*ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿಯ 108ನೇ ಶರಕತ್ ದಿನಾಚರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶದ ರಕ್ಷಣೆಯಲ್ಲಿ ಅಪ್ರತಿಮ ಶೌರ್ಯ ಮತ್ತು ಸಾಹಸ ಮೆರೆದ ಮರಾಠಾ ಲೈಟ್ ಇನ್ಫೆಂಟ್ರಿಯ 108ನೇ ಶರಕತ್ ದಿನವನ್ನು ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ನಲ್ಲಿ ಗೌರವ ಹಾಗೂ ಸಡಗರದಿಂದ ಆಚರಿಸಲಾಯಿತು.
1918ರಲ್ಲಿ ಮೆಸೊಪೊಟೇಮಿಯಾದಲ್ಲಿ ನಡೆದ ಯುದ್ಧ ಕಾರ್ಯಾಚರಣೆಯಲ್ಲಿ ಶತ್ರುಗಳ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ 114 ಮರಾಠಾ ಸೈನಿಕರ ತ್ಯಾಗ ಮತ್ತು ಬಲಿದಾನವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಸೈನಿಕರ ಅಪ್ರತಿಮ ಸಾಹಸಕ್ಕೆ ಮನ್ನಣೆಯಾಗಿ ರೆಜಿಮೆಂಟ್ಗೆ ಪ್ರತಿಷ್ಠಿತ ‘ಶರಕತ್’ ಯುದ್ಧ ಗೌರವ ಲಭಿಸಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಶರಕತ್ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. ರೆಜಿಮೆಂಟಲ್ ಸೆಂಟರ್ನ ಕಮಾಂಡೆಂಟ್ ಬ್ರಿಗೇಡಿಯರ್ ಗಿರೀಶ್ ಉಪಾಧ್ಯಾಯ ಅವರು ವೀರ ಯೋಧರ ಬಲಿದಾನವನ್ನು ಸ್ಮರಿಸಿ ಗೌರವ ಅರ್ಪಿಸಿದರು.
ನಂತರ ನಡೆದ ವಿಶೇಷ ಸೈನಿಕ ಸಮ್ಮೇಳನದಲ್ಲಿ ಸೇವೆಯಲ್ಲಿರುವ ಸೈನಿಕರು, ಅಗ್ನಿವೀರರು ಹಾಗೂ ಮಾಜಿ ಸೈನಿಕರು ಭಾಗವಹಿಸಿ ಪರಸ್ಪರ ಸಂವಾದ ನಡೆಸಿದರು.
ಇದೇ ಸಂದರ್ಭದಲ್ಲಿ ಹಿಂದವಿ ಸ್ವರಾಜ್ಯದ ಅವಧಿಯಲ್ಲಿ ಮರಾಠಾ ಸೇನೆಯ ಸರಸೇನಾಪತಿಯಾಗಿ ಸೇವೆ ಸಲ್ಲಿಸಿದ್ದ ಹಂಬೀರರಾವ್ ಮೊಹಿತೆ ಅವರ ಪುತ್ಥಳಿಯನ್ನು ಬ್ರಿಗೇಡಿಯರ್ ಗಿರೀಶ್ ಉಪಾಧ್ಯಾಯ ಅನಾವರಣಗೊಳಿಸಿದರು.
ಹಂಬೀರರಾವ್ ಮೊಹಿತೆ ಅವರ ವಂಶಸ್ಥ ವಿಕ್ರಮ್ಸಿಂಹ ಮೊಹಿತೆ ಉಪಸ್ಥಿತರಿದ್ದು, ಪುತ್ಥಳಿಯನ್ನು ರೆಜಿಮೆಂಟಲ್ ಸೆಂಟರ್ಗೆ ಕೊಡುಗೆಯಾಗಿ ನೀಡಿದರು. ತಳೇಕರ್ ಡ್ರಿಲ್ ಸ್ಕ್ವೇರ್ನಲ್ಲಿ ನೂತನ ‘ಸಲ್ಯೂಟಿಂಗ್ ಫ್ರೇಮ್’ ಕೂಡ ಉದ್ಘಾಟಿಸಲಾಯಿತು.
ಸಂಜೆ ಆಯೋಜಿಸಿದ್ದ ಬಾರಾಖಾನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಲಿ ಸೈನಿಕರು, ಮಾಜಿ ಸೈನಿಕರು ಮತ್ತು ಅವರ ಕುಟುಂಬದ ಸದಸ್ಯರು ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಸೈನಿಕರ ನಡುವಿನ ಒಗ್ಗಟ್ಟು, ಸೌಹಾರ್ದತೆ ಹಾಗೂ ರೆಜಿಮೆಂಟಿನ ಮೇಲಿನ ಅಭಿಮಾನ ಅನಾವರಣಗೊಂಡಿತು.
ಒಟ್ಟಾರೆ, 108ನೇ ಶರಕತ್ ದಿನಾಚರಣೆಯು ಮರಾಠಾ ಲೈಟ್ ಇನ್ಫೆಂಟ್ರಿಯ ಶೌರ್ಯ, ತ್ಯಾಗ, ನಿಸ್ವಾರ್ಥ ಸೇವೆ ಮತ್ತು ಕರ್ತವ್ಯನಿಷ್ಠೆಯ ಪರಂಪರೆಯನ್ನು ಮತ್ತೊಮ್ಮೆ ನೆನಪಿಸುವುದರ ಜೊತೆಗೆ, ಮುಂದಿನ ಪೀಳಿಗೆಯ ಸೈನಿಕರಿಗೆ ದೇಶಸೇವೆಯ ಪ್ರೇರಣೆಯಾಯಿತು.




