
ಪ್ರಗತಿವಾಹಿನಿ ಸುದ್ದಿ: ನಿಶ್ಚಿತಾರ್ಥದ ಕಾರ್ಯಕ್ರಮಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಟೆಂಪೋ ಮತ್ತು ವೇಗವಾಗಿ ಬಂದ ಕಂಟೈನರ್ ಲಾರಿಯ ನಡುವೆ ಈ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿ 13 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಪಾಲ್ವರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳು ರಸ್ತೆಯ ಮೇಲೆ ಉರುಳಿ ಬಿದ್ದಿದ್ದು, ಹಲವಾರು ಪ್ರಯಾಣಿಕರು ವಾಹನಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು.
ಈ ವೇಳೆ ಗಂಭೀರವಾಗಿ ಗಾಯಗೊಂಡಿರುವ 20 ಕ್ಕೂ ಹೆಚ್ಚು ಜನರನ್ನು ತಕ್ಷಣವೇ ಹತ್ತಿರದ ಕಾಸಾ ಉಪ-ಜಿಲ್ಲಾ ಆಸ್ಪತ್ರೆ ಮತ್ತು ಇತರೆ ವೈದ್ಯಕೀಯ ಕೇಂದ್ರಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ
ಈ ಅತ್ಯಂತ ದುರದೃಷ್ಟಕರ ಘಟನೆಗೆ ತೀವ್ರ ಕಳವಳ ಮತ್ತು ಸಂತಾಪ ವ್ಯಕ್ತಪಡಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿಗಳ ಆರ್ಥಿಕ ಪರಿಹಾರವನ್ನು ಘೋಷಿಸಿದ್ದಾರೆ. ಇದರೊಂದಿಗೆ ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ನೆರವು ನೀಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
