Latest

ಬನ್ನಿ ನಾವೆಲ್ಲಾ ಶ್ರೀಕೃಷ್ಣನ ಸಮಾನರಾಗೋಣ!

ವಿಶ್ವಾಸ  ಸೋಹೋನಿ

ಭಾರತ ದೇಶದಲ್ಲಿ ವಿವೇಕಾನಂದ ಜಯಂತಿ, ಮಹಾವೀರ ಜಯಂತಿ, ಬಸವ ಜಯಂತಿ – ಹೀಗೆ ಅನೇಕ ಧಾರ್ಮಿಕ ಮುಖಂಡರ ಜನ್ಮದಿನವನ್ನು ಆಚರಿಸಲಾಗುತ್ತದೆ. ಭಾರತೀಯರು ಶ್ರೀಕೃಷ್ಣನ ಜನ್ಮದಿನವನ್ನು ಭಾದ್ರಪದ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಪ್ರತಿವರ್ಷವು ವಿಜೃಂಭಣೆಯಿಂದ ಆಚರಿಸುತ್ತಾರೆ.

ಈ ಹಬ್ಬವನ್ನು ಕೃಷ್ಣಜನ್ಮಾಷ್ಟಮಿ, ಗೋಕುಲಾಷ್ಟಮಿ ಎಂದು ಕರೆಯುತ್ತಾರೆ. ಭಾರತದಲ್ಲಿ ವೃಂದಾವನ, ಮಥುರ, ದ್ವಾರಕ ಮತ್ತು ದೇಶ-ವಿದೇಶಗಳಲ್ಲಿ ಇರುವ ಕೃಷ್ಣ-ಮಂದಿರಗಳಲ್ಲಿ ಮುದ್ದು ಕೃಷ್ಣನ ಹುಟ್ಟು ಹಬ್ಬವನ್ನು ಭಕ್ತಿಭಾವ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ. ಅನೇಕ ಸ್ಥಳಗಳಲ್ಲಿ ಮೊಸರಿನ ಮಡಿಕೆಯನ್ನು ಹೊಡೆಯುವ ಸ್ಪರ್ಧೆಯನ್ನು ಇಟ್ಟಿರುತ್ತಾರೆ.
ಪ್ರತಿಯೊಬ್ಬರ ಮನೆಗಳಲ್ಲಿ ಶ್ರೀಕೃಷ್ಣನನ್ನು ಶೃಂಗಾರ ಮಾಡಿ, ತೊಟ್ಟಿಲಲ್ಲಿ ತೂಗಿ, ಮೃಷ್ಟಾನ್ನಗಳ ನೈವೇದ್ಯವನ್ನು ಅರ್ಪಣೆ ಮಾಡುತ್ತಾರೆ. ಜೀವನದಲ್ಲಿ ಸುಖ ಶಾಂತಿಗಾಗಿ ಅವನನ್ನು ಆಹ್ವಾನಿಸುತ್ತಾರೆ. ಇವುಗಳನ್ನು ನಾವು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ಇದು ಒಂದು ದಿನಕ್ಕೆ ಮಾತ್ರ ಸೀಮಿತವಾಗಿದೆ. ಮಾರನೆಯ ದಿನ ಪುನ: ನಮ್ಮ ಜೀವನಯಾತ್ರೆ ಎಂದಿನಂತೆ ಪ್ರಾರಂಭವಾಗುತ್ತದೆ. ಸಡಗರ ಸಂಭ್ರಮದಿಂದ ಮಾಡಿದ ಆಚರಣೆ ಮುಂದಿನ ಹಬ್ಬ ಬರುವವರೆಗೆ ನಿಂತು ಹೋಗುತ್ತದೆ. ನಾವು ಮಾಡುವ ಹಬ್ಬಗಳ ಆಚರಣೆಯು ನಮಗೆ ಖುಷಿ, ಉಲ್ಲಾಸ, ಉತ್ಸಾಹ, ಧ್ಯೆರ್ಯ, ಸಾಹಸವನ್ನು ನೀಡುತ್ತದೆ.

ವಿಶ್ವವು ಇಂದು ಕುರುಕ್ಷೇತ್ರವಾಗಿದೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಮಹಾಭಾರತ ಯುದ್ಧ ನಡೆಯುತ್ತ್ತಿದೆ. ನಾವೇ ಅರ್ಜುನರಾಗಿ ಶ್ರೇಷ್ಠ ಆಚರಣೆಯನ್ನು ಮತ್ತು ದೈವಿಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭವಸಾಗರವನ್ನು ಪಾರಮಾಡುವ ಅವಶ್ಯಕತೆ ಇದೆ.

ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ತತ್ವಜ್ಞಾನದ ಪ್ರಕಾರ ‘ಶ್ರೀಕೃಷ್ಣನ ಆಗಮನ ಭವಿಷ್ಯದಲ್ಲಿ ಆಗಲಿದೆ.” ಸಂಸ್ಥೆಯ ಸಂಸ್ಥಾಪಕ ದಾದಾ ಲೇಖರಾಜ (ಪಿತಾಶ್ರೀ ಬ್ರಹ್ಮಾ) ರವರನ್ನು ಸಾಕಾರದಲ್ಲಿ ಕಂಡಾಗ ಸಾವಿರಾರು ಸಾಧಕರಿಗೆ ಕೃಷ್ಣನ ಸಾಕ್ಷತ್ಕಾರವಾಗಿದೆ. ಇಲ್ಲಿಯ ಲಕ್ಷಾಂತರ ಅನುಯಾಯಿಗಳು ಪರಮಾತ್ಮನ ಸತ್ಯ ಪರಿಚಯ ತಿಳಿದುಕೊಂಡು ತಮ್ಮ ಜೀವನವನ್ನು ರಾಜಯೋಗದ ಮೂಲಕ ಸಾರ್ಥಕ ಮಾಡಿಕೊಂಡಿದ್ದಾರೆ. ಇದು ಕಲಿಯುಗದ ಅಂತಿಮ ಸಮಯವಾಗಿದೆ. ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆರಂಭದ ಸಂದಿಗ್ಧ ಕಾಲವೇ ಸಂಗಮಯುಗ. ಅದು ಈಗ ನಡೆಯುತ್ತಿದೆ. ಪ್ರತಿಯೊಬ್ಬ ಮಾನವನು ಸತ್ಯಯುಗದ ದೈವಿ-ಪದವಿಯನ್ನು ಪಡೆಯುವುದು ಅವನ ಜನ್ಮಸಿದ್ಧ ಅಧಿಕಾರವಾಗಿದೆ. ಆ ಅಧಿಕಾರವನ್ನು ಸ್ವಯಂ ನಿರಾಕಾರ ಪರಮಾತ್ಮನಿಂದ, ಈಶ್ವರೀಯ ವಿಶ್ವ ವಿದ್ಯಾಲಯದ ಮೂಲಕ ಕಲಿಸುವ ರಾಜಯೋಗದ ಅಭ್ಯಾಸದಿಂದ ಪಡೆಯಬಹುದು. ಪವಿತ್ರತೆ ಹಾಗೂ ದೈವಿಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ; ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರ ಮುಂತಾದ ಅಸುರಿ ಗುಣಗಳ ತ್ಯಾಗದಿಂದ ದೇವಿ-ದೇವತಾ ಪದವಿಯು ಪ್ರಾಪ್ತವಾಗುವುದು. ಆಗ ಮಾನವನು ದೇವಮಾನವನಾಗಿ ಸರ್ವಗುಣ ಸಂಪನ್ನ, ೧೬ ಕಲಾಸಂಪೂರ್ಣ, ಮರ್ಯಾದ ಪುರುಷೋತ್ತಮ, ಅಹಿಂಸಾ ಪರಮೋಧರ್ಮಿ, ಸಂಪೂರ್ಣ ನಿರ್ವಿಕಾರಿ ಆಗುವನು. ಕಂಸ, ಜರಾಸಂಧ ಮುಂತಾದ ರಾಕ್ಷಸರ ರಾಜ್ಯವಾದ ನರಕವೆಂಬ ಕಲಿಯುಗವು ಈಗ ನಡೆಯುತ್ತಿದೆ. ಸತ್ಯಯುಗವು ಈ ನರಕದ ಮಹಾವಿನಾಶದ ನಂತರ ಬರುವುದು. ಆ ಸ್ವರ್ಗದಲ್ಲಿ ಶ್ರೀರಾಧೆ ಮತ್ತು ಶ್ರೀಕೃಷ್ಣರ ರಾಜ್ಯವಿರುತ್ತದೆ.

ಸತ್ಯಯುಗಲ್ಲಿ ಮೊದಲನೆಯ ರಾಜಕುಮಾರ ಶ್ರೀಕೃಷ್ಣ. ಕೃಷ್ಣನನ್ನು ಸಮುದ್ರದ ಮಧ್ಯದಲ್ಲಿ ಆಲದ ಎಲೆಯಲ್ಲಿ ತೇಲಿ ಬರುವಂತೆ ತೋರಿಸುತ್ತಾರೆ. ಅದರ ಅರ್ಥವೇನೆಂದರೆ – ಭವಿಷ್ಯದಲ್ಲಿ ಸಂಭವಿಸುವ ಮಹಾವಿನಾಶದ ನಂತರ ಭೂಮಿಯು ಜಲಮಯವಾಗುತ್ತದೆ. ಯಾವ ವಿದೇಶಗಳು ಇರುವುದಿಲ್ಲ. ನಾವು ಇತಿಹಾಸದಲ್ಲಿ ಓದಿದಂತೆ ಅಮೇರಿಕಾ ಹಾಗೂ ಇತರೆ ರಾಷ್ಟ್ರಗಳನ್ನು ಕೊಲಂಬಸ್‌ನಂತಹ ಯಾತ್ರಿಕರು ಕಂಡು ಹಿಡಿದಿದ್ದಾರೆ. ವಿದೇಶಗಳು ಸತ್ಯಯುಗದಲ್ಲಿ ಇರುವುದಿಲ್ಲ. ಕೇವಲ ಭಾರತ ದೇಶ ಮಾತ್ರವು ಇರುತ್ತದೆ. ಅಂತರಿಕ್ಷದಿಂದ ನೋಡಿದಾಗ ಭಾರತವು ಆಲದ ಎಲೆಯಂತೆ ಕಾಣುತ್ತದೆ. ಸತ್ಯಯುಗದಲ್ಲಿ ಆತ್ಮವು ೮ ಜನ್ಮಗಳನ್ನು ತೆಗೆದುಕೊಳ್ಳುತ್ತದೆ. ರಾಧಾಕೃಷ್ಣರು ತಮ್ಮ ೩೫ನೇ ವಯಸ್ಸಿನಲ್ಲಿ ಸಿಂಹಾಸನಾಧೀಶರಾಗಿ ತಮ್ಮ ಹೆಸರನ್ನು ಲಕ್ಷ್ಮೀ-ನಾರಾಯಣರಾಗಿ ಪರಿವರ್ತನೆ ಮಾಡಿಕೊಂಡು ರಾಜ್ಯವನ್ನು ಆಳುತ್ತಾರೆ. ಅವರ ರಾಜ್ಯವಂಶದಲ್ಲಿ ಹತ್ತಿರದ ಸಂಬಂಧಿಕರು ೧೬೧೦೮ ಜನ ಇರುತ್ತಾರೆ. ಒಟ್ಟು ೯ ಲಕ್ಷ ಪ್ರಜೆಗಳೂ ಇರುತ್ತಾರೆ. ಅಲ್ಲಿ ಒಂದೇ ರಾಜ್ಯ, ಒಂದೇ ಭಾಷೆ ಇರುತ್ತದೆ. ಎಲ್ಲರೂ ಯೋಗಶಕ್ತಿಯಿಂದ ಜನ್ಮ ಪಡೆಯುತ್ತಾರೆ. ಲಕ್ಷ್ಮೀ-ನಾರಾಯಣರಿಗೆ ಯೋಗಬಲದಿಂದ ಒಂದು ಮಗು ಆಗುತ್ತದೆ. ಆ ಮಗುವಿಗೆ ೩೫ ವರ್ಷಗಳಾದ ನಂತರ ಪಟ್ಟಭಿಷೇಕ ಮಾಡಿ ರಾಜ್ಯ ಅಧಿಕಾರವನ್ನು ಕೊಡುತ್ತಾರೆ. ಈ ರೀತಿಯಲ್ಲಿ ೮ ಜನ ರಾಜಕುಮಾರರು ವಂಶಪಾರಂಪರ‍್ಯವಾಗಿ ರಾಜ್ಯಭಾರ ಮಾಡುತ್ತಾರೆ. ಆದ್ದರಿಂದ ಕೃಷ್ಣಜನ್ಮಾಷ್ಟಮಿ ಎಂದು ಹೇಳುತ್ತಾರೆ.

ಹಾಗಾದರೆ ಬನ್ನಿ ನಾವೆಲ್ಲರೂ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಕಲಿಸುವ ರಾಜಯೋಗವನ್ನು ಕಲಿತು ಶ್ರೀಕೃಷ್ಣನ ಬಗ್ಗೆ ಸಮರ್ಪಕ ಮಾಹಿತಿಯನ್ನು ಪಡೆದು, ಅವನ ಸಮಾನ ದೇವತೆರಾಗೋಣ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button