರೇ ಹೊರತು ಮಕ್ಕಳ ಅಪಹರಣಕ್ಕಲ್ಲ ಎಂಬುದು ಸಾಬೀತಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಬುಧವಾರ ಶಿರಸಂಗಿ ಭಾಗದಲ್ಲಿ ಜನ ಶಂಕೆ ವ್ಯಕ್ತಪಡಿಸುತ್ತಿದ್ದಂತೆ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು ಮಕ್ಕಳ ಅಪಹರಣಕ್ಕೆ ಬಂದವರಲ್ಲ ಎಂಬುದನ್ನು ದೃಢಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಆಯಾ ವ್ಯಾಪ್ತಿಯ ಠಾಣೆಗಳ ಪೊಲೀಸರು ಅರಿವು ಮೂಡಿಸುತ್ತಿದ್ದು ಇನ್ನು ಕೆಲವೇ ಗಂಟೆಗಳಲ್ಲಿ ಜಿಲ್ಲೆಯ 1266 ಗ್ರಾಮಗಳಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ಯಾರೂ ಇಂಥ ವದಂತಿಗಳನ್ನು ನಂಬಬಾರದು. ಜೊತೆಗೆ ಜಾಲತಾಣಗಳಲ್ಲಿ ಇಂಥ ಸುಳ್ಳು ವದಂತಿಗಳನ್ನು ಹಂಚಿಕೊಂಡಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ದೂರಾಗದ ಮಕ್ಕಳ ಕಳ್ಳರ ಭಯ ! ಮತ್ತಿಬ್ಬರು ಶಂಕಿತರ ವಿಚಾರಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ