*ತಾಲೂಕು, ಜಿಲ್ಲಾ ಪಂಚಾಯತ ಚುನಾವಣೆ ನಡೆಸುವ ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ*
ಪ್ರಗತಿವಾಹಿನಿ ಸುದ್ದಿ: ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಆದಷ್ಟು ಬೇಗ ನಡೆಸಲು ಸರ್ಕಾರ ಸಿದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಕ್ಷೇತ್ರ ಪುನರ್ವಿಗಂಡಣೆಗೆ ಜನವರಿವರೆಗೆ ಗಡುವು ಇದ್ದು, ಈ ಬಗ್ಗೆ ಅಡ್ವೋಕೇಟ್ ಜನರಲ್ ಜೊತೆ ಚರ್ಚೆ ಮಾಡಿ ಅವರು ಕಾನೂನು ಪ್ರಕಾರ ಏನು ಮಾಡಬೇಕೆಂದು ಹೇಳುತ್ತಾರೋ ಹಾಗೆ ಮಾಡುತ್ತೇವೆ. ಪುನರ್ ವಿಂಗಡಣೆಯಾದ ಮೇಲೆ ಮೀಸಲಾತಿ ಮಾಡಲೇಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ಅವಧಿ ಮುಗಿದು ಬರೋಬ್ಬರಿ ಮೂರು ವರ್ಷ ಆಗಿದೆ. 2021ರ ಏಪ್ರಿಲ್‌ನಲ್ಲಿಯೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಯಬೇಕಿತ್ತು. ಆದರೆ, ಅವಧಿ ಮುಗಿದಿದ್ದರೂ ಹೊಸ ಚುನಾವಣೆ ಇನ್ನೂ ಸಹ ನಡೆದಿಲ್ಲ. ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ಹೈಕೋರ್ಟ್ನಲ್ಲಿದೆ. ಹೀಗಾಗಿ ಚುನಾವಣೆಗೆ ವಿಳಂಬವಾಗುತ್ತಿದೆ.
ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ ಸಂಬಂಧ ಪ್ರಕರಣಗಳು ಕೋರ್ಟ್ನಲ್ಲಿ ಇರುವುದರಿಂದ ಇನ್ನಷ್ಟು ತಿಂಗಳು ವಿಳಂಬವಾಗುವ ಸಾಧ್ಯತೆಗಳು ಇವೆ. ಒಂದು ವೇಳೆ ಸರ್ಕಾರ ಈ ಬಗ್ಗೆ ಮುತುವರ್ಜಿ ವಹಿಸಿ ಕೋರ್ಟ್ ಕಾನೂನು ಪ್ರಕ್ರಿಯೆ ಮುಗಿಸುವುದರ ಜೊತೆಗೆ ಮೀಸಲಾತಿ ನಿಗದಿಪಡಿಸಿದರೆ ಮುಂದಿನ ಒಂದೆರೆಡು ತಿಂಗಳಲ್ಲೇ ಚುನಾವಣೆ ನಡೆಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ