Latest

ಮೂರು ಇಲಾಖೆಗಳ ಪ್ರಗತಿ ಪರಿಶೀಲನೆ; ಹಲವು ಮಹತ್ವದ ನಿರ್ಧಾರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಶಿಕ್ಷಣ ಇಲಾಖೆ, ವಸತಿ ಯೋಜನೆ, ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನೆ ನಡೆಯಿತು.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ಈ ಬಗ್ಗೆ ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುತ್ತಿರುವ ಮೊದಲ ರಾಜ್ಯ ಕರ್ನಾಟಕ. ಆದ್ದರಿಂದ ಶಿಕ್ಷಣ ನೀತಿ ಅನುಷ್ಠಾನದ ಕುರಿತಂತೆ ರಾಜ್ಯದಾದ್ಯಂತ ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಯೋಗಿಕವಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸುವಂತೆ ಸಲಹೆ ನೀಡಿದರು.

ಈ ನೀತಿ ಜಾರಿಗೆ ಕರ್ನಾಟಕ ರಾಜ್ಯ ಶಿಕ್ಷಣ ಆಯೋಗ ಮತ್ತು ಇತರ ಸಾಂಸ್ಥಿಕ ವ್ಯವಸ್ಥೆಯನ್ನು ಸ್ಥಾಪಿಸುವ ಕುರಿತೂ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಸೂಚಿಸಲಾಯಿತು. ಖಾಸಗಿಯವರ ಸಹಯೋಗ ಪಡೆದುಕೊಳ್ಳಲೂ ಸಹ ಸಲಹೆ ನೀಡಲಾಯಿತು. ರಾಜ್ಯದ ಜಿ ಇ ಆರ್ (Gross Enrollment Ratio) ಶೇ. 32 ರಷ್ಟು ಇದ್ದು, ಮುಂದಿನ ದಿನಗಳಲ್ಲಿ ಇದನ್ನು ಶೇ. 50 ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಪೂರಕವಾಗಿ ಬಿ.ಎಡ್., ಡಿ.ಎಡ್. ಪಠ್ಯ ವಿಷಯವನ್ನು ಇನ್ನಷ್ಟು ಪರಿಣಾಮಕಾರಿಯಾಗುವಂತೆ ಪರಿಷ್ಕರಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ಯುವಕರು ಉದ್ಯೋಗ ಪಡೆದುಕೊಳ್ಳಲು ಅನುವಾಗುವಂತೆ ಜಿಲ್ಲೆಗೊಂದು ತಾಂತ್ರಿಕ ಶಿಕ್ಷಣ ಶಾಲೆಯನ್ನು ಪ್ರಾರಂಭಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ವಸತಿ ಯೋಜನೆ; 15 ದಿನದೊಳಗೆ ಆಧಾರ್ ಕಾರ್ಡ್ ಲಿಂಕ್ ಗೆ ಸೂಚನೆ:

ರಾಜ್ಯದಲ್ಲಿ ವಿವಿಧ ಗ್ರಾಮೀಣ ವಸತಿ ಯೋಜನೆಗಳಡಿ, 4.09 ಲಕ್ಷ ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಬಾಕಿ ಇರುವ 1.67 ಲಕ್ಷ ಮನೆಗಳಿಗೆ ಮುಂದಿನ 15 ದಿವಸದೊಳಗೆ ಜಿಪಿಎಸ್ ಅಪ್ ಲೋಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಸೂಚಿಸಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆ-(ನಗರ) ಎಎಚ್ ಪಿ- 1.8 ಲಕ್ಷ ಮನೆಗಳು ಕಾಮಗಾರಿ ಪ್ರಾರಂಭವಾಗಿಲ್ಲ. ಈ ಯೋಜನಗೆ ಎಸ್ ಸಿ ಎಸ್ ಪಿ/ ಟಿಎಸ್ ಪಿ, ಹಿಂದುಳಿದ ವರ್ಗಗಳು ಹಾಗೂ ಕಾರ್ಮಿಕ ಫಲಾನುಭವಿಗಳ ವಂತಿಗೆ ಮೊತ್ತವನ್ನು ಆಯಾ ಇಲಾಖೆಗಳ ಯೋಜನೆಗಳಡಿ ಪಡೆದುಕೊಂಡು, ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಬೆಂಗಳೂರು ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆಯಡಿ 42,361 ಮನೆ ನಿರ್ಮಾಣವಾಗುತ್ತಿದ್ದು ಬಾಕಿ ಮನೆಗಳ ಟೆಂಡರ್ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳಿಸುವಂತೆ ತಿಳಿಸಿದರು. ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ವಿವಿಧ ವಸತಿ ಯೋಜನೆಗಳಡಿ 5 ಲಕ್ಷ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳ ಆಯ್ಕೆಗೆ ಸಿದ್ಧತೆ ನಡೆಸಿಕೊಳ್ಳುವಂತೆ ತಿಳಿಸಿದರು.

ಪ್ರವಾಹ ಸಂದರ್ಭದಲ್ಲಿ ಮನೆ ಹಾನಿಗೆ ನೀಡಬೇಕಾದ ಪರಿಹಾರ ಬಿಡುಗಡೆಗೆ ಕ್ರಮ ವಹಿಸುವಂತೆ ತಿಳಿಸಿದರು.

ಮಳೆಯಿಂದ ಹಾನಿಯಾದ ರಸ್ತೆ ದುರಸ್ತಿಗೆ ಆದ್ಯತೆ ನೀಡಿ:

ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ರಸ್ತೆಗಳು ಹಾಳಾಗಿವೆ. ಹಾಳಾದ ರಸ್ತೆಗಳ ದುರಸ್ತಿ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಸೂಚನೆ ನೀಡಿದರು.

ಮಳೆಯಿಂದ ಹಾನಿಯಾದ ಪ್ರದೇಶಗಳ ರಸ್ತೆ ಸುಧಾರಣೆಗೆ 300 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಈ ಅನುದಾನವನ್ನು ವಾಸ್ತವವಾಗಿ ಹಾನಿಯಾದ ಪ್ರದೇಶದಲ್ಲಿಯೇ ದುರಸ್ತಿ ಬಳಕೆ ಮಾಡುವಂತೆ ಸೂಚನೆ ನೀಡಲಾಯಿತು. ಪ್ರತಿ ಜಿಲ್ಲೆಯ ರಸ್ತೆಗಳ ಸಾಂದ್ರತೆಯನ್ನು ಪರಿಶೀಲಿಸಿ, ಕಡಿಮೆ ಇರುವ ಜಿಲ್ಲೆಗಳಲ್ಲಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು.

ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಡಾ. ಕೆ.ಎಸ್.ಕೃಷ್ಣಾರೆಡ್ಡಿ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ವಸತಿ ಸಹಿವ ವಿ.ಸೋಮಣ್ಣ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯ್ಕ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಳಗಾವಿ, ವಿಜಯಪುರಕ್ಕೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button