Kannada NewsKarnataka NewsPolitics

*ಕುರ್ಚಿ ಕಿತ್ತಾಟದಲ್ಲಿ ರಾಜ್ಯವನ್ನು ಮರೆತಿರುವ ಸಿಎಂ, ಡಿಸಿಎಂ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಕುರ್ಚಿ ಕಿತ್ತಾಟದಲ್ಲಿ ಜನರು ಮತ್ತು ರಾಜ್ಯವನ್ನು ಮರೆತಿದ್ದಾರೆ. ಕೇವಲ ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಮಯ ಕಳೆಯುತ್ತಿದ್ದಾರೆ. ಈ ಸರ್ಕಾರವನ್ನು ತಂದಿರುವುದಕ್ಕಾಗಿ ಜನರು ಪಶ್ಚಾತಾಪಪಡುತ್ತಿದ್ದು ಈ ಸರ್ಕಾರವನ್ನು ಕಿತ್ತು ಹಾಕಲು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಡಿತರ ಆಹಾರ ವಿತರಣೆ ಮಾಡುವ ಲಾರಿಗಳಿಗೆ ಸುಮಾರು 250 ಕೋಟಿ ರೂ. ಬಾಕಿ ಇರುವುದು ಅಕ್ಷಮ್ಯ ಅಪರಾಧ. ರಾಜ್ಯ ಸರ್ಕಾರ ಹಣಕಾಸು ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಯೋಜನೆಗಳಿಗೆ ಹಣ ಕೊಟ್ಟಿದ್ದೇವೆ. ಇವರು ಕೇವಲ ಸುಳ್ಳು ಹೇಳುತ್ತಿದ್ದಾರೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಅನೇಕ ಬಿಲ್ ಬಾಕಿ ಇತ್ತು ಅದನ್ನು ನಮ್ಮ ಸರ್ಕಾರ ಬಂದು ತೀರಿಸಿತ್ತು. ಕೊಎಡ್ ಸಂದರ್ಭದಲ್ಲಿಯೂ ಯಾವುದೇ ಹಣಕಾಸು ತೊಂದರೆಯಾಗದಂತೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ನನ್ನ ನೇತೃತ್ವದ ಸರ್ಕಾರದಲ್ಲಿಯೂ ಆರ್ಥಿಕವಾಗಿ ಸದೃಢವಾಗಿ ಕೆಲಸ ಮಾಡಿದ್ದರೂ ಕೂಡ ಈ ಸರ್ಕಾರ ಹಣಕಾಸು ನಿರ್ವ ಹಣೆಯಲ್ಲಿ ವಿಫಲವಾಗಿ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು.

ಬಡವರ ಗತಿ ಏನು?

ಬಡವರಿಗೆ ಆಹಾರ ಕೊಡದಿದ್ದರೆ ಬಡವರ ಪರಿಸ್ಥಿತಿ ಏನು, ಇವರು ಹದಿನೈದು ಕೆಜಿ ಕೊಡುವುದು ಹೋಗಲಿ ಹತ್ತು ಕೆಜಿಯನ್ನೂ ಕೊಡುತ್ತಿಲ್ಲ. ಹಣದ ಬದಲು ಅಕ್ಕಿ ಕೊಡುತ್ತೇವೆ ಎಂದರು ಅದನ್ನೂ ಕೊಡುತ್ತಿಲ್ಲ. ಬರಿ ಸುಳ್ಳಿನ ಕಂತೆ ಹೇಳುತ್ತ ಈ ಸರ್ಕಾರ ಕಾಲ ಕಳೆಯುತ್ತಿದೆ. ಜನರಿಗೆ ಆಹಾರ ಪದಾರ್ಥ ಸಿಗುತ್ತಿಲ್ಲ. ಆರೋಗ್ಯ ವ್ಯವಸ್ಥೆ ಸರಿ ಇಲ್ಲ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ನೋಡಿದರೆ ಶಿಕ್ಷಣ ವ್ಯವಸ್ಥೆ ಸರಿ ಇಲ್ಲ. ಮೂಲ ಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರಿಗೂ ಹಣ ಬಿಡುಗಡೆಯಾಗುತ್ತಿಲ್ಲ. ಹತ್ತು ಮಹಾನಗರ ಪಾಲಿಕೆ ಸಿಬ್ಬಂದಿಗೆ ಸಂಬಳ ನೀಡಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ನಗರಸಭೆ, ಪುರಸಭೆ ಉದ್ಯೋಗಿಗಳಿಗೆ ಸರ್ಕಾರ ಕೊಡಬೇಕಿರುವ ಹಣ ಕೊಡುತ್ತಿಲ್ಲ. ಪುರಸಭೆಯೇ ತನ್ನ ಹಣಕಾಸಿನ ವ್ಯವಸ್ಥೆಯಲ್ಲಿ ನೌಕರರ ಸಂಬಳ ನೀಡಬೇಕೆಂಬ ಆದೇಶ ಬಂದು ಒಂದು ವರ್ಷವಾಗಿದೆ ಇದು ದುಸ್ಥಿತಿಯ ಸಂಕೇತ. ಮುಖ್ಯಮಂತ್ರಿಗಳು ಈ ಎಲ್ಲ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ತಕ್ಷಣ ಹಣ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು. 

Home add -Advt

ಸಿಎಂ ಮತ್ತು ಡಿಸಿಎಂ ನಡುವೆ ನಾನು ಸಿಎಂ ಸ್ಥಾನ ಬಿಡುವುದಿಲ್ಲ. ನಾನು ಸಿಎಂ ಆಗುತ್ತೇನೆ ಎಂಬ ಕುರ್ಚಿ ಕಚ್ಚಾಟದಲ್ಲಿ ಆಡಳಿತವನ್ನು ಸಂಪೂರ್ಣ ಮರೆತಿದ್ದಾರೆ. ಬಡವರು, ರೈತರು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ಪ್ರವಾಹ ಹೆಚ್ಚಾಗಿದೆ. ಹೃದಯಾಘಾತ ಸಂಖ್ಯೆ ಹೆಚ್ಚಾಗಿದೆ. ಎಲ್ಲ ಇಲಾಖೆಯಲ್ಲಿ ಅವ್ಯವಸ್ಥೆ ಇದ್ದರೂ ಕೂಡ ಈ ಸರ್ಕಾರ ಇದ್ದೂ ಸತ್ತಂತೆ, ಕುರ್ಚಿ ಕಿತ್ತಾಟದಲ್ಲಿ ಜನರು ಮತ್ತು ರಾಜ್ಯವನ್ನು ಮರೆತಿದ್ದಾರೆ. ಕೇವಲ ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಮಯ ಕಳೆಯುತ್ತಿದ್ದಾರೆ. ಈ ಸರ್ಕಾರವನ್ನು ತಂದಿರುವುದಕ್ಕಾಗಿ ಜನರು ಪಶ್ಚಾತಾಪ ಪಡುತ್ತಿದ್ದು ಈ ಸರ್ಕಾರವನ್ನು ಕಿತ್ತು ಹಾಕಲು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.

Related Articles

Back to top button