Kannada NewsKarnataka NewsLatest

*ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರದ ಮಧ್ಯಪ್ರವೇಶಕ್ಕೆ ಸಿಎಂ ಡಿಕೆಶಿ ಮನವಿ*

ಸಕ್ಕರೆ ಎಂಎಸ್‌ಪಿ ಪರಿಷ್ಕರಣೆ, ಎಥನಾಲ್ ಬೆಲೆ ಏರಿಕೆ ಸೇರಿ ಹಲವು ಬೇಡಿಕೆಗಳ ಪ್ರಸ್ತಾಪ; ರೈತರ ಹಿತ ಕಾಯಲು ಪ್ರಧಾನಿ ಮೋದಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಪತ್ರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸಿ, ರೈತರ ಹಿತಾಸಕ್ತಿ ಕಾಪಾಡುವ ಜೊತೆಗೆ ರಾಜ್ಯದಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ನಿರಂತರವಾಗಿ ನಡೆಯುವಂತೆ ಮಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಪತ್ರ ಬರೆದು ಕೇಂದ್ರ ಸರ್ಕಾರದ ತುರ್ತು ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದಾರೆ.

ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಪರಿಷ್ಕರಣೆ, ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ನಿಗದಿ, ಎಥನಾಲ್ ನೀತಿಯಲ್ಲಿ ಬದಲಾವಣೆ, ಎಫ್‌ಆರ್‌ಪಿ ಮೂಲ ರಿಕವರಿ ಪ್ರಮಾಣವನ್ನು ಶೇ.9.5ಕ್ಕೆ ಇಳಿಸುವುದು ಸೇರಿದಂತೆ ಕಬ್ಬು ಬೆಳೆಗಾರರ ಪ್ರಮುಖ ಬೇಡಿಕೆಗಳನ್ನು ಪತ್ರಗಳಲ್ಲಿ ಪ್ರಸ್ತಾಪಿಸಿದ್ದಾರೆ.

ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ ರೈತರ ಬೇಡಿಕೆಗಳಿಗೆ ಸಕಾಲಿಕವಾಗಿ ಸ್ಪಂದಿಸುವುದು ಅಗತ್ಯವಾಗಿದ್ದು, ಕೇಂದ್ರ ಸರ್ಕಾರ ಶೀಘ್ರ ನಿರ್ಧಾರ ಕೈಗೊಂಡರೆ ರೈತರನ್ನು ಮುಷ್ಕರ ಹಿಂಪಡೆಯಲು ಒಪ್ಪಿಸಲು ಹಾಗೂ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವ ಕಾರ್ಯ ಮುಂದುವರಿಸಲು ರಾಜ್ಯ ಸರ್ಕಾರಕ್ಕೆ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಸಕ್ಕರೆ ಎಂಎಸ್‌ಪಿ ಪರಿಷ್ಕರಣೆಗೆ ಒತ್ತಾಯ

2019ರ ಫೆಬ್ರವರಿ 14ರಿಂದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪ್ರತಿ ಕೆಜಿಗೆ ₹31ರಲ್ಲೇ ಸ್ಥಿರವಾಗಿದೆ. ಇದೇ ಅವಧಿಯಲ್ಲಿ ಕಬ್ಬಿನ ಎಫ್‌ಆರ್‌ಪಿ ಪ್ರತಿ ಟನ್‌ಗೆ ₹2,750ರಿಂದ ₹3,650ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಸಕ್ಕರೆ ಮಾರುಕಟ್ಟೆ ಬೆಲೆ ಪ್ರತಿ ಕೆಜಿಗೆ ಸುಮಾರು ₹45ರಷ್ಟಿರುವುದರಿಂದ ಎಂಎಸ್‌ಪಿ ಪರಿಷ್ಕರಣೆ ಮಾಡಿದರೂ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳುವುದಿಲ್ಲ. ಬದಲಿಗೆ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿ ಸುಧಾರಿಸಿ, ರೈತರಿಗೆ ಕಬ್ಬಿನ ಬಾಕಿ ಪಾವತಿಸಲು ಭದ್ರತೆ ದೊರೆಯಲಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಸರ್ಕಾರವು ಈ ಹಿಂದೆ ಪ್ರತಿ ಕೆಜಿ ಸಕ್ಕರೆಗೆ ₹41.50 ಎಂಎಸ್‌ಪಿ ನಿಗದಿಪಡಿಸುವಂತೆ ಶಿಫಾರಸು ಮಾಡಿತ್ತು. ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಸಕ್ಕರೆಗೆ ಪ್ರತ್ಯೇಕ ಎಂಎಸ್‌ಪಿ ನಿಗದಿಪಡಿಸುವ ಮೂಲಕ ಗೃಹಬಳಕೆಯ ಗ್ರಾಹಕರ ಹಿತ ರಕ್ಷಿಸಬೇಕು ಹಾಗೂ ಸಗಟು ಖರೀದಿದಾರರು ನ್ಯಾಯಯುತ ಬೆಲೆ ಪಾವತಿಸುವ ವ್ಯವಸ್ಥೆ ರೂಪಿಸಬೇಕು ಎಂದೂ ಮನವಿ ಮಾಡಿದ್ದಾರೆ.

ಕಬ್ಬಿಗೆ ₹5,500 ಬೆಲೆ ನೀಡಲು ರೈತರ ಬೇಡಿಕೆ

ಡಾ. ಎಂ.ಎಸ್. ಸ್ವಾಮಿನಾಥನ್ ಅಧ್ಯಕ್ಷತೆಯ ರಾಷ್ಟ್ರೀಯ ಕೃಷಿಕ ಆಯೋಗ ಶಿಫಾರಸು ಮಾಡಿದ ಸಿ2+50% ಸೂತ್ರದ ಆಧಾರದ ಮೇಲೆ ಕಬ್ಬಿನ ಬೆಲೆ ನಿಗದಿಪಡಿಸಬೇಕೆಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಪ್ರಸ್ತುತ ಶೇ.10.25ರ ರಿಕವರಿ ಆಧಾರದ ಮೇಲೆ ನಿಗದಿಯಾಗಿರುವ ಪ್ರತಿ ಟನ್‌ಗೆ ₹3,650 ಎಫ್‌ಆರ್‌ಪಿ ಬದಲಿಗೆ ₹5,500 ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

ಕಡಿಮೆ ರಿಕವರಿ ಇರುವ ಹಾಗೂ ಹವಾಮಾನ ವೈಪರೀತ್ಯಕ್ಕೆ ಒಳಗಾಗುವ ಪ್ರದೇಶಗಳ ರೈತರಿಗೆ ನ್ಯಾಯ ದೊರಕಿಸಲು ಎಫ್‌ಆರ್‌ಪಿಯ ಮೂಲ ರಿಕವರಿ ಪ್ರಮಾಣವನ್ನು ಮತ್ತೆ ಶೇ.9.5ಕ್ಕೆ ಇಳಿಸುವಂತೆಯೂ ಪತ್ರದಲ್ಲಿ ಕೋರಲಾಗಿದೆ.

ಈ ಹಿಂದೆ ರಾಜ್ಯ ಸರ್ಕಾರವು 2026ರ ಜನವರಿ 16ರಂದು ಶೇ.9.5ರ ರಿಕವರಿಗೆ ಪ್ರತಿ ಟನ್‌ಗೆ ₹4,440 ನಿಗದಿಪಡಿಸುವಂತೆ ಶಿಫಾರಸು ಮಾಡಿತ್ತು. ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗಳಿಂದಾಗಿ ರಿಕವರಿ ಕಡಿಮೆಯಾಗುವ ಪ್ರದೇಶಗಳ ರೈತರು ಅನಗತ್ಯ ನಷ್ಟ ಅನುಭವಿಸುವುದನ್ನು ತಪ್ಪಿಸಲು ಈ ಕ್ರಮ ಅಗತ್ಯವೆಂದು ತಿಳಿಸಲಾಗಿದೆ.

ಎಥನಾಲ್ ನೀತಿ ಪರಿಷ್ಕರಣೆಗೆ ಆಗ್ರಹ

ರಾಜ್ಯದಲ್ಲಿ ಕಬ್ಬು ಮತ್ತು ಮೋಲಾಸಸ್ ಆಧಾರಿತ ಎಥನಾಲ್ ಉತ್ಪಾದನಾ ಸಾಮರ್ಥ್ಯ ಸುಮಾರು 225 ಕೋಟಿ ಲೀಟರ್ ಇದ್ದರೂ, 2025-26ರ ಎಥನಾಲ್ ಪೂರೈಕೆ ವರ್ಷದಲ್ಲಿ ಕರ್ನಾಟಕಕ್ಕೆ ಕೇವಲ 117 ಕೋಟಿ ಲೀಟರ್ ಹಂಚಿಕೆಯಾಗಿದೆ. ಹೀಗಾಗಿ ಕಬ್ಬು ಆಧಾರಿತ ಡಿಸ್ಟಿಲರಿಗಳಿಗೆ ಎಥನಾಲ್ ಹಂಚಿಕೆಯಲ್ಲಿ ನ್ಯಾಯಯುತ ಪಾಲು ನೀಡಬೇಕೆಂದು ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ.

2022-23ರಿಂದ ಕಬ್ಬಿನ ರಸ ಹಾಗೂ ಬಿ-ಹೆವಿ ಮೋಲಾಸಸ್‌ನಿಂದ ಉತ್ಪಾದಿಸುವ ಎಥನಾಲ್ ಬೆಲೆ ಪರಿಷ್ಕರಣೆಯಾಗದೆ ಉಳಿದಿದೆ. ಈ ದರಗಳನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದು, ಪ್ರತಿ ಲೀಟರ್‌ಗೆ ಕ್ರಮವಾಗಿ ₹73, ₹67 ಮತ್ತು ₹61 ದರಗಳನ್ನು ನಿಗದಿಪಡಿಸುವಂತೆ ಕೋರಿದೆ.

2026ರ ಅಕ್ಟೋಬರ್ 22ರಂದು ಹೊರಡಿಸಲಾದ ಎಥನಾಲ್ ನಿರ್ದೇಶನವನ್ನು ಫೆಬ್ರವರಿ 2027ರ ಬೆಳೆ ಅಂದಾಜಿನ ನಂತರ ಮರುಪರಿಶೀಲಿಸಬೇಕು. ಆರಂಭದಲ್ಲಿ ಬಿ-ಹೆವಿ ಮೋಲಾಸಸ್‌ನಿಂದ ಉತ್ಪಾದನೆಯಾಗುವ ಎಥನಾಲ್ ವಿಚಾರವನ್ನು ಪರಿಶೀಲಿಸಿ, ಸಿ-ಹೆವಿ ಎಥನಾಲ್ ಬೆಲೆ ಪರಿಷ್ಕರಣೆಯನ್ನೂ ಪರಿಗಣಿಸಬೇಕು ಎಂದು ಮನವಿ ಮಾಡಲಾಗಿದೆ.

ಎಥನಾಲ್ ಆದಾಯದಲ್ಲೂ ರೈತರಿಗೆ ಪಾಲು

ಡಾ. ಸಿ. ರಂಗರಾಜನ್ ಅವರ ಆದಾಯ ಹಂಚಿಕೆ ಸೂತ್ರವನ್ನು ಮರುಪರಿಶೀಲಿಸುವಂತೆ ಮುಖ್ಯಮಂತ್ರಿ ಕೋರಿದ್ದಾರೆ. ಸಕ್ಕರೆ ಉತ್ಪಾದನೆಯಷ್ಟೇ ಅಲ್ಲದೆ ಎಥನಾಲ್ ಮತ್ತು ಸಹ-ವಿದ್ಯುತ್ ಉತ್ಪಾದನೆಯಿಂದ ಬರುವ ಆದಾಯವನ್ನೂ ಒಳಗೊಂಡಂತೆ ಆದಾಯ ಹಂಚಿಕೆ ಸೂತ್ರ ರೂಪಿಸಬೇಕು. ಇದರಿಂದ ಸಕ್ಕರೆ ಕಾರ್ಖಾನೆಗಳ ಪ್ರಮುಖ ಆದಾಯದ ಮೂಲವಾಗಿರುವ ಎಥನಾಲ್‌ನಿಂದ ಬರುವ ಲಾಭದಲ್ಲಿ ರೈತರಿಗೂ ನ್ಯಾಯಯುತ ಪಾಲು ದೊರೆಯಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ನೀತಿ ಆಯೋಗದ ಕಾರ್ಯಪಡೆ ಮತ್ತು ಸಿಎಸಿಪಿ ಶಿಫಾರಸು ಮಾಡಿದಂತೆ ಬೆಲೆ ಸ್ಥಿರೀಕರಣ ನಿಧಿ (ಪ್ರೈಸ್ ಸ್ಟೆಬಿಲೈಸೇಷನ್ ಫಂಡ್) ಸ್ಥಾಪಿಸುವಂತೆಯೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ರಾಜ್ಯ ಸರ್ಕಾರದ ವಾದವೇನು?

ಕಬ್ಬಿನ ಬೆಲೆ, ಎಫ್‌ಆರ್‌ಪಿ, ಸಕ್ಕರೆ ಎಂಎಸ್‌ಪಿ ಮತ್ತು ಎಥನಾಲ್ ನೀತಿಗೆ ಸಂಬಂಧಿಸಿದ ಬೇಡಿಕೆಗಳು ಕಬ್ಬು (ನಿಯಂತ್ರಣ) ಆದೇಶ, 1966 ಹಾಗೂ ಸಕ್ಕರೆ (ನಿಯಂತ್ರಣ) ಆದೇಶ, 2025ರ ಅಡಿಯಲ್ಲಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಮಟ್ಟದಲ್ಲಿ ಸಲಹಾ ಬೆಲೆ (ಎಸ್‌ಎಪಿ) ನಿಗದಿಪಡಿಸುವ ಕುರಿತು ಕೇಂದ್ರ ಸಚಿವರು ನೀಡಿದ್ದ ಸಲಹೆಯನ್ನು ಪರಿಶೀಲಿಸಿರುವುದಾಗಿ ಅವರು ತಿಳಿಸಿದ್ದಾರೆ. ಕರ್ನಾಟಕವು 2014ರ ತಿದ್ದುಪಡಿ ಕಾಯ್ದೆಯಡಿ ಎಫ್‌ಆರ್‌ಪಿ ಜೊತೆಗೆ ಹಂಗಾಮಿನ ನಂತರದ ಆದಾಯ ಹಂಚಿಕೆ ಮಾದರಿಯನ್ನು ಅನುಸರಿಸುತ್ತಿದೆ. ಈ ಮಾದರಿಯು ರೈತರು ಮತ್ತು ಕಾರ್ಖಾನೆಗಳ ಹಿತಾಸಕ್ತಿಯನ್ನು ಸಮತೋಲನಗೊಳಿಸುವ ಉದ್ದೇಶ ಹೊಂದಿದೆ ಎಂದು ವಿವರಿಸಿದ್ದಾರೆ.

2026ರ ಅಕ್ಟೋಬರ್ 15ರ ವೇಳೆಗೆ 2025-26ನೇ ಸಾಲಿನ ಕಬ್ಬಿನ ಬಾಕಿ ಪಾವತಿಯಲ್ಲಿ ಶೇ.99.85ರಷ್ಟು ಪೂರ್ಣಗೊಂಡಿದೆ. ಕಳೆದ ಹಂಗಾಮಿನಲ್ಲಿ ರೈತರೊಂದಿಗಿನ ಒಪ್ಪಂದದಂತೆ ಕಾರ್ಖಾನೆಗಳು ಎಫ್‌ಆರ್‌ಪಿಗಿಂತ ಪ್ರತಿ ಟನ್‌ಗೆ ₹500ರಿಂದ ₹600 ಹೆಚ್ಚುವರಿಯಾಗಿ ಪಾವತಿಸಿವೆ. ರಾಜ್ಯ ಸರ್ಕಾರವೂ ಪ್ರತಿ ಟನ್‌ಗೆ ಹೆಚ್ಚುವರಿ ₹100ರಂತೆ ಒಟ್ಟು ₹290 ಕೋಟಿ ಪಾವತಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2013-14ರಲ್ಲಿ ಹಂಗಾಮಿಗೆ ಮುನ್ನ ಎಫ್‌ಆರ್‌ಪಿಗಿಂತ ಹೆಚ್ಚಿನ ಬೆಲೆ ನಿಗದಿಪಡಿಸಿದಾಗ, ಸಕ್ಕರೆ ಆದಾಯದಲ್ಲಿ ಸುಧಾರಣೆಯಾಗದ ಹಿನ್ನೆಲೆಯಲ್ಲಿ ಕಾರ್ಖಾನೆಗಳಿಗೆ ಆ ಬೆಲೆ ಪಾವತಿಸಲು ಸಾಧ್ಯವಾಗಿರಲಿಲ್ಲ. ಆಗ ರಾಜ್ಯ ಸರ್ಕಾರವೇ ಸುಮಾರು ₹1,520 ಕೋಟಿ ಆರ್ಥಿಕ ಹೊರೆ ಭರಿಸಬೇಕಾಯಿತು ಎಂದು ನೆನಪಿಸಿದ್ದಾರೆ.

ರಾಜ್ಯ ಮಟ್ಟದ ಬೆಲೆ ನಿಗದಿ ಅಥವಾ ತಮಿಳುನಾಡು ಮಾದರಿಯ ನೆರವು ಕರ್ನಾಟಕಕ್ಕೆ ವಾರ್ಷಿಕ ಸುಮಾರು ₹4,090 ಕೋಟಿ ವೆಚ್ಚವಾಗಬಹುದು. ಇಂತಹ ವ್ಯವಸ್ಥೆಯು ಎಫ್‌ಆರ್‌ಪಿಯ ಮೂಲ ಬೆಲೆ, ಸಕ್ಕರೆ ಎಂಎಸ್‌ಪಿ ಮತ್ತು ಎಥನಾಲ್ ನೀತಿ ಪರಿಷ್ಕರಣೆಗೆ ಪರ್ಯಾಯವಾಗಲಾರದು ಎಂಬುದು ರಾಜ್ಯ ಸರ್ಕಾರದ ನಿಲುವಾಗಿದೆ.

ಸಕ್ಕರೆ ಕಾರ್ಖಾನೆಗಳಿಂದ ಭರವಸೆ

ಕಬ್ಬು ಬೆಳೆಗಾರರ ಸಮಸ್ಯೆಗಳ ವಾಸ್ತವಿಕ ಸ್ಥಿತಿಗತಿ ಅರಿಯಲು ಅಕ್ಟೋಬರ್ 26ರಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ರೈತ ಮುಖಂಡರು ಹಾಗೂ ಎಲ್ಲ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆ ನಡೆಸಲಾಗಿತ್ತು. ಸಕ್ಕರೆಯ ಎಂಎಸ್‌ಪಿಯಲ್ಲಿ ಯಾವುದೇ ಹೆಚ್ಚಳವಾದರೂ ಅದರ ಲಾಭವನ್ನು ರೈತರಿಗೆ ವರ್ಗಾಯಿಸುವುದಾಗಿ ಕಾರ್ಖಾನೆಗಳು ಭರವಸೆ ನೀಡಿವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಪ್ರೊ. ರಮೇಶ್ ಚಂದ್ ಅಧ್ಯಕ್ಷತೆಯ ಸಮಿತಿಯ ಕಾರ್ಯವನ್ನೂ ರಾಜ್ಯ ಸರ್ಕಾರ ಸ್ವಾಗತಿಸಿದೆ. ಸಮಿತಿಯು ಅಕ್ಟೋಬರ್ 29ರಂದು ರೈತರು ಮತ್ತು ತಜ್ಞರ ಅಭಿಪ್ರಾಯ ಹಾಗೂ ಅಕ್ಟೋಬರ್ 30ರಂದು ರಾಜ್ಯ ಸರ್ಕಾರದ ಅಭಿಪ್ರಾಯ ಆಲಿಸಿದೆ. ಸಮಿತಿಗೆ ಸಲ್ಲಿಸಲಾದ ರಾಜ್ಯ ಸರ್ಕಾರದ ಮನವಿಯ ಪ್ರತಿಯನ್ನೂ ಲಗತ್ತಿಸಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಹಂಗಾಮಿಗೆ ತುರ್ತು ಕ್ರಮಗಳ ಮನವಿ

ಸಮಿತಿಯ ಶಿಫಾರಸುಗಳು ಬರುವವರೆಗೆ ಪ್ರಸ್ತುತ ಹಂಗಾಮಿಗೆ ಸಕ್ಕರೆಯ ಎಂಎಸ್‌ಪಿ ಪರಿಷ್ಕರಣೆ, ಎಥನಾಲ್ ನಿರ್ದೇಶನದ ಮರುಪರಿಶೀಲನೆ ಹಾಗೂ ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚಗಳನ್ನು ಸೇರಿಸಿ ಹಾಗೂ ಸೇರಿಸದೆ ಎರಡೂ ರೀತಿಯಲ್ಲಿ ಎಫ್‌ಆರ್‌ಪಿ ಘೋಷಿಸುವ ಕ್ರಮಗಳನ್ನು ಪರಿಗಣಿಸುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

ರೈತರು, ಸಕ್ಕರೆ ಉದ್ಯಮ ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವ ಜವಾಬ್ದಾರಿ ಕೇಂದ್ರ ಸರ್ಕಾರಕ್ಕಿದೆ ಎಂಬುದನ್ನು ಒಪ್ಪಿಕೊಂಡಿರುವ ಅವರು, ಈ ವಿಚಾರಗಳಲ್ಲಿ ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಕೋರಿದ್ದಾರೆ.

ಲಕ್ಷಾಂತರ ಕಬ್ಬು ಬೆಳೆಗಾರರು ಹಾಗೂ ಕರ್ನಾಟಕದ ಜನರ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

Related Articles

Back to top button