Belagavi NewsBelgaum NewsElection NewsKannada NewsKarnataka NewsPolitics

ಕೆಎಲ್‍ಇ ಸಂಸ್ಥೆ ಬೆಳವಣಿಗೆಯಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಪ್ರಶ್ನೆ ಉದ್ಭವಿಸಬಾರದು : ಡಾ.ಪ್ರಭಾಕರ ಕೋರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 108 ವರ್ಷಗಳ ಇತಿಹಾಸ ಹೊಂದಿರುವ ಕೆಎಲ್‍ಇ ಸಂಸ್ಥೆಯು ದಾನಿಗಳಿಂದ ಮಹಾದಾನಿಗಳಿಂದ ಬೆಳೆದುನಿಂತಿದೆ. ಕೆಎಲ್‍ಇ ಸಂಸ್ಥೆಯ ಯಾವುದೇ ಇತಿಹಾಸವನ್ನು ಅರಿಯದೆ ಹೇಳಿಕೆಗಳನ್ನು ಕೊಡುವುದು ಉಚಿತವಾದುದಲ್ಲವೆಂದು ಕೆಎಲ್‍ಇ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.

Home add -Advt

ನಿನ್ನೆ  ಕೆಎಲ್‍ಇ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ ಪರ ಪ್ರಚಾರ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ‘ಕಾಂಗ್ರೆಸ್ ಸರ್ಕಾರ ಕೇವಲ ಒಂದು ರೂ.ಗೆ ಜಮೀನು ನೀಡಿದ ಫಲವೇ ಕೆಎಲ್‍ಇ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯ ಬೆಳೆದಿದೆ’ ಎಂದಿರುವುದಕ್ಕೆ ಡಾ.ಪ್ರಭಾಕರ ಕೋರೆ ಆಕ್ಷೇಪಿಸಿದ್ದಾರೆ.
 ‘ದಾನಿಗಳಿಂದ, ಮಹಾದಾನಿಗಳಿಂದ, ಸಿರಸಂಗಿ ಲಿಂಗರಾಜರು, ರಾಜಾಲಖಮಗೌಡರು, ಭೂಮರಡ್ಡಿ ಬಸಪ್ಪನವರಂಥ ತ್ಯಾಗವೀರರಿಂದ ಕೆಎಲ್‍ಇ ವಿಸ್ತಾರದಿಂದ ವಿಸ್ತಾರಕ್ಕೆ ಬೆಳೆದುನಿಂತಿದೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಪ್ರಶ್ನೆ ಉದ್ಭವಿಸಬಾರದು ಎಂದಿದ್ದಾರೆ.

ಕೆಎಲ್‍ಇ ಸಂಸ್ಥೆ ಸ್ವಂತದ ಹಣದಲ್ಲಿ ಪ್ರಾರ್ಪಟಿ ಖರೀದಿಸಿದೆ. ಆಯಾ ಕಾಲಘಟ್ಟದಲ್ಲಿದ್ದ ಪಕ್ಷಗಳಿಂದ ಸಹಾಯ ಸಹಕಾರ ಪಡೆದಿದೆ. ಆದರೆ ಕೇವಲ ಕಾಂಗ್ರೆಸ್‍ನಿಂದ ಕೆಎಲ್‍ಇ ತನ್ನ ಆಸ್ಪತ್ರೆ ನಿರ್ಮಿಸಿದೆ, ವಿ.ವಿ.ಗಳನ್ನು ಸ್ಥಾಪಿಸಿದೆ ಎಂಬರ್ಥದ ಹೇಳಿಕೆಗಳು ಇಂದಿನ ಪತ್ರಿಕೆಯಲ್ಲಿ ಪ್ರಕಟವಾಗಿರುವುದು ದುರದೃಷ್ಟಕರ. ಕೆಎಲ್‍ಇ ಬೆಳವಣಿಗೆಯ ಇತಿಹಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ “ಕಾಂಗ್ರೆಸ್”ನಿಂದ ಕೆಎಲ್‍ಇ ಬೆಳೆದಿದೆ ಎಂದು ಹೇಳಿರುವದನ್ನು ನಾನು ಪ್ರತಿಭಟಿಸುತ್ತೇನೆ. ನಮ್ಮ ಕೆಎಲ್‍ಇ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಸೇರಿದವರು, ಬೆಂಬಲಿಸುವವರು ಇದ್ದಾರೆ. ಅದರರ್ಥ ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಅಂಟಿಕೊಂಡಿಲ್ಲ. ವೈಯಕ್ತಿಕವಾಗಿ ಅವರ ನಿಲುವುಗಳನ್ನು ನೋಡಬೇಕು. ಶಿಕ್ಷಣ ಸಂಸ್ಥೆಯಲ್ಲಿ ನಾವು ರಾಜಕೀಯ ತರುವುದಿಲ್ಲ. ಅದರ ಬೆಳವಣಿಗೆಗಾಗಿ ಸರ್ವರ ಸಹಕಾರ ಪಡೆಯುತ್ತೇವೆ ಎಂದು ಅವರು ಹೇಳಿದ್ದಾರೆ.
‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಈ ನೆಲದ ಶಿಕ್ಷಣ ಸಂಸ್ಥೆಗಳ ನೈಜ ಇತಿಹಾಸವನ್ನು ಅರಿತುಕೊಂಡಂತೆ ಕಾಣುವುದಿಲ್ಲ. ಇತಿಹಾಸ ಅರಿಯದೆ ಯಾವುದೇ ರೀತಿಯ ಹೇಳಿಕೆಗಳನ್ನು ಕೊಡುವುದು ಸಮಂಜಸವೆನಿಸುವುದಿಲ್ಲ. ಕೆಎಲ್‍ಇ ಸಂಸ್ಥೆಯ ಇತಿಹಾಸವನ್ನು ತಿಳಿದುಕೊಳ್ಳದೆ ಮತಬೇಟೆಗಾಗಿ ಹೇಳಿಕೆಗಳನ್ನು ನೀಡುವುದು ತರವಲ್ಲ. ಲಕ್ಷ್ಮೀ ಹೆಬ್ಬಾಳ್ಕರ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಡಾ.ಪ್ರಭಾಕರ ಕೋರೆಯವರು ಆಗ್ರಹಿಸಿದ್ದಾರೆ.

Related Articles

Back to top button