ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರು ಇಂದು ನಟ ವಿಜಯ ರಾಘವೇಂದ್ರ ಅಪರ ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
“ಬಹುಕಾಲ ಬಾಳಿ ಬದುಕಬೇಕಾಗಿದ್ದ ಸ್ಪಂದನಾ ಅವರದು ಸುಂದರ ಕುಟುಂಬ. ಥೈಲ್ಯಾಂಡ್ ದೇಶಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಸ್ಪಂದನಾ ಅವರು ಮೃತಪಟ್ಟಿರುವುದು ನೋವಿನ ಸಂಗತಿ. ಬಿ.ಕೆ.ಶಿವರಾಂ ಹಾಗೂ ವಿಜಯ ರಾಘವೇಂದ್ರ ಕುಟುಂಬಕ್ಕೆ ಸ್ಪಂದನಾ ಅವರ ಸಾವಿನಿಂದ ತುಂಬಲಾರದ ನಷ್ಟವುಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಿದ್ದರಾಮಯ್ಯ ಹೇಳಿದರು.
ಭಗವಂತನನ್ನು ಪ್ರಶ್ನೆ ಮಾಡಲಾಗದು, ಆದರೆ ಸ್ಪಂದನಾ ಸಾವು ಘೋರ ಅನ್ಯಾಯ:
“ಏಕೆ ಈ ಅನ್ಯಾಯ ಎಂದು ಭಗವಂತನನ್ನು ಪ್ರಶ್ನೆ ಮಾಡಲು ಆಗುವುದಿಲ್ಲ. ಆದರೂ ಸ್ಪಂದನಾ ಅವರ ಸಾವು ಘೋರ ಅನ್ಯಾಯ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸ್ಪಂದನಾ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಅವರು ಮಾಧ್ಯಮದವರ ಜತೆ ಮಾನಾಡಿ, ವಾರದ ಹಿಂdಷ್ಟೇ ವಿಜಯ ರಾಘವೇಂದ್ರ ದಂಪತಿ ನನ್ನನ್ನು ಭೇಟಿಯಾಗಿದ್ದರು. ರಾಜ್ಯ ಪ್ರಶಸ್ತಿ ಬಂದ ಕಲಾವಿದರಿಗೆ ನೀಡುವ ಸೈಟ್ ಕುರಿತು ಮನವಿ ಸಲ್ಲಿಸಿದ್ದರು.
ಆದರೆ ಇಷ್ಟು ಬೇಗ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಸ್ಪಂದನಾ ಅವರು ಮೃತಪಟ್ಟಿರುವುದು ಆಘಾತಕಾರಿ ಮತ್ತು ನೋವಿನ ಸಂಗತಿ.ಸ್ಪಂದನಾ ಅವರ ಹಠಾತ್ ಸಾವಿನ ಆಘಾತ ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ. ಕುಟುಂಬದವರ ದುಃಖದಲ್ಲಿ ನಾವು ಪಾಲುದಾರರು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ