*ನುಡಿದಂತೆ ನಡೆಯುವುದು ನಮ್ಮ ಸಂಸ್ಕಾರ; ಜನಪರ ಯೋಜನೆಗಳನ್ನು ಗೇಲಿ ಮಾಡುವುದು ಬಿಜೆಪಿ ಸಂಸ್ಕಾರ; ವಿಪಕ್ಷಗಳಿಗೆ ಸಿಎಂ ಟಾಂಗ್*
ಕನ್ನಡ ನಾಡಿನ 41 ಲಕ್ಷದ 86 ಸಾವಿರ ಮಹಿಳೆಯರು ಶೇ95 ರಷ್ಟು ಬಸ್ ಗಳಲ್ಲಿ ಶಕ್ತಿ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ
ಬೆಂಗಳೂರು, ಜೂನ್ :10 ಬಡವರ, ಮಧ್ಯಮ ವರ್ಗದವರ ಜೇಬಿಗೆ ಹಣ ಹಾಕಿದರೆ ಆರ್ಥಿಕತೆ ವೇಗ ಪಡೆದುಕೊಳ್ಳುತ್ತದೆ. ಶ್ರೀಮಂತರ ಜೇಬಿಗೆ ಹಣ ಹಾಕಿದರೆ ಆರ್ಥಿಕತೆಗೆ ಅಷ್ಟು ಲಾಭ ಆಗುವುದಿಲ್ಲ. ಆದ್ದರಿಂದ ನಾವು ಬಡವರು, ಮಧ್ಯಮ ವರ್ಗದವರ ಜೇಬಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಹಣ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯ ಸರ್ಕಾರದ ಮಹತ್ವದ ‘ಶಕ್ತಿ’ ಯೋಜನೆಗೆ ಚಾಲನೆ ನೀಡಿದ ಬಳಿಕ ವಿಧಾನಸೌಧದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬರೀ ಶ್ರೀಮಂತರ ಹಿತ ಕಾಯುವ ಬಿಜೆಪಿ ಯವರಿಗೆ ನಮ್ಮ ಕಾಳಜಿ ಸಹಿಸಲು ಆಗುತ್ತಿಲ್ಲ. ನಮ್ಮ ಗುರಿ ಜನರ ಸಂಕಷ್ಟ ತಗ್ಗಿಸುವುದು. ಪ್ರಮಾಣವಚನ ಸ್ವೀಕರಿಸಿ ಕೇವಲ 20 ದಿನಗಳಲ್ಲಿ ಮೊದಲ ಗ್ಯಾರಂಟಿ ಜಾರಿಯಾಗಿ ನಾಡಿನ ಸಮಸ್ತ ಮಹಿಳೆಯರು ಇದರ ಅನುಕೂಲ ಪಡೆಯಲು ಶುರು ಮಾಡಿದ್ದಾರೆ. ಇಡಿ ರಾಜ್ಯದಲ್ಲಿ ಏಕ ಕಾಲಕ್ಕೆ ಶಕ್ತಿ ಯೋಜನೆ ಜಾರಿ ಆಗಿದೆ.
ಈ 20 ದಿನಗಳಲ್ಲಿ ಬಿಜೆಪಿ ಪರಿವಾರ ಸುಳ್ಳಿನ ಮಹಾಪೂರವನ್ನೇ ಹರಿಸಿತು. ನಾವು ವಿಚಲಿತರಾಗಲಿಲ್ಲ. ನಮ್ಮ ಗುರಿ “ನುಡಿದಂತೆ ನಡೆಯುವುದಾಗಿತ್ತು”. ಅದನ್ನು ಮಾಡಿದ್ದೇವೆ. ಮಹಿಳೆಯರನ್ನು ಸಶಕ್ತಗೊಳಿಸುವ ಉದ್ದೇಶದಿಂದ ಈ ಯೋಜನೆಗೆ “ಶಕ್ತಿ” ಎಂದು ಹೆಸರಿಡಲಾಗಿದೆ. ದೇಶದ ಅರ್ಧದಷ್ಟಿರುವ ಮಹಿಳೆಯರು ಅಭಿವೃದ್ಧಿಯಲ್ಲಿ ಪಾಲುದಾರರಾಗದೆ ದೇಶದ ಪ್ರಗತಿ ಸಾಧ್ಯವಿಲ್ಲ. ಭಾರತದಲ್ಲಿ ಮಹಿಳಾ ಪಾಲ್ಗೊಳ್ಳುವಿಕೆ ಕಡಿಮೆ ಆಗಿದೆ. ಈ ಪ್ರಮಾಣ ಹೆಚ್ಚಾಗಬೇಕು ಎಂದರು.
ಬಡವರು, ಮಧ್ಯಮ ವರ್ಗದವರಿಗೆ ಸರ್ಕಾರ ಅನುಕೂಲ ಮಾಡಿದರೆ ಬಿಜೆಪಿಯವರು ಸುಳ್ಳುಗಳ ಮೂಲಕ ಗುಲ್ಲೆಬ್ಬಿಸಿ ಗೊಂದಲ ಸೃಷ್ಟಿಸುತ್ತಾರೆ. ಮಾಧ್ಯಮದವರು ಬಿಜೆಪಿಯವರ ಜತೆ ಸೇರಿ ಗೊಂದಲ ಹೆಚ್ಚಿಸಬಾರದು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಶಿಫಾರಸ್ಸಿನಂತೆ ಮೊನ್ನೆ ವಿದ್ಯುತ್ ದರ ಹೆಚ್ಚಳವಾಗಿದೆ. ಆದರೆ, ನಾವೇ ವಿದ್ಯುತ್ ದರ ಹೆಚ್ಚಿಸಿದೆವು ಎನ್ನುವ ಪರಮ ಸುಳ್ಳನ್ನು ಬಿಜೆಪಿ ಪರಿವಾರ ಹರಡಿಸುತ್ತಿದೆ ಎಂದು ಮುಖ್ಯಮಂತ್ರಿಗಳು ಟೀಕಿಸಿದರು.
ಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ.ಜಾರ್ಜ್, ವಿಧಾನ ಪರಿಷತ್ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಪರಿಷತ್ ಸದಸ್ಯ ನಾಗರಾಜ ಯಾದವ್, ಕಾಂಗ್ರೆಸ್ ಮುಖಂಡರಾದ ರೇವಣ್ಣ, ಯು.ಬಿ.ವೆಂಕಟೇಶ್ ಸೇರಿ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ