*ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇನ್ಸ್ ಪೆಕ್ಟರ್ ಅರುಣ್ ಬೆಳಗಾವಿ ಮೂಲದವರು*

ಪ್ರಗತಿವಾಹಿನಿ ಸುದ್ದಿ: ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಬೆಂಗಳೂರಿನ ಸಿಸಿಬಿ ಇನ್ಸ್ ಪೆಕ್ಟರ್ ಸೇರಿ ಆರು ಜನರು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಪತನದಲ್ಲಿ ಸಾವನ್ನಪ್ಪಿದ್ದಾರೆ.
ಬದರಿನಾಥ ದಿಂದ ಫಾಟ್ ಕಡೆಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಜೋಶಿಮಠ ಸಮೀಪ ಪತನಗೊಂಡಿದ್ದು, ಕರ್ನಾಟಕದ ಐವರು ಸೇರಿ 6 ಮಂದಿ ಮೃತಪಟ್ಟಿದ್ದಾರೆ. ಹವಾಮಾನ ವೈಪರಿತ್ಯದಿಂದ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸಾಲಂಕೆ, ಶಂಕರ್ ಗೌಡ, ಕೆ.ಸುಧೀರ್, ಹೆಚ್.ಎಸ್.ನಟರಾಜ್, ಪ್ರತಾಪ್ ಮೃತ ದುರ್ದೈವಿಗಳು.
ಇನ್ಸ್ ಪೆಕ್ಟರ್ ಅರುಣ್ ಸಾಲುಂಕೆ ಯಾರು ಎಂಬುದನ್ನು ನೋಡುವುದಾದರೆ ಇವರು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅರಟಾಳ ಗ್ರಾಮದವರು. ಅರುಣ್ ಸಾಲಂಕೆ, 2007ನೇ ಬ್ಯಾಚ್ ನ ಅಧಿಕಾರಿಯಾಗಿದ್ದು, ಬೆಂಗಳೂರಿನ ಸಿಸಿಬಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಆರಂಭಿಕ ದಿನಗಳಲ್ಲಿ ಇವರು ದೆಹಲಿಯಲ್ಲಿ ಗುಪ್ತಚರ ಇಲಾಖೆಯಲ್ಲಿ ಕರ್ನಾಟಕದ ಪರ ಕಾರ್ಯನಿರ್ವಹಿಸಿದ್ದರು. ಬಳಿಕ ರಾಜ್ಯದಲ್ಲಿ ಹಲವೆಡೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.
ಅರುಣ್ ಸಾಲಂಕೆ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು, ಎಲ್ಲರೂ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಾಸಿಸುತ್ತಿದ್ದರು. ಇಂದಿರಾನಗರ, ಬಾಣಸವಾಡಿ, ಸಿಸಿಬಿ ಸೇರಿದಂತೆ ಹಲವು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಸಿಸಿಬಿಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅರುಣ್ ಸಾಲುಂಕೆ ಸಾವಿನ ಸುದ್ದಿ ಕೇಳಿ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.



