
ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳ ಹಿಂದೆ ಕೃಷ್ಣಾ ನದಿ ಸೇತುವೆ ಮೇಲಿಂದ ಪತ್ನಿಯೇ ತನ್ನನ್ನು ತಳ್ಳಿ ಹತ್ಯೆಗೆ ಯತ್ನಿಸಿದ್ದಾಳೆ ಎಂದು ಆರೋಪಿಸಿ ನದಿಯಿಂದ ಎದ್ದು ಬಂದಿದ್ದ ತಾತಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲ್ಯವಿವಾಹ ಕಾಯ್ದೆಯಡಿಯಲ್ಲಿ ಆರೋಪಿ ತಾತಪ್ಪನನ್ನು ಬಂಧಿಸಲಾಗಿದೆ. ರಾಯಚೂರು ಪೊಲೀಸರು ತಾತಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ತಾತಪ್ಪ ಎಂಬಾತ ತನ್ನನ್ನು ಪತ್ನಿ ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಸೇತುವೆ ಮೇಲಿಂದ ತಳ್ಳಿ ಸಾಯಿಸಲು ಯತ್ನಿಸಿದ್ದಾಳೆ ಎಂದು ಆರೋಪಿಸಿ ಹೈಡ್ರಾಮ ಮಾಡಿದ್ದ. ನದಿಯ ನಡುಗಡ್ಡೆಯಲ್ಲಿ ಕುಳಿತಿದ್ದ ತಾತಪ್ಪನನ್ನು ಸ್ಥಳೀಯರು ನೋಡಿ ರಕ್ಷಣೆ ಮಾಡಿದ್ದರು. ಆದರೆ ಸೇತುವೆ ಮೇಲೆ ಇದ್ದ ಪತ್ನಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರೇ ನದಿಗೆ ಇಳಿದು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದಿದ್ದಳು. ಈ ಪ್ರಕರಣದ ವಿಚಾರಣೆ ವೇಳೆ ತಾತಪ್ಪ ಪತ್ನಿ ಅಪ್ರಾಪ್ತ ವಯಸ್ಸಿನವಳು. ಬಾಲ್ಯವಿವಾಹವಾಗಿರುವುದು ಬೆಳಕಿಗೆ ಬಂದಿತ್ತು.
ಅಲ್ಲದೇ ತಾತಪ್ಪ ಪತ್ನಿ ಹೇಳಿಕೆ ಪ್ರಕಾರ ತಾನು ಅಪ್ರಾಪ್ತಳು ಎಂಬುದು ಗೊತ್ತಿದ್ದೂ ಬಲವಂತವಾಗಿ ತಾತಪ್ಪ ವಿವಾಹವಾಗಿದ್ದಾಗಿ ಹಾಗೂ 15 ವರ್ಷದ 8 ತಿಂಗಳಾಗಿದ್ದಾಗಲೇ ವಿವಾಹವಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಳು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತನಿಖೆಗೆ ಸೂಚಿಸಿದ್ದರು. ಯುವತಿಯ ಶಾಲಾ ದಾಖಲಾತಿಗಳನ್ನು ಪರಿಶೀಲಿಸಿದಾಗ ತಾತಪ್ಪ ಬಾಲ್ಯವಿವಾಹವಾಗಿರುವುದು ದೃಢಪಟ್ಟಿತ್ತು. ತಾತಪ್ಪ ಪತ್ನಿ ರಾಯಚೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ತಾತಪ್ಪ ಹಾಗೂ ಆತನ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ತಾತಪ್ಪನನ್ನು ಬಂಧಿಸಲಾಗಿದೆ.