
ಪ್ರಗತಿವಾಹಿನಿ ಸುದ್ದಿ; ಹಾವೇರಿ: ನ್ಯಾಯಸಮ್ಮತವಾಗಿ ಮೀಸಲಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಶಿಗ್ಗಾಂವಿಯಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯ ಭವನ ಉದ್ಘಾಟನಾ ಹಾಗೂ ಹರಧ್ಯಾನ ಮಂದಿರ ಶಂಕುಸ್ಥಾಪನಾ ಕಾರ್ಯವನ್ನು ನೆರವೇರಿಸಿ ಮಾತನಾಡಿದರು .
ನ್ಯಾಯ ನೀಡುವಾಗ ಇತರರಿಗೆ ಅನ್ಯಾಯವಾಗದಂತೆ ನ್ಯಾಯಸಮ್ಮತವಾಗಿ ಮೀಸಲಾತಿ ನೀಡಲಾಗಿದೆ. ವಚನಾನಂದ ಸ್ವಾಮೀಜಿಗಳು ಸೈದ್ಧಾಂತಿಕವಾಗಿ ಮಾರ್ಗದರ್ಶನ ಮಾಡಿದ್ದಾರೆ. ಭಿನ್ನಮತ ವ್ಯಕ್ತವಾದಾಗ, ಎಲ್ಲರಿಗೂ ಮನವರಿಕೆ, ಮಾರ್ಗದರ್ಶನ ಮಾಡಿದ್ದಾರೆ. ಸರಿಯಾದ ಸಂದರ್ಭದಲ್ಲಿ ಸರಿಯಾದ ತೀರ್ಮಾನ ಮಾಡಲಾಗಿದೆ. ಮುತ್ಸದ್ದಿ ತನದ ಮಾರ್ಗದರ್ಶನವನ್ನು ನಿರೀಕ್ಷೆ ಗೆ ಮೀರಿ ನೀಡಿದ್ದಾರೆ ಎಂದರು. ಜಯ ಮೃತ್ಯುಂಜಯ ಸ್ವಾಮೀಜಿಗಳ ದಿಟ್ಟ ಹೋರಾಟದಿಂದ ಸಮಾಜ ಹಾಗೂ ಸರ್ಕಾರದ ಜಾಗೃತಿ ಮೂಡಿಸಲು ಸಾಧ್ಯವಾಯಿತು ಎಂದರು.
ಯಾರಿಗೂ ಹೆದರುವುದಿಲ್ಲ
ನಾನು ಯಾರಿಗೂ ಕರೆ ಮಾಡಿ ಒತ್ತಡ ಹಾಕಿಲ್ಲ. ಮಾಡುವ ಅವಶ್ಯಕತೆಯೂ ನನಗಿಲ್ಲ. ಸ್ವಾಮೀಜಿಗಳು ಗುರುವಿನ ಸ್ಥಾನದಲ್ಲಿರುವವರು. ತ್ಯಾಗಿಗಳು. ಗುರುಗಳು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಸ್ವಂತ ಚಿಂತನೆ ಬದ್ಧತೆ ಅವರಿಗಿದೆ. ನಮ್ಮ ಸ್ವಂತ ಚಿಂತನೆಯಿಂದ ಈ ಕೆಲಸ ಮಾಡಲಾಗಿದೆ. ಯಾವುದೇ ರೋಲ್ ಕಾಲ್ ಅಥವಾ ಒತ್ತಡದಿಂದ ಈ ಕೆಲಸ ಮಾಡಿಲ್ಲ. ಮೀಸಲಾತಿ ಜಾರಿಗೆ ತರಲು ಯಾರಿಗೂ ಹೆದರುವುದಿಲ್ಲ ಎಂದರು.
ನಾನು 25 ಬಾರಿ ಕರೆ ಮಾಡಿ ಗುರುಗಳಿಗೆ ಒತ್ತಡಹಾಕಿದ್ದೇನೆ ಎಂದು ವಿಪಕ್ಷದವರು ಆರೋಪಿಸುತ್ತಿದ್ದಾರೆ. ನಾನು ಯಾವ ಗುರುಗಳಿಗೆ, ಮಹಾಗುರುಗಳಿಗೂ ಒತ್ತಡಹಾಕಿಲ್ಲ, ಯಾವ ಪಕ್ಷದ ಅಧ್ಯಕ್ಷರು ಇಂದು ಮಾತನಾಡಿದ್ದಾರೆ ಅವರು ಒಂದುವರೆ ವರ್ಷದಿಂದ ಗುರುಗಳಿಗೆ ಒತ್ತಡ ಹಾಕುತ್ತಿದ್ದರು. ಮೀಸಲಾತಿ ಕೊಟ್ಟರೆ ಒಪ್ಪಿಕೊಳ್ಳಬೇಡಿ ಅಂತಾ ಎಂದು ತಿರುಗೇಟು ನೀಡಿದ್ದಾರೆ.
ಚುನಾವಣಾ ಲಾಭಕ್ಕಾಗಿ ರಾಜಕಾರಣ ಮಾಡುವುದಿಲ್ಲ
ನವ ಕರ್ನಾಟಕದಲ್ಲಿ ದೀನದಲಿತರು, ಆರ್ಥಿಕವಾಗಿ ಸಬಲರಾಗಬೇಕು. ವಿದ್ಯಾವಂತರಾಗಿ, ಸ್ವಾಭಿಮಾನದ ಬದುಕು ಬದುಕಬೇಕು. ಈ ಕನಸನ್ನು ಸಾಕಾರಗೊಳಿಸಲು ಹಿಂದೆಗೆಯುವುದಿಲ್ಲ ಎಂದರು. ಅವರು ಮಾಡಿದ ಅನ್ಯಾಯ ಸರಿಪಡಿಸಲು ಕ್ರಮ ವಹಿಸಲಾಗಿದೆ. ಇದು ಕರ್ನಾಟಕದ ಅಭಿವೃದ್ಧಿಯ ಪ್ರಶ್ನೆ. ಚುನಾವಣಾ ಲಾಭಕ್ಕಾಗಿ ರಾಜಕಾರಣ ಮಾಡುವುದಿಲ್ಲ. ನಾವು ಭದ್ಧತೆಯಿಂದ ನಂಬಿರುವ ವಿಚಾರಗಳ ಬಗ್ಗೆ ಕೆಲಸ ಮಾಡಿದ್ದು, ಆತ್ಮಸಾಕ್ಷಿಯಾಗಿ ಕೆಲಸ ಮಾಡಲಾಗಿದೆ. ಇದು 30 ವರ್ಷಗಳ ಬೇಡಿಕೆಯಾಗಿದ್ದು, ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದರು.
ನಾಡು ಕಟ್ಟುವ ಸಂಕಲ್ಪ
ಒಗ್ಗಟ್ಟಾಗಿ, ದುಡಿಮೆ ನಂಬಿ, ನಾಡು ಕಟ್ಟುವ ಸಂಕಲ್ಪ ಮಾಡಬೇಕು. ಸಮುದಾಯದ ಬೆಂಬಲ ನಮ್ಮ ಮೇಲಿದೆ. ಸಮುದಾಯದ ಕಟ್ಟ ಕಡೆಯ ಬಡವನಿಗೆ ನ್ಯಾಯ ಕೊಡುವ ಕೆಲಸ ಮಾಡಲಾಗಿದೆ ಎಂದರು.
ಸಾಮಾಜಿಕ ಬದಲಾವಣೆಯ ಕ್ರಮಗಳ ಅನುಷ್ಠಾನ
ಜವಳಿ ಪಾರ್ಕ್ ನಿಂದ 10 ಸಾವಿರ ಉದ್ಯೋಗ, 6 ತಿಂಗಳಲ್ಲಿ ಇನ್ನೂ ಐದು ಸಾವಿರ ಉದ್ಯೋಗಗಳನ್ನು ಹೆಣ್ಣು ಮಕ್ಕಳಿಗೆ ಸೃಜಿಸಲಾಗುವುದು.
ಅತ್ಯಂತ ಸಣ್ಣ ಸಣ್ಣ ಸಮುದಾಯ ಗಳಿಗೆ ನಿಗಮ ಸ್ಥಾಪನೆ ಮಾಡಲಾಗಿದೆ . ಸಾಮಾಜಿಕ ಬದಲಾವಣೆಯ ಕ್ರಮಗಳನ್ನು ಅನುಷ್ಠಾನ ಮಾಡಲಾಗುವುದು ಎಂದರು.
ಸಮನ್ವಯದ ಸಂಕೇತ
ಶಿಗ್ಗಾಂವಿ ತಾಲ್ಲೂಕಿನ ಅಭಿವೃದ್ಧಿ ಯ ಹಾಗೂ ಎಲ್ಲಾ ಸಮುದಾಯಗಳ ಸಮನ್ವಯದ ಸಂಕೇತ. ಶ್ರೀ ವಚನಾನಂದಸ್ವಾಮಿಗಳು ಪೀಠಕ್ಕೆ ಬಂದ ನಂತರ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದಾರೆ. ಭಕ್ತರ ಹತ್ತಿರಕ್ಕೆ ಪೀಠವನ್ನು ತೆಗೆದುಕೊಂಡು ಹೋಗಿದ್ದಾರೆ. ಹೊಸ ವೈಚಾರಿಕ ಚಿಂತನೆಯನ್ನು ಸಮುದಾಯದಲ್ಲಿ ಮೂಡಿಸಲು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ಸಮುದಾಯವನ್ನು ವಿಸ್ತರಿಸಿ ನಾವೆಲ್ಲರೂ ಕನ್ನಡ ನಾಡಿನ ಮಕ್ಕಳು ಒಂದಾಗಬೇಕು ಎಂದು ಹೇಳಿದ್ದಾರೆ. ದೇಶವಿದೇಶಗಳಲ್ಲಿ, ಹಿಮಾಲಯದಲ್ಲಿ ಯೋಗ ಸಾಧನೆಯಿಂದ ದೊಡ್ಡ ಹೆಸರು ಮಾಡಿರುವುದು ಹೆಮ್ಮೆ ಎಂದರು.
ಅನ್ನದಾತನಿಗೆ ಆರ್ಥಿಕ ಸುರಕ್ಷಾ ಚಕ್ರ
ರೈತಾಪಿ ವರ್ಗದ ಸಮುದಾಯದವರು ಪ್ರಾಮಾಣಿಕರು. ಕರ್ನಾಟಕದಲ್ಲಿ ರೈತಾಪಿ ವರ್ಗಕ್ಕೆ ಬೆಲೆ ದೊರೆಯಬೇಕೆಂಬ ಉದ್ದೇಶ ನಮ್ಮದು. ರೈತ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯನ್ನು ರಾಜ್ಯದ 11ಲಕ್ಷ ವಿದ್ಯಾರ್ಥಿಗಳಿಗೆ 818 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ರೈತ ಕಾರ್ಮಿಕ ಮಹಿಳೆಗೆ ಪ್ರತಿ ತಿಂಗಳು ಒಂದು ಸಾವಿರ ರೂ.ನೀಡುವ ಯೋಜನೆ ಘೋಷಿಸಲಾಗಿದೆ. ಯಶಸ್ವಿನಿ ಯೋಜನೆಯನ್ನು ಮರುಪ್ರಾರಂಭಿಸಿ 300 ಕೋಟಿ ರೂ.ಗಳನ್ನು ನೀಡಲಾಗಿದೆ. ರೈತರಿಗಾಗಿ ಜೀವನಜ್ಯೋತಿ ಜೀವವಿಮಾ ಪ್ರಾರಂಭ ಮಾಡಿ 180.ಕೋಟಿ ಮೀಸಲಿರಿಸಿದೆ.ಕಳೆದ ವರ್ಷ ರೈತ ಶಕ್ತಿ ಯೋಜನೆಗೆ 380 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. 57 ಲಕ್ಷ ರೈತರಿಗೆ ತಲುಪಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ 2 ಸಾವಿರ ಕೋಟಿ ಗಳನ್ನು 57 ಲಕ್ಷ ರೈತರಿಗೆ ನೀಡಲಾಗುತ್ತದೆ. ಶೂನ್ಯ ಬಡ್ಡಿ ದರದಲ್ಲಿ ನೀಡುವ ಸಾಲವನ್ನು 5 ಲಕ್ಷಕ್ಕೆ ಏರಿಸಲಾಗಿದೆ. ಅನ್ನದಾತನಿಗೆ ಆರ್ಥಿಕ ಸುರಕ್ಷಾ ಚಕ್ರ ನೀಡಿ ದೇಶಕ್ಕೆ ಸಲ್ಲುವ ಕೆಲಸ ಮಾಡಲಾಗಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ