Latest

ಸೋಮವಾರ ಸಂಜೆ ಸಿಎಂ ಮಹತ್ವದ ಸಭೆ: ಶಾಲೆಗಳಿಗೆ ರಜೆ ನಿರ್ಧಾರವಾಗುತ್ತಾ?

ಮಕ್ಕಳನ್ನು ಶಾಲೆಗೆ ಕಳಿಸಿದರೆ ಕೊರೋನಾ ಚಿಂತೆ, ಕಳಿಸದಿದ್ದರೆ ವಿದ್ಯಾಭ್ಯಾಸದ ಚಿಂತೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯಾದ್ಯಂತ ಶಾಲಾ ಮಕ್ಕಳಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೋಷಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಮಕ್ಕಳನ್ನು ಶಾಲೆಗೆ ಕಳಿಸಿದರೆ ಕೊರೋನಾ ಚಿಂತೆ, ಕಳಿಸದಿದ್ದರೆ ವಿದ್ಯಾಭ್ಯಾಸದ ಚಿಂತೆ.

ಕೊರೆನಾ 3ನೇ ಅಲೆ ನಿರೀಕ್ಷೆಯಂತೆ ಮಕ್ಕಳ ಮೇಲೆ ವಕ್ರದೃಷ್ಟಿ ಬೀರಿದೆ. ಅನೇಕ ಶಾಲೆ, ಕಾಲೇಜುಗಳಲ್ಲಿ ಕೊರೆನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಸೀಲ್ಡೌನ್ ಮಾಡಲಾಗುತ್ತಿದೆ. ಅನೇಕ ಕಡೆ ಶಿಕ್ಷಕರಿಗೂ ಕೊರೋನಾ ವೇಗವಾಗ ಹರಡುತ್ತಿದೆ. ಯಾವ ಶಾಲೆಯಲ್ಲಿ ಕೊರೆನಾ ಪ್ರಮಾಣ ಶೇ.10ಕ್ಕಿಂತ ಹೆಚ್ಚಿಗಿರುತ್ತೋ ಅಂತಹ ಶಾಲೆಗಳನ್ನು ಮಾತ್ರ ಮುಚ್ಚುವಂತೆ ರಾಜ್ಯ ಸರಕಾರ ಸೂಚಿಸಿದೆ.

ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರು, ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಶಾಲೆಗೆ ಕಳಿಸಿದರೆ ಎಲ್ಲಿ ಕೊರೋನಾ ಅಂಟಿಕೊಂಡರೆ ಎನ್ನುವ ಚಿಂತೆ.  ಕಳಿಸದಿದ್ದರೆ ಮಕ್ಕಳ ಭವಿಷ್ಯವೇನು ಎನ್ನುವ ಚಿಂತೆ ಕಾಡುತ್ತಿದೆ.

ಕೊರೋನಾ ಬಂದ ನಂತರ ಶಾಲೆ ಮುಚ್ಚಿದರೆ ಏನೂ ಪ್ರಯೋಜನವಿಲ್ಲ. ಅಷ್ಟರಲ್ಲಿ ಇಡೀ ಶಾಲೆಗೆ ಹರಡಿಬಿಡಬಹುದು. ಮುಂಜಾಗ್ರತಾ ಕ್ರಮವಾಗಿ ಚೈನ್ ಕಟ್ ಮಾಡಲು ಶಾಲೆಗಳಿಗೆ ಒಂದೋ, ಎರಡೋ ವಾರ ರಜೆ ನೀಡಿದರೆ ಅಷ್ಟರಮಟ್ಟಿಗೆ ಆತಂಕ ನಿವಾರಣೆಯಾಗಲಿದೆ ಎನ್ನುವುದು ಪಾಲಕರ ಅಭಿಪ್ರಾಯ. ಶಿಕ್ಷಣಕ್ಕಿಂತ ಮಕ್ಕಳ ಜೀವ ಮುಖ್ಯ. ಕೊರೋನಾ ಅಂಟಿಸಿಕೊಂಡರೆ ಮಕ್ಕಳ ಫೋಷಣೆ ಹೇಗೆ ಎನ್ನುವ ಆತಂಕ ಪಾಲಕರಲ್ಲಿದೆ. ಚಿಕ್ಕ ಚಿಕ್ಕ ಮಕ್ಕಳಿಗೆ ಕೊರೋನಾ ಬಂದರೆ ಅವರನ್ನು ನೋಡಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಲಿದೆ.

ಬೆಳಗಾವಿ ಜಿಲ್ಲೆಯಲ್ಲೇ 2 ಕಾಲೇಜು, 3 ಶಾಲೆಗಳು ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಮಕ್ಕಳಿಗೆ ಹಾಗೂ ಸುಮಾರು 15 ಶಿಕ್ಷಕರಿಗೆ ಕೊರೋನಾ ಬಂದಿದೆ. ಈ ಶಾಲೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಆದರೆ ಮಕ್ಕಳನ್ನು ಉಪಚರಿಸುವ ಪಾಲಕರ ಸಂಕಷ್ಟ ಯಾರಿಗೂ ಬೇಡ.

ರಾಜ್ಯಾದ್ಯಂತ ಕೊರೋನಾ ಹೆಚ್ಚಿ ಶಾಲೆಗಳಿಗೆ ರಜೆ ನೀಡಬೇಕಾಗಬಹುದು ಎನ್ನುವ ಕಾರಣದಿಂದ ಶಿಕ್ಷಣ ಇಲಾಖೆ ಈಗಾಗಲೆ ವಿದ್ಯಾಗಮ ಯೋಜನೆ ಜಾರಿಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಪ್ರತಿಯೊಂದು ಶಾಲೆಗೂ ಡಿಡಿಪಿಐ ಹಾಗೂ ಬಿಇಒಗಳ ಮೂಲಕ ಸುತ್ತೋಲೆ ರವಾನಿಸಲಾಗಿದೆ. ವಿದ್ಯಾಗಮ ಯೋಜನೆ ಜಾರಿಗೊಳಿಸುವ ವಿವರವಾದ ಮಾಹಿತಿಯನ್ನೂ ಅದರಲ್ಲಿ ನೀಡಲಾಗಿದೆ.

ಶಾಲೆಗಳಿಗೆ ರಜೆ ನೀಡುವುದು ಅನಿವಾರ್ಯ ಎನ್ನುವ ನಿರ್ಧಾರಕ್ಕೆ ಶಿಕ್ಷಣ ಇಲಾಖೆ ಬಂದಿತ್ತು. ಒಂದು ಹಂತದಲ್ಲಿ ರಜೆಯ ನಿರ್ಧಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿತ್ತು. ನಂತರದಲ್ಲಿ ಮಾರ್ಪಾಡು ಮಾಡಿ, ಶೇ.10ಕ್ಕಿಂತ ಹೆಚ್ಚು ಕೊರೋನಾ ಸೋಂಕಿತರು ಕಂಡುಬಂದಲ್ಲಿ ಮಾತ್ರ ರಜೆ ನೀಡಬೇಕೆನ್ನುವ ನಿರ್ಧಾರಕ್ಕೆ ಬರಲಾಗಿದೆ. ಆದರೆ ಇದಕ್ಕೆ ಪಾಲಕರಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಸಂಜೆ 4 ಗಂಟೆಗೆ ತಜ್ಞರು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದಾರೆ. ಸ್ವತಃ ಮುಖ್ಯಮಂತ್ರಿಗಳಿಗೇ ಕೊರೋನಾ ಬಂದಿರುವುದರಿಂದ ವರ್ಚ್ಯುವಲ್ ಮೀಟಿಂಗ್ ನಡೆಸಲಿದ್ದಾರೆ.

ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ಕೊರೋನಾ ಹೆಚ್ಚುತ್ತಿರುವ ಕುರಿತು ಸಭೆಯಲ್ಲಿ ವಿಶೇಷ ಚರ್ಚೆ ನಡೆಯಲಿದೆ. ಶಾಲೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ಕುರಿತೂ ಚಿಂತನೆ ನಡೆಯುವ ಸಾಧ್ಯತೆ ಇದೆ. ಮಕ್ಕಳ ಜೀವ ಮತ್ತು ಶಿಕ್ಷಣದ ಭವಿಷ್ಯದ ದೃಷ್ಟಿಯಿಂದ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಬೇಕಿದೆ.

ರಾಜ್ಯಾದ್ಯಂತ ಶಾಲೆಗಳು ಬಂದ್ ಸಾಧ್ಯತೆ : ಶಿಕ್ಷಣ ಇಲಾಖೆಯಿಂದ ಆಗಲೇ ಸಿದ್ಧತೆ; ಎಲ್ಲ ಜಿಲ್ಲೆಗಳಿಗೆ ಸುತ್ತೋಲೆ ರವಾನೆ

ಬೆಳಗಾವಿ ಜಿಲ್ಲೆಯಲ್ಲಿ ಸೋಮವಾರ ಶಾಲೆಗಳು ಆರಂಭವಾಗುತ್ತಾ? – ಡಿಸಿ, ಡಿಡಿಪಿಐ ಏನಂದ್ರು? – ಈ ಸುದ್ದಿ ಓದಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button