ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕರು ಎನ್ ಡಿಎ ಒಕ್ಕೂಟ ಸೋಲಿಸಬೇಕು ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶ್ರಮಿಕನ ದೈಹಿಕ, ಬೌದ್ದಿಕ ಶ್ರಮವನ್ನು ಹೊರತು ಪಡಿಸಿ ದೇಶದ ಮತ್ತು ವಿಶ್ವದ ಯಾವುದೇ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ. ಅಭಿವೃದ್ಧಿ ಎಂದರೆ ಮಾಲ್ ಗಳು, ಹೆದ್ದಾರಿಗಳು ಮಾತ್ರ ಅಲ್ಲ. ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಅಪೌಷ್ಟಿಕತೆಯಿಲ್ಲದೆ ಆರೋಗ್ಯವಾಗಿ, ಶಿಕ್ಷಣವಂತರಾಗಿ ಎಲ್ಲಾ ಮೂಲಭೂತ ಸೌಕರ್ಯಗಳಿರುವ ಸ್ವಂತ ಮನೆ, ಬದುಕು ನಡೆಸಲು ಉದ್ಯೋಗ, ಉದ್ಯೋಗಕ್ಕೆ ತಕ್ಕ ಸಂಬಳ ಶ್ರಮಿಕ ಕಾರ್ಮಿಕರಿಗೆ ಕೊಡಲು ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಬಂಡವಾಳದ ಲಾಭ ಮಾಡಲು ಭಾರತದ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ಉಪಯೋಗಿಸಿ ಪ್ರತಿರೋಧಗಳನ್ನು ಹತ್ತಿಕ್ಕಲು ಪ್ರಯತ್ನಿಸಿದೆ. “ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ” ಎನ್ನುವ ಎನ್ ಎಡಿಎ ಕಾಂಗ್ರೆಸ್ ಬೋಪಸ್೯ ಹಗರಣಕ್ಕಿಂತ 500 ಪಟ್ಟು ಭ್ರಷ್ಟಾಚಾರ, ಚುನಾವಣಾ ಬಾಂಡ್ ಗಳ ಮೂಲಕ ನಡೆಸಿರುವುದನ್ನು ಸುಪ್ರೀಂ ಕೋರ್ಟ್ ಇದನ್ನು ಅಸಂವಿಧಾನ ಎಂದು ರದ್ದುಗೊಳಿಸಿ ಛೀಮಾರಿ ಹಾಕಿದೆ ಎಂದು ಹರಿಹಾಯ್ದರು.
ಈ ಲೋಕಸಭಾ ಚುನಾವಣೆಗಳು ದುಡಿಯುವ ವರ್ಗಕ್ಕೆ ಮಾಡು ಇಲ್ಲವೆ ಮಡಿ ಹೋರಾಟದಂತಿದೆ. ಬಿಜೆಪಿ ತನ್ನ ಸುಳ್ಳು ಭರವಸೆಗಳು ಮತ್ತು ಸುಳ್ಳು ಸಾಧನೆಗಳ ಘೋಷಣೆಗಳ ಮೂಲಕ ಜನರ ಮೂಲಭೂತ ಹಕ್ಕುಗಳ ಮೇಲೆ ವಿನಾಶಕಾರಿ ದಾಳಿ ನಡೆಸುತ್ತಿದೆ. ಕಾರ್ಮಿಕರಿಗೆ ವಾಸ್ತವವನ್ನು ಮತ್ತು ಸತ್ಯವನ್ನು ಆಧಾರ ಸಹಿತ ವಿವರಿಸುವುದರ ಮೂಲಕ ಬಿಜೆಪಿ ಒಕ್ಕೂಟದ ಅಪರಿಮಿತ ಮಿಥ್ಯೆಗಳನ್ನು ಬಹಿರಂಗಪಡಿಸುವುದು ಕಾರ್ಮಿಕರ ಜವಾಬ್ದಾರಿಯಾಗಿದ ಎಂದರು.
ಜಿ.ವಿ.ಕುಲಕರ್ಣಿ, ಗೈಬುಸಾಬ್ ಜೈನೆಖಾನ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ