*ರಾಜ್ಯೋತ್ಸವ ಪ್ರಶಸ್ತಿ ಪ್ರಕಟ*: *71 ಸಾಧಕರಿಗೆ ಗೌರವ, ಸರೋಜಾದೇವಿ-ವಿಷ್ಣುವರ್ಧನ್ಗೆ ಮರಣೋತ್ತರ ಕರ್ನಾಟಕ ರತ್ನ*

ಪ್ರಗತಿವಾಹಿನಿ ಸುದ್ದಿ: 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರ 71 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಮಾಜಸೇವೆ ಕ್ಷೇತ್ರದಿಂದ 9 ಮಂದಿ, ಜಾನಪದ ಮತ್ತು ಸಂಕೀರ್ಣ ಕ್ಷೇತ್ರಗಳಿಂದ ತಲಾ 7 ಮಂದಿ, ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರಗಳಿಂದ ತಲಾ 6 ಮಂದಿ, ಶಿಕ್ಷಣ ಕ್ಷೇತ್ರದಿಂದ 4 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಂಗೀತ, ಚಲನಚಿತ್ರ ಮತ್ತು ಕಿರುತೆರೆ ಹಾಗೂ ಕ್ರೀಡಾ ಕ್ಷೇತ್ರಗಳಿಂದ ತಲಾ 3 ಮಂದಿಗೆ ಪ್ರಶಸ್ತಿ ಘೋಷಿಸಲಾಗಿದೆ. ಶಿಲ್ಪಕಲೆ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಧ್ಯಮ, ವೈದ್ಯಕೀಯ ಹಾಗೂ ಆಡಳಿತ ಕ್ಷೇತ್ರಗಳಿಂದ ತಲಾ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ನೃತ್ಯ, ಯಕ್ಷಗಾನ, ಬಯಲಾಟ, ಕರಕುಶಲ, ಪರಿಸರ, ಮಾಧ್ಯಮ ಮತ್ತು ಛಾಯಾಚಿತ್ರ, ವಾಸ್ತುಶಿಲ್ಪ, ಎಂಜಿನಿಯರಿಂಗ್, ನ್ಯಾಯಾಂಗ, ಹೊರನಾಡು ಮತ್ತು ಹೊರದೇಶ ಹಾಗೂ ಚಿತ್ರಕಲೆ ಕ್ಷೇತ್ರಗಳ ಸಾಧಕರಿಗೂ ಪ್ರಶಸ್ತಿ ನೀಡಲಾಗಿದೆ.
ಇದೇ ವೇಳೆ ಹಿರಿಯ ನಟಿ ಬಿ. ಸರೋಜಾದೇವಿ ಹಾಗೂ ನಟ ಡಾ. ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ನವೆಂಬರ್ 19ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕಾರ್ಯಕ್ರಮಕ್ಕೆ ಸೂಪರ್ಸ್ಟಾರ್ ರಜನಿಕಾಂತ್ ಅವರನ್ನು ಆಹ್ವಾನಿಸಲು ಪ್ರಯತ್ನಿಸಲಾಗುತ್ತಿದೆ. ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ ಕಲಾವಿದರನ್ನೂ ಸಮಾರಂಭಕ್ಕೆ ಆಹ್ವಾನಿಸಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ. ಕರ್ನಾಟಕ ರತ್ನ ಪ್ರಶಸ್ತಿಗೆ ಅರ್ಹರಾದ ಇನ್ನೂ ಅನೇಕ ಸಾಧಕರಿದ್ದು, ಮುಂದಿನ ದಿನಗಳಲ್ಲಿ ಅವರನ್ನೂ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ
ಜಾನಪದ ಕ್ಷೇತ್ರ: ದಾವಲಸಾಬ ಅತ್ತಾರ (ಕೊಪ್ಪಳ), ಗೌರಮ್ಮ (ಚಾಮರಾಜನಗರ), ಪಾಂಡಪ್ಪ ದೇವಲಪ್ಪ ಲಮಾಣಿ (ಗದಗ), ಎ.ಆರ್. ಸತ್ಯನಾರಾಯಣ (ಬೆಂಗಳೂರು ದಕ್ಷಿಣ), ಈರಣ್ಣ ರುದ್ರಾಕ್ಷಿ (ರಾಯಚೂರು), ಶಿವಲಿಂಗಪ್ಪ ಎಂ. (ಕೊಪ್ಪಳ).
ಸಂಗೀತ ಕ್ಷೇತ್ರ: ಡಾ. ಸಿ.ಎ. ಶ್ರೀಧರ್ (ಮೈಸೂರು), ಡಾ. ಎ. ನಾರಾಯಣಸ್ವಾಮಿ (ಹಾಸನ), ವಿ. ಮುರಳಿ (ಬೆಂಗಳೂರು ಗ್ರಾಮಾಂತರ).
ನೃತ್ಯ ಕ್ಷೇತ್ರ: ಡಾ. ಸತ್ಯನಾರಾಯಣ ರಾಜು (ಬೆಂಗಳೂರು ನಗರ).
ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರ: ಕೆ. ವೆಂಕಟರಮಣ (ಧಾರವಾಡ), ಅಶೋಕ್ (ಬೆಂಗಳೂರು ಗ್ರಾಮಾಂತರ), ಕೆ.ಎಸ್. ರವೀಂದ್ರನಾಥ್ (ಬೆಂಗಳೂರು ನಗರ).
ಯಕ್ಷಗಾನ ಕ್ಷೇತ್ರ: ಗೋಪಾಲ ಗಾಣಿಗ (ಉಡುಪಿ).
ಬಯಲಾಟ ಕ್ಷೇತ್ರ: ಹುಲಿಗೆಮ್ಮ (ಬಳ್ಳಾರಿ).
ರಂಗಭೂಮಿ ಕ್ಷೇತ್ರ: ಡಿ. ಕೆಂಪಣ್ಣ (ಬೆಂಗಳೂರು ಗ್ರಾಮಾಂತರ), ಕೆ. ಜಯಲಕ್ಷ್ಮೀ ಪಾಟೀಲ್ (ಧಾರವಾಡ), ಜಿ.ಡಿ. ತಿಮ್ಮಯ್ಯ (ಚಿತ್ರದುರ್ಗ), ಕೆ.ಆರ್. ಸುಮತಿ (ಮೈಸೂರು), ಹೆಚ್.ವಿ. ಪುಟ್ಟವೀರಪ್ಪ (ಬೆಂಗಳೂರು ದಕ್ಷಿಣ), ಹೊನ್ನ ನಾಯಕ (ಮೈಸೂರು).
ಶಿಲ್ಪಕಲೆ ಕ್ಷೇತ್ರ: ಜಿ.ಬಿ. ಹಂಸಾನಂದ ಆಚಾರ್ಯ (ವಿಜಯನಗರ), ಕಾಡಪ್ಪ ಪರಶುರಾಮ ಗಾಡಿವಡ್ಡರ್ (ಬೆಳಗಾವಿ).
ಚಿತ್ರಕಲೆ ಕ್ಷೇತ್ರ: ಸಿ.ಬಿ. ಸೋಮಶೆಟ್ಟಿ (ಬೀದರ್).
ಕರಕುಶಲ ಕ್ಷೇತ್ರ: ಶಾಂತಾಬಾಯಿ (ಬೀದರ್).
ಕೃಷಿ ಕ್ಷೇತ್ರ: ಹೆಚ್.ಕೆ. ಶ್ರೀಕಂಠು (ಬೆಂಗಳೂರು ದಕ್ಷಿಣ), ಬಿ.ಎ. ಚನ್ನಪ್ಪಗೌಡ (ಬೆಂಗಳೂರು).
ಪರಿಸರ ಕ್ಷೇತ್ರ: ಡಾ. ಸ್ವಾಮಿ ಆನಂದ ಆರ್. (ಮೈಸೂರು).
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ: ಪ್ರೊ. ರಾಜಾಸಾಹೇಬ್ ಎ.ಎಚ್. (ಕಲಬುರಗಿ), ಡಾ. ರಾಜಶೇಖರ ಮೂರ್ತಿ (ಕೆನಡಾ).
ಮಾಧ್ಯಮ ಕ್ಷೇತ್ರ: ಡಿ. ಉಮಾಪತಿ (ಚಿತ್ರದುರ್ಗ), ಎಂ.ಪಿ. ಸುಶೀಲಾ (ಬೆಂಗಳೂರು ನಗರ).
ಮಾಧ್ಯಮ ಮತ್ತು ಛಾಯಾಚಿತ್ರ ಕ್ಷೇತ್ರ: ವಿಶ್ವನಾಥ ಸುವರ್ಣ (ದಕ್ಷಿಣ ಕನ್ನಡ).
ಸಂಕೀರ್ಣ ಕ್ಷೇತ್ರ: ರುಕ್ಮಿಣಿ ಬಾಯಿ (ಬಾಗಲಕೋಟೆ), ಡಿ.ಎಸ್. ಚೌಗಲೆ (ಬೆಳಗಾವಿ), ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ್ (ಬೆಂಗಳೂರು), ರವಿ ಪ್ರವೀಣ್ ನೊರ್ಹೋನಾ (ಬೆಂಗಳೂರು), ಎಂ.ಆರ್. ಜಯಶಂಕರ್ (ಚಿಕ್ಕಮಗಳೂರು), ಪ್ರಸಾದ್ ಬಿಡ್ಡಪ್ಪ (ಕೊಡಗು), ವಾಸಪ್ಪ ಯಲ್ಲಪ್ಪ ಕುಸಗೂರ (ಹಾವೇರಿ).
ವಾಸ್ತುಶಿಲ್ಪ ಕ್ಷೇತ್ರ: ಬಿ.ಪಿ. ಆರಾಧ್ಯ (ಬೆಂಗಳೂರು ದಕ್ಷಿಣ).
ಸಮಾಜಸೇವೆ ಕ್ಷೇತ್ರ: ಶ್ರೀ ಜಗದ್ಗುರು ಡಾ. ಅನ್ನದಾನೇಶ್ವರ ಮಹಾಸ್ವಾಮಿಗಳು (ಗದಗ), ಬಸವರಾಜು (ಮಂಡ್ಯ), ಕಾಗೋಡು ತಿಮ್ಮಪ್ಪ (ಶಿವಮೊಗ್ಗ), ಡಾ. ಎಸ್.ಎಂ. ಎಲಿ (ದಾವಣಗೆರೆ), ಡಾ. ಜಿ.ಎಸ್. ಚಂದ್ರಶೇಖರ್ (ಉತ್ತರ ಕನ್ನಡ), ಡಾ. ಶಿವಾನಂದ ಮಹಾಸ್ವಾಮಿ (ಕಲಬುರಗಿ), ಕೃಷ್ಣೇಗೌಡ ಬಿನ್ ವೆಂಕಟರಾಯಪ್ಪ (ಚಿಕ್ಕಬಳ್ಳಾಪುರ), ಎ.ಸಿ. ಭಂಡಾರಿ (ದಕ್ಷಿಣ ಕನ್ನಡ), ಗುರುಮ್ಮ ಹಂಪಯ್ಯ ಸಂಕಿನಮಠ (ಬಾಗಲಕೋಟೆ).
ವೈದ್ಯಕೀಯ ಕ್ಷೇತ್ರ: ಡಾ. ವಿಜಯೇಂದ್ರ ಹೊನ್ನೂರಪ್ಪ (ಬೆಂಗಳೂರು), ಡಾ.ಸುಜಾತ ಮಲ್ಲಿಕಾರ್ಜುನ ಜಾಲಿ (ಬೆಳಗಾವಿ).
ಆಡಳಿತ ಕ್ಷೇತ್ರ: ತೆರೇಸಾ ಭಟ್ಟಾಚಾರ್ಯ (ಬೆಂಗಳೂರು ನಗರ), ಡಾ. ಕೆ.ಎಸ್. ಸೋಮಶೇಖರ್ (ನವದೆಹಲಿ).
ಎಂಜಿನಿಯರಿಂಗ್ ಕ್ಷೇತ್ರ: ಡಾ. ಕೆ.ಎನ್. ವೆಂಕಟ್ ಕೃಷ್ಣಾರಾವ್ (ಚಿಕ್ಕಬಳ್ಳಾಪುರ).
ಸಾಹಿತ್ಯ ಕ್ಷೇತ್ರ: ಡಾ. ಇಂದಿರಾ ಹೆಗಡೆ (ದಕ್ಷಿಣ ಕನ್ನಡ), ವೀರಹನುಮಾನ್ (ರಾಯಚೂರು), ನಾರಾಯಣಘಟ್ಟೆ (ನಾಹೋಗ) (ತುಮಕೂರು), ಸಿ.ಬಿ. ಮಹೇಶ್ವರಪ್ಪ ಚಟ್ನಳ್ಳಿ (ಚಿಕ್ಕಮಗಳೂರು), ಡಾ. ಕರಿಗೌಡ ಬೀಚನಹಳ್ಳಿ (ತುಮಕೂರು), ಡಾ. ಸಿದ್ಧರಾಮ ಹೊನ್ನೂಲ್ (ಯಾದಗಿರಿ).
ಶಿಕ್ಷಣ ಕ್ಷೇತ್ರ: ಡಾ. ಫಾ. ಜೋಸೆಫ್ ಸಿ.ಸಿ. (ಬೆಂಗಳೂರು ನಗರ), ಶಾಂತಪ್ಪ ಪರಿ ದಶವಂತ (ವಿಜಯಪುರ), ಸಂಗೀತಾ ಎನ್. ಕಟ್ಟಿಮನಿ (ಕಲಬುರಗಿ), ಪ್ರೊ. ಎನ್.ಎಸ್. ರಂಗರಾಜು (ಮೈಸೂರು).
ನ್ಯಾಯಾಂಗ ಕ್ಷೇತ್ರ: ಬಿ.ವಿ. ಆಚಾರ್ಯ (ಉಡುಪಿ).
ಹೊರನಾಡು ಮತ್ತು ಹೊರದೇಶ ಕ್ಷೇತ್ರ: ರಮೇಶ್ ಆರ್. ಗೌಡ (ಅಮೆರಿಕ).
ಕ್ರೀಡಾ ಕ್ಷೇತ್ರ: ಎ.ವಿ. ರವಿ (ಜಿಮ್ ರವಿ) (ಕೋಲಾರ), ಡಾ. ಎ.ಬಿ. ಸುಬ್ಬಯ್ಯ (ಕೊಡಗು), ಎಂ. ಗಿರೀಶ್ (ಬೆಂಗಳೂರು).



