Kannada NewsKarnataka NewsLatest

*ಕಬ್ಬು ಬೆಳೆಗಾರರ ಹೋರಾಟಕ್ಕೆ ಜಿಲ್ಲಾಡಳಿತ ಬ್ರೇಕ್*: *ಹೆದ್ದಾರಿ, ಟೋಲ್ ಬಂದ್ ಮಾಡಿದ್ರೆ ಕಠಿಣ ಕ್ರಮ*

ಪ್ರಗತಿವಾಹಿನಿ ಸುದ್ದಿ: ಕಬ್ಬಿಗೆ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ರೈತರು ನೀಡಿದ್ದ ಅಂತಿಮ ಗಡುವು ಇಂದು ಮುಕ್ತಾಯಗೊಳ್ಳಲಿದ್ದು, ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್ ಹಾಗೂ ಹತ್ತರಗಿ ಟೋಲ್ ಸ್ಥಗಿತಗೊಳಿಸಲು ರೈತರು ನಿರ್ಧರಿಸಿದ್ದಾರೆ.

ಆದರೆ, ರೈತರ ಪ್ರತಿಭಟನೆಗೆ ಬೆಳಗಾವಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಅಕ್ಟೋಬರ್ 31ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ರೈತರು ಘೋಷಿಸಿದ ಬೆನ್ನಲ್ಲೇ, ಹೆದ್ದಾರಿ, ಸಂಪರ್ಕ ರಸ್ತೆ ಮತ್ತು ಟೋಲ್ ಪ್ಲಾಜಾಗಳನ್ನು ತಡೆದು ಪ್ರತಿಭಟನೆ ನಡೆಸುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) 2023ರ ಕಲಂ 163ರ ಅಡಿಯಲ್ಲಿ ನಿರ್ಬಂಧದ ಆದೇಶ ಹೊರಡಿಸಲಾಗಿದೆ. ಜಿಲ್ಲಾಡಳಿತ ಎಂಟು ಷರತ್ತುಗಳನ್ನು ವಿಧಿಸಿದ್ದು, ಯಾವುದೇ ಕಾರಣಕ್ಕೂ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಬಾರದು ಎಂದು ಖಡಕ್ ಸೂಚನೆ ನೀಡಿದೆ.

ಬೆಳಗಾವಿ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 48 ಸೇರಿದಂತೆ ಜಿಲ್ಲೆಯ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವ್ಯಕ್ತಿಗಳು, ಸಂಘಟನೆಗಳು ಅಥವಾ ಗುಂಪುಗಳು ಪ್ರತಿಭಟನೆ ನಡೆಸುವಂತಿಲ್ಲ. ಜಿಲ್ಲೆಯ ಮೂರು ಟೋಲ್ ಪ್ಲಾಜಾಗಳನ್ನು ಬಂದ್ ಮಾಡುವಂತಿಲ್ಲ. ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಗಳಲ್ಲಿ ಟ್ರ್ಯಾಕ್ಟರ್ ಸೇರಿದಂತೆ ಯಾವುದೇ ವಾಹನಗಳನ್ನು ಅಡ್ಡಗಟ್ಟುವಂತಿಲ್ಲ ಎಂದು ಆದೇಶಿಸಲಾಗಿದೆ.

ಜೊತೆಗೆ ಸಾರ್ವಜನಿಕ ಹಾಗೂ ಸರ್ಕಾರಿ ಆಸ್ತಿಪಾಸ್ತಿಗೆ ಹಾನಿ ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಭದ್ರತಾ ಕ್ರಮ ಕೈಗೊಳ್ಳುವಂತೆ ಎಸ್‌ಪಿ ಮತ್ತು ಪೊಲೀಸ್ ಕಮಿಷನರ್‌ಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇತ್ತ ಜಿಲ್ಲಾಡಳಿತದ ನಿರ್ಬಂಧಕ್ಕೆ ರೈತ ಮುಖಂಡ ಚೂನಪ್ಪ ಪೂಜಾರಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ನಿರ್ಬಂಧ ವಿಧಿಸುವುದರಲ್ಲಿ ತಪ್ಪಿಲ್ಲ. ಆದರೆ, ಗುಂಡು ಹಾರಿಸಲಿ, ಲಾಠಿಚಾರ್ಜ್ ಮಾಡಲಿ, ನಾವು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿಯೇ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪ್ರತಿವರ್ಷ ಸುವರ್ಣಸೌಧದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿಗೆ ತೆರಳಿ ಎರಡು ದಿನಗಳಲ್ಲಿ ಬೆಂಬಲ ಬೆಲೆ ಘೋಷಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಇಂದು ರಾತ್ರಿ 12 ಗಂಟೆಯವರೆಗೆ ಸರ್ಕಾರಕ್ಕೆ ಸಮಯವಿದೆ. ಅಷ್ಟರೊಳಗೆ ಘೋಷಣೆ ಮಾಡದಿದ್ದರೆ ನಾಳೆ ಬೆಳಗ್ಗೆ 11 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ. ಹತ್ತರಗಿ ಟೋಲ್ ಕೂಡ ಸ್ಥಗಿತಗೊಳಿಸುತ್ತೇವೆ ಎಂದು ಚೂನಪ್ಪ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

ಅರೆಸ್ಟ್ ಮಾಡಲಿ, ಜೈಲಿಗೆ ಕಳುಹಿಸಲಿ, ಗಲ್ಲಿಗೇರಿಸಿದರೂ ಸಂತೋಷ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾಳೆ ಬೆಳಗಾವಿಯಲ್ಲಿ ರೈತರ ಹೋರಾಟ ಮತ್ತು ಜಿಲ್ಲಾಡಳಿತದ ನಿರ್ಬಂಧದ ನಡುವೆ ಪರಿಸ್ಥಿತಿ ಹೇಗೆ ತಿರುವು ಪಡೆಯಲಿದೆ ಎಂಬ ಕುತೂಹಲ ಮೂಡಿದೆ.

Related Articles

Back to top button