
ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಪ್ರಧಾನಿ ಮೋದಿ, ಅಮಿತ್ ಶಾ ರಾಜ್ಯ ಭೇಟಿಯಿಂದಾಗಿ ಕಾಂಗ್ರೆಸ್ ನಾಯಕರು ಭ್ರಮನಿರಸನಗೊಂಡಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಅಮಿತ್ ಶಾ ಚುನಾವಣಾ ಏಜೆಂಟ್ ರಂತೆ ವರ್ತಿಸುತ್ತಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಮಾಜಿ ಸಿಎಂ ಆಗಿದ್ದವರು ಹೀಗೆ ಮಾತನಾಡುವುದು ಸರಿಯಲ್ಲ. ಹಾಗಾದರೆ ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟಾ? ಎಂದು ಪ್ರಶ್ನಿಸಿದರು.
ಬಿಜೆಪಿಗೆ ಸಿಗುತ್ತಿರುವ ಜನ ಬೆಂಬಲದಿಂದಾಗಿ ಕಾಂಗ್ರೆಸ್ಸಿಗರು ವಿಚಲಿತಗೊಂಡಿದ್ದಾರೆ. ಹಾಗಾಗಿ ಸೋಲುವ ಭೀತಿಯಿಂದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದರು.
ಹೆಚ್.ಡಿ.ಕುಮಾರಸ್ವಾಮಿ ನಿವೃತ್ತ ರಾಗುವ ವಯಸ್ಸಲ್ಲ
ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಇದು ತಮ್ಮ ಕೊನೆಯ ಚುನಾವಣೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ತಿಳಿದಿಲ್ಲ. ಅವರದ್ದು ನಿವೃತ್ತಿ ಯಾಗುವ ವಯಸ್ಸಲ್ಲ. ಬಹಳ ಸೇವೆಯನ್ನು ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಎಲ್ಲಾ ರೀತಿಯದ್ದೂ ನಡೆಯುತ್ತದೆ. ಪ್ರತಿ ಚುನಾವಣೆಗೂ ಜನರ ಪ್ರಬುದ್ಧತೆ ಹೆಚ್ಚಾಗಿದೆ. ನಾವು ಮಾತನಾಡುವಾಗ ಅದರ ಹಿಂದಿನ ಚಿಂತನೆ , ಕಲ್ಪನೆ ಜನರಿಗೆ ತಿಳಿಯುತ್ತದೆ ಎಂದರು.
ಮಾರ್ಚ್ ಒಂದರಿಂದ ರಥಯಾತ್ರೆ
ಮಾರ್ಚ್ ಒಂದರಿಂದ ನಾಲ್ಕರವರೆಗೆ ರಥಯಾತ್ರೆ ಪ್ರಾರಂಭವಾಗಳಿದ್ದು, ಎಲ್ಲಾ ಮತ ಕ್ಷೇತ್ರಗಳಿಗೆ ಭೇಟಿ ನೀಡಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶವಾಗಲಿದೆ. ಈ ರಥಯಾತ್ರೆ ಸಂದರ್ಭದಲ್ಲಿ ಹಲವಾರು ಜನ ಭಾಗವಹಿಸಲಿದ್ದಾರೆ ಎಂದರು.
ಪ್ರಧಾನಮಂತ್ರಿಗಳು, ಗೃಹ ಸಚಿವರು, ಬಿಜೆಪಿ ಅಧ್ಯಕ್ಷ ನಡ್ಡಾ ಅವರು ಹಾಗೂ ಧರ್ಮೇಂದ್ರ ಪ್ರಧಾನ್ ಅವರೂ ರಾಜ್ಯಕ್ಕೆ ಬಂದು ಹೋಗಿದ್ದು, ದೊಡ್ಡ ಪ್ರಮಾಣದಲ್ಲಿ ಪ್ರಚಾರವಾಗುತ್ತದೆ ಹಾಗೂ ಎಲ್ಲಾ ಪ್ರಮುಖ ನಾಯಕರೂ ಬರುತ್ತಾರೆ ಎಂದರು
ಚುನಾವಣಾ ಪಟ್ಟಿ
ಚುನಾವಣೆಗೆ ಸ್ಪರ್ಧಿಸುವರ ಪಟ್ಟಿ ಸಂಸದೀಯ ಮಂಡಳಿ ತೀರ್ಮಾನ ಮಾಡಲಿದೆ ಎಂದರು.
ಗೋ ಬ್ಯಾಕ್ ಮಾಮೂಲಾಗಿದೆ
ಬನವಾಸಿಯಲ್ಲಿ ಸಿಎಂ ಗೋ ಬ್ಯಾಕ್ ಅಭಿಯಾನ ಪ್ರಾರಂಭಿಸಿರುವ ಬಗ್ಗೆ ಉತ್ತರಿಸಿ, ಗೋ ಬ್ಯಾಕ್ ಎನ್ನುವುದು ಬಹಳ ಮಾಮೂಲಿಯಾಗಿದೆ. ಕಾರ್ಯಕ್ರಮ ಪೂರ್ಣ ಮಾಡುತ್ತೇವೆ ಎಂದರು.
*ನಾಳೆಯಿಂದಲೇ ಸರ್ಕಾರಿ ನೌಕರರ ಮುಷ್ಕರ; ಸಿಎಂ ಏನಂದ್ರು?*
https://pragati.taskdun.com/7th-pay-commissioninterim-reportcm-basavaraj-bommai/