Kannada NewsKarnataka NewsLatest

*ಉದ್ಯಮಿಗಳಿಗೆ ವಂಚನೆ: ಪೀಟರ್ ಡ್ಯಾಡಿ ಮನೆ ಮೇಲೆ CID ದಾಳಿ*

ಪ್ರಗತಿವಾಹಿನಿ ಸುದ್ದಿ: ಜಮೀನು ವ್ಯವಹಾರಗಳಲ್ಲಿ ಉದ್ಯಮಿಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪದಡಿ ಪೀಟರ್ ಡ್ಯಾಡಿ ಎಂಬಾತನ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಜಮೀನು ವ್ಯವಹಾರದ ಹೆಸರಿನಲ್ಲಿ ಲಕ್ಷಾಂತರ ಹಣ ಪಡೆದು, ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದ ಪೀಟರ್ ಡ್ಯಾಡಿ ವಿರುದ್ಧ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಸಿಐಡಿ ಆರ್ಥಿಕ ಅಪರಾಧ ವಿಭಾಗ ತನಿಖೆ ನಡೆಸಿದ್ದು, ಬೆಂಗಳೂರಿನ ಪೀಟರ್ ಡ್ಯಾಡಿ ಮನೆ ಮೇಲೆ ದಾಳಿ ನಡೆಸಲಾಗಿದೆ.

ಬೆಂಗಳೂರಿನ ಪುಲಿಕೇಶಿನಗರದಲ್ಲಿರುವ ಮನೆ ಮೇಲೆ ಸಿಐಡಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಸುಬ್ಬರಾವ್ ಎಂಬ ಉದ್ಯಮಿಯು ಪುಲಿಕೇಶಿನಗರ ಠಾಣೆಯಲ್ಲಿ ಪೀಟರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ದೂರಿನಲ್ಲಿ ಹೇಳಿರುವಂತೆ, ಸುಮಾರು 300 ಎಕರೆ ಜಮೀನಿನ ದಾಖಲಾತಿಗಳನ್ನು ಸರಿಪಡಿಸಿ ಖಾತೆ ಬದಲಾವಣೆ ಮಾಡಿಸಿ, ಬಳಿಕ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿಕೊಡುವುದಾಗಿ ಪೀಟರ್ ಭರವಸೆ ನೀಡಿದ್ದರು. ಈ ಹಿನ್ನೆಲೆ ಪ್ರೊಸೆಸಿಂಗ್ ಫೀ, ಲ್ಯಾಂಡ್ ಡೀಲ್ ಹಾಗೂ ಕಮಿಷನ್ ಹೆಸರಿನಲ್ಲಿ 96 ಲಕ್ಷ 50 ಸಾವಿರ ರೂ. ಹಣವನ್ನು ಪಡೆದುಕೊಂಡಿದ್ದರೂ, ಯಾವುದೇ ಕೆಲಸ ಮಾಡಿಕೊಡದೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Home add -Advt

ಕಮಿಷನ್ ಖಾತ್ರಿಗಾಗಿ ಸುಬ್ಬರಾವ್ ಅವರಿಂದ ಚೆಕ್ ಪಡೆದಿದ್ದ ಪೀಟರ್, ಬಳಿಕ ಅದೇ ಚೆಕ್ ಆಧಾರವಾಗಿ ದೂರುದಾರರ ವಿರುದ್ಧ ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಸದ್ಯ ಸಿಐಡಿ ಅಧಿಕಾರಿಗಳು ಮನೆ ಶೋಧಿಸಿ, ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂದಿನ ತನಿಖೆ ಮುಂದುವರಿದಿದೆ.

ಪೀಟರ್ ಡ್ಯಾಡಿ ವಿರುದ್ಧ ಬೆಂಗಳೂರು ನಗರದ ಅಶೋಕನಗರ, ಹಲಸೂರು, ಬೆಳ್ಳಂದೂರು, ಜೀವನ್ ಭೀಮಾನಗರ, ಪುಲಕೇಶಿನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದ್ದವು.

Related Articles

Back to top button