ಇಂದು ಸಂಜೆ ಬೆಳಗಾವಿಗೆ ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಉತ್ತರ ಕರ್ನಾಟಕ ಪ್ರವಾಹದಲ್ಲಿ ಮುಳುಗಿಹೋಗಿರುವ ಹಿನ್ನೆಲೆಯಲ್ಲಿ ಸರಕಾರದ ವಿರುದ್ದ ತೀವ್ರವಾದ ಟೀಕೆಗಳು ಕೇಳಿ ಬರುತ್ತಿರುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಢೀರ್ ಬೆಳಗಾವಿ ಪ್ರವಾಸ ಹಮ್ಮಿಕೊಂಡಿದ್ದಾರೆ.ಇಂದು ಸಂಜೆ ಬೆಂಗಳೂರಿನಿಂದ ಹೊರಟು ರಾತ್ರಿ 7 ಗಂಟೆಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಆಗಮಿಸುವರು. ರಾತ್ರಿ ಬೆಳಗಾವಿ ನಗರದಲ್ಲಿನ ಪ್ರವಾಹ ಪರಿಸ್ಥಿತಿ ಅವಲೋಕಿಸಿ, ಪರಿಹಾರ ಕಾಮಗಾರಿಗಳ ವಿವರ ಪಡೆಯಲಿದ್ದಾರೆ.ರಾತ್ರಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಲಿರುವ ಯಡಿಯೂರಪ್ಪ, ನಾಳೆ ಇಡೀದಿನ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಪ್ರವಾಹ ಪರಿಸ್ಥಿತಿಗಳನ್ನು ಪರಿಶೀಲಿಸಲಿದ್ದಾರೆ. ಹವಾಮಾನ ಪರಿಸ್ಥಿತಿ ನೋಡಿಕೊಂಡು ಸಾಧ್ಯವಾದರೆ ವೈಮಾನಿಕ ಸಮೀಕ್ಷೆಯನ್ನೂ ಅವರು ಕೈಗೊಳ್ಳಲಿದ್ದಾರೆ.ಉತ್ತರ ಕರ್ನಾಟಕದಲ್ಲಿ ತೀವ್ರವಾದ ಪ್ರವಾಹ ಪರಿಸ್ಥಿತಿ ಇದ್ದರೂ ಸರಕಾರ ಕ್ರಮ ಕೈಗೊಳ್ಳದಿರುವ ಕುರಿತು ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಮುಳುಗಿದ ಉತ್ತರ ಕರ್ನಾಟಕ, ಮಲಗಿದ ಯಡಿಯೂರಪ್ಪ ಸರಕಾರ ಎನ್ನುವ ಸಂದೇಶಗಳು ಸಾಮಾಜಿಕ ಜಾಲತಾಣದ ತುಂಬ ಓಡಾಡುತ್ತಿವೆ.ಈ ಮಧ್ಯೆ ಬೆಳಗಾವಿ ಸೇರಿದಂತೆ ಉತ್ತರಕರ್ನಾಟಕದಾದ್ಯಂತ ಮಳೆ ಮುಂದುವರಿದಿದ್ದು, ಪ್ರವಾಹ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಿದೆ.ಬೆಳಗಾವಿ ನಗರ ಜಲಪ್ರಳಯವಾದಂತೆ ಘೋಚರಿಸುತ್ತಿದೆ. ಬೆಳಗಾವಿಯ ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಅಭಯ ಪಾಟೀಲ ಮತ್ತು ಅನಿಲ ಬೆನಕೆ ನಿರಂತರವಾಗಿ ಪ್ರವಾಹ ಸಂತ್ರಸ್ತರ ಜೊತೆಗಿದ್ದು, ಪರಿಹಾರಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ