ಪ್ರಗತಿವಾಹಿನಿ ಸುದ್ದಿ, ರಾಯಚೂರು :
ಬಿಜೆಪಿ ನಾಯಕರಿಂದ ನಾನಾಗಲಿ, ನಮ್ಮ ಕುಟುಂಬವಾಗಲಿ ಪಾಠ ಕಲಿಯಬೇಕಾದ ಅನಿವಾರ್ಯತೆ ಇಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಗ್ರಾಮವಾಸ್ತವ್ಯಕ್ಕೆಂದು ಆಗಮಿಸಿದ ಅವರು ರಾಯಚೂರಿನ ಸರ್ಕೀಟ್ ಹೌಸ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಾನು ಕೇವಲ 2-3 ಜಿಲ್ಲೆಗೆ ಹಣ ನೀಡುತ್ತಿದ್ದೇನೆ ಎಂದು ಆರೋಪಿಸುತ್ತಾರೆ. ಯಡಿಯೂರಪ್ಪ ಪ್ರತಿನಿಧಿಸುವ ಶಿಕಾರಿಪುರಕ್ಕೂ 500 ಕೋಟಿ ರೂ. ಹಣ ನೀಡಿದ್ದೇನೆ. ಅವರು ಮುಖ್ಯಮಂತ್ರಿಯಿದ್ದಾಗ ಹಾಸನಕ್ಕೆ ಎಷ್ಟು ಕೊಟ್ಟಿದ್ದಾರೆ, ಮಂಡ್ಯಕ್ಕೆ ಎಷ್ಟು ಕೊಟ್ಟಿದ್ದಾರೆ ಹೇಳಲಿ ಎಂದು ಸವಾಲೆಸೆದರು.
ನನ್ನದು ಕೇವಲ ಗ್ರಾಮವಾಸ್ತವ್ಯ ಅಲ್ಲ. ಇದರ ನೆಪದಲ್ಲಿ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿಪಡಿಸುವ ಪರಿಕಲ್ಪನೆ ನನ್ನದು. ಈ ಭಾಗಕ್ಕೆ ಸಾಕಷ್ಟು ಹಣವನ್ನು ಕಟ್ಟಿದ್ದೇನೆ. ಅವಶ್ಯವಿದ್ದರೆ ಇನ್ನಷ್ಟು ಕೊಡಲು ಸಿದ್ದನಿದ್ದೇನೆ ಎಂದ ಅವರು, ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕ್ ನಡೆಸುತ್ತಿರುವ ಪಾದಯಾತ್ರೆ ಕೇವಲ ಗಿಮಿಕ್ ಎಂದು ಟೀಕಿಸಿದರು.
ತಮ್ಮ ಗ್ರಾಮ ವಾಸ್ತವ್ಯವನ್ನು ಟೀಕಿಸಿ ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ಶಾಸಕ ಶಿವನಗೌಡ ನಾಯಕ್ ವಿರುದ್ಧ ಹರಿಹಾಯ್ದ ಅವರು, ಶಿವನಗೌಡ ಅವರ ಡ್ರಾಮಾ ಬಹಳ ದಿನ ನಡೆಯುವುದಿಲ್ಲ. ನಾವು ಅವರಿಂದ ಪಾಠ ಕಲಿಯಬೇಕಿಲ್ಲ. ಈಗ ಪಾದಯಾತ್ರೆ ಮಾಡುವವರು ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಏಕೆ ಸುಮ್ಮನಿದ್ದರು ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಯಚೂರಿನ ಮಾನ್ವಿ ತಾಲ್ಲೂಕಿನ ಕರೇಗುಡ್ಡದಲ್ಲಿ ಗ್ರಾಮವಾಸ್ತವ್ಯ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯವನ್ನು ವಿರೋಧಿಸಲು ಶಿವನಗೌಡ ಅವರು ಕರೇಗುಡ್ಡಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ.
ರಾಯಚೂರಿನ ಕರೇಗುಡ್ಡದಲ್ಲಿ ಸಿಎಂ ಗ್ರಾಮವಾಸ್ತವ್ಯ ಆರಂಭಗೊಂಡಿದ್ದು, ಜನರ ಅಹವಾಲು ಆಲಿಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ