
ಕುಡಿಯುವ ನೀರು, ದಿನಬಳಕೆಗೆ ನೀರಿಲ್ಲದೇ ನಿವಾಸಿಗಳ ಪರದಾಟ
ಪ್ರಗತಿವಾಹಿನಿ ಸುದ್ದಿ: ತೈಲ ಬಿಕ್ಕಟ್ಟಿನ ನಡುವೆಯೇ ಕಡಲ ನಗರಿ ಮಂಗಳೂರಿನಲ್ಲಿ ಬಾವಿಗಳಲ್ಲಿ ಡಿಸೇಲ್ ಉಕ್ಕಿ ಹರಿಯುತ್ತಿರುವ ಘಟನೆ ನಡೆದುದೆ.
ಮಂಗಳೂರು ನಗರದ ಕಾವೂರು ಪ್ರದೇಶದ ಮೂರು ಮನೆಗಳ ಬಾವಿಗಳಲ್ಲಿ ಏಕಾಏಕಿ ಡೀಸೆಲ್ ಉಕ್ಕಿ ಬರುತ್ತಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಬಾವಿಯ ನೀರಿನಲ್ಲಿ ಬೇರೆ ಯಾವುದೇ ಕಲ್ಮಶಗಳಲ್ಲ, ಬರೋಬ್ಬರಿ ಶೇ 28 ರಷ್ಟು ಶುದ್ಧ ಡೀಸೆಲ್ ಅಂಶ ಇರುವುದು ಪ್ರಯೋಗಾಲಯದ ತಪಾಸಣೆಯಲ್ಲಿ ದೃಢಪಟ್ಟಿದ್ದು, ಈ ವಿಚಿತ್ರ ವಿದ್ಯಮಾನ ಇಡೀ ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಬಾವಿಯ ನೀರನ್ನು ಎಷ್ಟು ಬಾರಿ ಮೋಟಾರ್ ಹಾಕಿ ಖಾಲಿ ಮಾಡಿದರೂ ಸಹ, ಮತ್ತೆ ಮತ್ತೆ ಡೀಸೆಲ್ ಜಿನುಗುತ್ತಿದ್ದು, ನೀರಿನೊಂದಿಗೆ ಡೀಸೆಲ್‌ನ ದಪ್ಪನೆಯ ಪದರ ಮೇಲೇಳುತ್ತಲೇ ಇದೆ. ಇದರಿಂದಾಗಿ ಕಾವೂರಿನ ನೀವಾಸಿಗಳಿಗೆ ಆತಂಕದ ಜೊತೆಗೆ ಕುಟುಂಬಗಳಿಗೆ ಕುಡಿಯುವ ನೀರು, ಮನೆ ಬಳಕೆ ನೀರಿಲ್ಲದಂತಾಗಿದೆ.
ಈ ಮೂರು ಮನೆಗಳ ಸಮೀಪದಲ್ಲೇ ಪೆಟ್ರೋಲ್ ಬಂಕ್ ಒಂದಿದ್ದು, ಅದರ ಅಂಡರ್‌ಗ್ರೌಂಡ್ ಟ್ಯಾಂಕ್‌ನಿಂದಲೇ ಡೀಸೆಲ್ ಲೀಕ್ ಆಗಿ ಅಂತರ್ಜಲ ಸೇರಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಸಿಬ್ಬಂದಿ, ನಮ್ಮ ಡೀಸೆಲ್ ಸ್ಟಾಕ್‌ನಲ್ಲಿ ಯಾವುದೇ ವ್ಯತ್ಯಾಸ ಬಂದಿಲ್ಲ, ಸೋರಿಕೆಯೂ ಆಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇತ್ತ ಬಾವಿ ನೀರು ಬಳಕೆಗೆ ಯೋಗ್ಯವಲ್ಲ ಎಂದು ವರದಿ ಬಂದಿದ್ದರೂ, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

