ಪ್ರಗತಿವಾಹಿನಿ ಸುದ್ದಿ, ಗದಗ: ಎಲ್ಲಾದರೂ ಹೊರಟಾಗ ಬೆಕ್ಕು ಅಡ್ಡ ಬಂತೆಂದರೆ ಕೆಲಸವೇ ಕೆಟ್ಟುಹೋಯಿತು ಎನ್ನುವ ರೀತಿಯಲ್ಲಿ ಎರಡು ಹೆಜ್ಜೆ ಹಿಂದೆ ಬಂದು ಮುಂದೆ ಹೋಗುವವರಿಗೆ ಮನೆಯೊಂದರಲ್ಲಿ ಸಾಕಿದ್ದ ಬೆಕ್ಕುಗಳು ತಮ್ಮ ಪ್ರಾಮುಖ್ಯತೆ ಏನು? ಎಂಬುದನ್ನು ತೋರಿಸಿಕೊಟ್ಟಿವೆ.
ಮನೆಯೊಳಗೆ ಹೊಕ್ಕ ನಾಗರಹಾವಿನ ಸುಳಿವು ನೀಡುವ ಮೂಲಕ ಮನೆಯವರನ್ನು ಎಚ್ಚರಿಸಿ ಜೀವ ಉಳಿಸಿದ ಮಾರ್ಜಾಲಗಳಿಗೀಗ ಕೃತಜ್ಞತಾ ಭಾವದ ಸುರಿಮಳೆಯಾಗುತ್ತಿದೆ.
ಈ ಘಟನೆ ನಡೆದಿದ್ದು ಗದಗ ಜಿಲ್ಲೆಯ ನರಗುಂದ ಪಟ್ಟಣದ ಅಂಬೇಡ್ಕರ್ ನಗರದಲ್ಲಿ. ಲಕ್ಷ್ಮಣ ಚಲವಾದಿ ಎಂಬುವವರ ಮನೆಯಲ್ಲಿ ಬೆಕ್ಕುಗಳನ್ನು ಸಾಕಲಾಗಿದೆ. ಮನೆಯವರೆಲ್ಲ ಕೆಲಸಕ್ಕೆ ಹೊರ ಹೋದಾಗ ಅಡುಗೆ ಕೋಣೆಯಲ್ಲಿ ನಾಗರ ಹಾವೊಂದು ನುಸುಳಿ ಬಂದಿದೆ. ಇದನ್ನು ಕಂಡ ಬೆಕ್ಕುಗಳು ಆತಂಕಿತವಾಗಿ ವರ್ತನೆ ಮಾಡಿವೆ.
ಮನೆಯ ಜನ ಮರಳಿ ಬಂದಾಗ ಈ ಬೆಕ್ಕುಗಳ ವರ್ತನೆ ತೀರ ಅಸಹಜವಾಗಿತ್ತು. ಅಡುಗೆ ಮನೆಯಲ್ಲಿ ಅಲ್ಲಲ್ಲಿ ದೂರದಿಂದಲೇ ಮೂಸುವುದು, ಬೆಚ್ಚಿಬಿದ್ದು ಹಿಂದಕ್ಕೆ ಸರಿಯುವುದು ಇವೆಲ್ಲ ಕಂಡ ಮನೆಯ ಜನ ಸಂದೇಹಪಟ್ಟಿದ್ದಾರೆ. ಮನೆಯ ಅಡುಗೆ ಕೋಣೆ ಜಾಲಾಡಿದ್ದಾರೆ.
ಈ ವೇಳೆಗೆ ನಾಗರಹಾವು ಬಚ್ಚಿಟ್ಟುಕೊಂಡು ಕುಳಿತಿದ್ದು ಗಮನಕ್ಕೆ ಬಂದಿದೆ. ತಕ್ಷಣ ಉರಗ ಸ್ನೇಹಿ ಸಿ.ಆರ್. ಸುರೇಬಾನ ಅವರನ್ನು ಕರೆಸಿದ್ದಾರೆ. ಕೂಡಲೆ ಸ್ಥಳಕ್ಕೆ ಧಾವಿಸಿದ ಸುರೇಬಾನ ಅವರು ನಾಗರಹಾವನ್ನು ಹಿಡಿದು ದೊಡ್ಡ ನೀರಿನ ಬಾಟಲಿಯಲ್ಲಿ ಬಂಧಿಸಿ ಬೇರೆಡೆ ಬಿಟ್ಟಿದ್ದಾರೆ. ಇದರೊಂದಿಗೆ ಮನೆಯ ಜನ ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.
“ಬೆಕ್ಕುಗಳು ಮನೆಯಲ್ಲಿ ಇರಲಿಲ್ಲ ಎಂದರೆ ಹಾವಿನ ಪ್ರವೇಶವಾದದ್ದು ಗೊತ್ತೇ ಆಗುತ್ತಿರಲಿಲ್ಲ. ಬೆಕ್ಕುಗಳೇ ನಮ್ಮ ಜೀವ ಉಳಿಸಿವೆ” ಎಂದು ಮನೆಯ ಜನ ಮಾರ್ಜಾಲಗಳ ಪ್ರಶಂಸೆ ಮಾಡುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ